ಪ್ರತಿಭಟನೆಗೆ ಪಾಕ್ನಿಂದ ಶಸ್ತ್ರಾಸ್ತ್ರ ಪೂರೈಕೆ: ಸ್ಫೋಟಕ ಮಾಹಿತಿ ನೀಡಿದ ಪಂಜಾಬ್ ಸಿಎಂ
ಚಂಡೀಗಢ: ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ರೈತರ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ, ಆನಂತರ ದೆಹಲಿಯಲ್ಲಿ ನಡೆದಿರುವ ಹಿಂಸಾಚಾರ, ಬಾಂಬ್ಸ್ಫೋಟ ಎಲ್ಲವನ್ನೂ ತಾಳೆಹಾಕಿ ನೋಡಿದಾಗ ಇದರ ಹಿಂದಿರುವ ಶಕ್ತಿ ಯಾವುದು ಇರಬಹುದು ಎಂದು ಎಲ್ಲೆಡೆ ಲೆಕ್ಕಾಚಾರ ಶುರುವಾಗಿದೆ. ಈ ನಡುವೆಯೇ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸ್ಫೋಟಕ ಮಾಹಿತಿಯನ್ನು ನೀಡಿದ್ದಾರೆ.
ಹಿಂಸಾಚಾರದಲ್ಲಿ ರೈತರು ಭಾಗಿಯಾಗಿದ್ದಾರೆ ಎನ್ನುವುದನ್ನು ನಾನು ನಂಬುವುದಿಲ್ಲ. ತನಿಖಾ ಸಂಸ್ಥೆಗಳು ಸರಿಯಾಗಿ ತನಿಖೆ ನಡೆಸಿ, ಕೃತ್ಯ ನಡೆಸಿದವರಿಗೆ ಶಿಕ್ಷೆ ನೀಡಬೇಕು ಎಂದು ದೆಹಲಿ ಹಿಂಸಾಚಾರದ ನಂತರ ಸಿಂಗ್ ಅವರು ಪ್ರತಿಕ್ರಿಯೆ ನೀಡಿದ್ದರು. ಗಣರಾಜ್ಯೋತ್ಸದ ದಿನ ನಡೆದ ಘಟನೆ ಯಾವುದೇ ಭಾರತೀಯ ಹೆಮ್ಮೆಯಿಂದ ಹೇಳಿಕೊಳ್ಳುವಂಥದ್ದು ಅಲ್ಲ. ಕೆಂಪುಕೋಟೆ ನಮ್ಮ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಸಂಕೇತ. ಆ ದಿನ ನಡೆದ ಕೃತ್ಯ ನೋಡಿ ನನಗೆ ಬೇಸರವಾಗಿತ್ತು ಎಂದು ಅವರು ನೋವು ತೋಡಿಕೊಂಡಿದ್ದರು.
ಇದರ ಬೆನ್ನಲ್ಲೇ ಇದೀಗ ಆತಂಕಕಾರಿ ವಿಷಯವನ್ನು ಮುಖ್ಯಮಂತ್ರಿ ಸಿಂಗ್ ಬಹಿರಂಗಪಡಿಸಿದ್ದಾರೆ. ರೈತರು ಪ್ರತಿಭಟನೆ ಶುರು ಮಾಡಿದ ಆರಂಭದಿಂದ ಅಂದರೆ ಅಕ್ಟೋಬರ್ ತಿಂಗಳಿನಿಂದಲೇ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳು ಬರುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ರೈತರ ಹೆಸರಿನಲ್ಲಿ ಉಗ್ರ ಶಕ್ತಿಗಳು ಹಿಂಸೆಯನ್ನು ಸೃಷ್ಟಿಮಾಡಲು ಹೊಂಚು ಹಾಕಿರುವ ಬಗ್ಗೆ ಕೇಂದ್ರವನ್ನು ಎಚ್ಚರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಪಾಕಿಸ್ತಾನವು ಡ್ರೋಣ್ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿದೆ ಮತ್ತು ಒಳನುಸುಳುವಿಕೆಗೆ ಸಹ ಪ್ರಯತ್ನಿಸುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಪ್ರತಿಭಟನೆಗೆ ಹಣದ ಹರಿವು ವಿದೇಶಗಳಿಂದ ಬರುತ್ತಿದೆ ಎಂಬುದಾಗಿ ಇದಾಗಲೇ ಹಲವಾರು ತನಿಖಾ ಸಂಸ್ಥೆಗಳು ವರದಿ ನೀಡಿರುವ ಬೆನ್ನಲ್ಲೇ ಇದೀಗ ಖುದ್ದು ಪಂಜಾಬ್ ಮುಖ್ಯಮಂತ್ರಿಗಳೇ ಈ ಮಾಹಿತಿ ನೀಡಿರುವುದು ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಿಚ್ಚಿಡುವಂತಾಗಿದೆ.
ಗಡಿ ಪ್ರದೇಶಗಳಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಲು ಅತ್ತ ಚೀನಾ, ಇತ್ತ ಪಾಕಿಸ್ತಾನ ರೆಡಿಯಾಗಿ ನಿಂತಿವೆ. ಪಾಕಿಸ್ತಾನದಿಂದ ಡ್ರೋಣ್ಗಳು ಬರುತ್ತಿರುವುದು ಹೆಚ್ಚಾಗಿವೆ. ಈ ಬಗ್ಗೆ ಹಿಂದೆಯೂ ನಾನು ಕೇಂದ್ರವನ್ನು ಎಚ್ಚರಿಸಿದ್ದೆ. ಪ್ರತಿಭಟನೆ ಶುರುವಾದಾಗಿನಿಂದಲೂ ಡ್ರೋಣ್ ಚಟುವಟಿಕೆ ಹೆಚ್ಚಾಗಿದೆ. ಇದು ಅತ್ಯಂತ ಕಳವಳಕಾರಿಯಾದ ವಿಷಯವಾಗಿದೆ. ಈ ಬಗ್ಗೆ ಇನ್ನಾದರೂ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸಬೇಕಿದೆ ಎಂದು ಹೇಳಿದ್ದಾರೆ.
ಮಾಸ್ಕ್ ಹಾಕಿಕೊಂಡು ದಾಳಿ ನಡೆಸಿದವರನ್ನು ಪತ್ತೆ ಮಾಡಬೇಕು. ಅವರು ಎಲ್ಲಿಂದ ಬಂದಿದ್ದಾರೆ ಎನ್ನುವುದನ್ನು ಪತ್ತೆ ಮಾಡಬೇಕು. ಸ್ಥಳೀಯರು ರೈತರ ವಿರುದ್ಧ ಈ ರೀತಿ ವರ್ತನೆ ಮಾಡಿದ್ದಾರೆ ಎನ್ನುವುದನ್ನು ನಾನು ನಂಬುವುದಿಲ್ಲ. ರೈತರ ಪ್ರತಿಭಟನೆಯ ದಿಕ್ಕು ತಪ್ಪಿಸಲು ಕೆಲ ಉದ್ರಿಕ್ತರನ್ನು ಬೇರೆ ಕಡೆಯಿಂದ ಕರೆಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು. ಅಲ್ಲದೇ ಪಾಕಿಸ್ತಾನ ಬಯಸಿದಂತೆ ಸಿಂಘೂ ಗಡಿಯಲ್ಲಿ ನಡೆಯುತ್ತಿದೆ ಹಾಗೂ ನಡೆದಿದೆ. ಪಂಜಾಬ್ನ ಶಾಂತಿ ಕದಡಲು ಪಾಕಿಸ್ತಾನ ಶ್ರಮಿಸುತ್ತಿರುವ ಬಗ್ಗೆ ಮಾಹಿತಿ ಇದ್ದಾಗ್ಯೂ ಘಟನೆ ನಡೆದಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
0 التعليقات: