Saturday, 30 January 2021

ರೈತರ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರದಿಂದ ಗೂಂಡಾಗಳ ಬಳಕೆ: ಸಿದ್ದರಾಮಯ್ಯ


ರೈತರ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರದಿಂದ ಗೂಂಡಾಗಳ ಬಳಕೆ: ಸಿದ್ದರಾಮಯ್ಯ


ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲು ಗೂಂಡಾಗಳನ್ನು ಬಳಸುತ್ತಿರುವ ಕೇಂದ್ರ ಸರ್ಕಾರದ ವರ್ತನೆ ನಾಚಿಕೆಗೇಡು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ವಿವಿಧ ಸಂಘಟನೆಗಳು ನಡೆಸಿದ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ಇಂತಹ ವರ್ತನೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಚಿಕೆ ಆಗುವುದಿಲ್ಲವೇ ? ಎಂದು ಖಾರವಾಗಿ ಪ್ರಶ್ನಿಸಿದರು.


ತಪ್ಪು ಮಾಡುವವರನ್ನು ಜನ ಸಹಿಸುವುದಿಲ್ಲ. ಪದೇ ಪದೇ ಜನರನ್ನು ದಾರಿ ತಪ್ಪಿಸಲು ಆಗದು. ಕಾನೂನು ವಾಪಸ್ ಪಡೆಯುವ ವರೆಗೆ ಹೋರಾಟ ನಿಲ್ಲಿಸುವುದಿಲ್ಲ. ಸರ್ವಾಧಿಕಾರಿ ಹಿಟ್ಲರ್ ಕಥೆ ಕೊನೆಗೆ ಏನಾಯಿತು ಎಂಬುದನ್ನು ಪ್ರಧಾನಿಯವರು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಕುಟುಕಿದರು.

ಕೃಷಿ, ಹೈನುಗಾರಿಕೆ ಮತ್ತು ರೈತರನ್ನು ನಾಶ ಮಾಡುವ ಕಾಯಿದೆಗಳನ್ನು ಜಾರಿಗೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿವೆ. ಬಂಡವಾಳಶಾಹಿಗಳ ಕುಮ್ಮಕ್ಕು ಇದಕ್ಕೆ ಕಾರಣ. ಅವರು ಹೇಳಿದಂತೆ ಕೇಳುವವರು ಪ್ರಧಾನಿ ನರೇಂದ್ರ ಮೋದಿ. ದೇಶದ ಜಿಡಿಪಿ ಬೆಳವಣಿಗೆ ಕುಸಿಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಿಸಿದಿದ್ದಾದರೂ ಏನು ? ರೈತರಿಗೆ ಮಾರಕವಾದ ಕರಾಳ ಶಾಸನಗಳನ್ನು ಅವರು ಜಾರಿಗೆ ತರುತ್ತಿದ್ದಾರೆ. ಎಪಿಎಂಸಿಗಳನ್ನು ಮುಚ್ಚಿ ಮಾರುಕಟ್ಟೆಗಳನ್ನು ಆರಂಭಿಸಲು ಖಾಸಗಿಯವರಿಗೆ ಅವಕಾಶ ನೀಡಬೇಕೆಂತೆ. ಮಾರುಕಟ್ಟೆ ಖಾಸಗಿಯವರ ಪಾಲಾದರೆ ಅವರೇ ನಿಯಂತ್ರಣ ಮಾಡುತ್ತಾರೆ. ಆಗ ರೈತರು ಬೆಳೆದ ಬೆಳೆಗಳಿಗೆ ಸ್ಪರ್ಧಾತ್ಮಕ ಬೆಲೆಯೂ ಸಿಗುವುದಿಲ್ಲ. ಇಂಥ ಕಾಯಿದೆ, ಕಾನೂನು ಒಪ್ಪಬೇಕು ಎಂದು ಹೇಳುವುದು ಯಾವ ನ್ಯಾಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮಹಾತ್ಮ ಗಾಂಧಿಯವರು ಹಿಂದೂ ಅಲ್ಲವೇ ? ನಾವು ಮತ್ತು ಎಲ್ಲರೂ ಅನುಸರಿಸುವುದು ಗಾಂಧಿಯವರು ಪ್ರತಿಪಾದಿಸಿದ ಹಿಂದುತ್ವ. ಆದರೆ, ಬಿಜೆಪಿಯವರು ಹೇಳುವುದು ಸಾವರ್ಕರ್ ಅವರ ಹಿಂದುತ್ವ. ನಾವು ಭಾರತೀಯವರು. ಇಲ್ಲಿ ಹಿಂದೂ, ಮುಸ್ಲಿಂ ಎಂಬ ಪ್ರಶ್ನೆ ಬರುವುದಿಲ್ಲ. ದೇಶದಲ್ಲಿ 280 ಮಿಲಿಯನ್ ಟನ್ ಆಹಾರ ಉತ್ಪಾದನೆಯಾಗುತ್ತಿದೆ. ಆರ್ ಎಸ್ ಆರ್ ನವರು ಅದನ್ನು ಉತ್ಪಾದನೆ ಮಾಡುತ್ತಿದ್ದಾರಾ ? ಅವರು ನೇಗಿಲೇ ಹಿಡಿದಿಲ್ಲ. ಈಗ ಗೋ ಹತ್ಯೆ ನಿಷೇಧ ಕಾಯಿದೆಯ ಜಪ ಮಾಡುತ್ತಿದ್ದಾರೆ. ಹಾಗಾದರೆ ವಯಸ್ಸಾದ ರಾಸುಗಳನ್ನು ರೈತರು ಏನು ಮಾಡಬೇಕು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ವಿದೇಶದಿಂದ ಬರುವ ಗೋಮಾಂಸ ಸೇವಿಸಬಹುದಂತೆ. ಗೋವಾ, ಕೇರಳದಲ್ಲಿ ತಿನ್ನಬಹುದಂತೆ. ಕರ್ನಾಟಕದಲ್ಲಿ ಮಾತ್ರ ಗೋಮಾತೆಯಂತೆ. ಏಕೆ ವಿದೇಶದಲ್ಲಿರುವ ಹಸುಗಳು, ಹೊರ ರಾಜ್ಯದಲ್ಲಿರುವ ರಾಸುಗಳು ಗೋಮಾತೆ ಅಲ್ಲವೇ ? ಎಂದು ಪ್ರಶ್ನಿಸಿದರು.

ತ್ಯಾಗ, ಬಲಿದಾನದಿಂದ ಸಿಕ್ಕಿರುವ ಸ್ವಾತಂತ್ರ್ಯವನ್ನು ನಾವು ಉಳಿಸಿಕೊಂಡು ಹೋಗಬೇಕು. ದೇಶದ ಜನತೆ ಒಗ್ಗಟ್ಟಾಗಿ ಇದ್ದಾಗ ಮಾತ್ರ ಅದು ಸಾಧ್ಯ. ಗಾಂಧಿಯವರು ಸೌಹಾರ್ದತೆ ಮತ್ತು ಸಾಮರಸ್ಯ ಇರಬೇಕು ಎಂದು ಹೋರಾಟ ಮಾಡಿ ಪ್ರಾಣ ಕಳೆದುಕೊಂಡರು. ಆ ಉದ್ದೇಶ ಈಡೇರಿಲ್ಲ. ಮತ್ತೊಂದು ಧರ್ಮದ ಬಗ್ಗೆ ಸಹಿಷ್ಣುತೆ ಇರಬೇಕು ಎಂದು ಸಂವಿಧಾನ ಹೇಳುತ್ತದೆ. ಸಮಾನತೆ, ಸಮ ಸಮಾಜದ ನಿರ್ಮಾಣದ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಿದೆ. ಹೀಗಾಗಿಯೇ ಆರ್ ಎಸ್ ಎಸ್ ನವರು ಸಂವಿಧಾನವನ್ನು ವಿರೋಧಿಸುತ್ತಾರೆ. ಅವರಿಗೆ ಸಮ ಸಮಾಜದಲ್ಲಿ ನಂಬಿಕೆ ಇಲ್ಲ. ದೇಶ ಆಹಾರದಲ್ಲಿ ಸ್ವಾವಲಂಬನೆ ಸಾಧಿಸಿದ್ದರೆ ಅದಕ್ಕೆ ರೈತರು ಕಾರಣ. ಅಂತಹ ರೈತರ ಬಾಳು ಹಾಳು ಮಾಡಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಟೀಕಿಸಿದರು.

ರೈತ ಸಂಘಟನೆಗಳ ಮುಖಂಡರಾದ ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ, ಚಾಮರಸ ಮಾಲಿ ಪಾಟೀಲ್, ಸಿಪಿಐಎಂನ ನಾಗರಾಜ್, ಜನವಾದಿ ಮಹಿಳಾ ಸಂಘಟನೆಯ ವಿಮಲಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.SHARE THIS

Author:

0 التعليقات: