Saturday, 23 January 2021

ತಾಳ್ಮೆ ಹಾಗೂ ವಿನಯದ ಪ್ರತೀಕ, ನನ್ನ ಶೈಖುನಾ ಬೆಳ್ಳಿಪ್ಪಾಡಿ ಉಸ್ತಾದ್


 ತಾಳ್ಮೆ ಹಾಗೂ ವಿನಯದ ಪ್ರತೀಕ, ನನ್ನ ಶೈಖುನಾ ಬೆಳ್ಳಿಪ್ಪಾಡಿ ಉಸ್ತಾದ್ 

ಶೈಖುನಾ ಬೆಳ್ಳಿಪ್ಪಾಡಿ ಉಸ್ತಾದ್!!! ಬಹುಶಃ ಉಸ್ತಾದರು ಕೇರಳ ಕರ್ನಾಟಕವನ್ನು ಆವರಿಸಿದ ಕರಾವಳಿ ಪ್ರದೇಶದ ಸರ್ವಸತ್ಯ ವಿಶ್ವಾಸಿಗಳ ಹೃದಯಾಂತರಾಳದಲ್ಲಿ ಸುಪರಿಚಿತ ವ್ಯಕ್ತಿಯಾಗಿದ್ದಾರೆ.ಶೈಖುನಾ ಉಸ್ತಾದರು ಸಹಸ್ರಾರು ವರ್ಷಗಳ ಕಾಲ ಧಾರ್ಮಿಕ ವಿದ್ಯಾಭ್ಯಾಸವನ್ನು ಸಮುದಾಯಕ್ಕೆ ನೀಡಿ ಹಲವಾರು ಶಿಷ್ಯ ವೃಂದವನ್ನು ಸೃಷ್ಟಿಸಿದರು ಎಂಬುದಕ್ಕೆ ಮಿಗಿಲಾಗಿ ಜೀವನದಲ್ಲಿ ಒಬ್ಬ ಗುರುವರ್ಯನಾಗಿ ಯಾವ ರೂಪದಲ್ಲಿ ತಾಳ್ಮೆ ಹಾಗೂ ವಿನಯವಂತಿಕೆ ತೋರಿಸಬೇಕೆಂದು ತನ್ನ ಜೀವನದಲ್ಲೂ ಇತರರಿಗೂ ಮಾದರಿಯಾದ ವಿದ್ವಾಂಸರಾಗಿದ್ದರು. ಅದು ಅವರ ಬಳಿ ತಲುಪಿದ ಸರ್ವ ವ್ಯಕ್ತಿಗಳಿಗೂ ತಿಳಿದ ವಿಷಯವಾಗಿದೆ.ಇನ್ನು ವಿಷಯಕ್ಕೆ ಬರೋಣ...

        1944ನೇ ಇಸವಿಯಲ್ಲಿ ಗೌರವಾನ್ವಿತರಾದ ಮುಹಮ್ಮದ್ ಹಾಜಿ ಹಾಗೂ ಝುಲೈಕ ಎಂಬ ದಂಪತಿಗಳ ಸುಂದರ  ದಾಂಪತ್ಯ ಜೀವನದಲ್ಲಿ ಜನಿಸಿ ಬಂದ ಸುಪುತ್ರರಾಗಿದ್ದಾರೆ ನಮ್ಮ ಶೈಖುನಾ ಬೆಳ್ಳಿಪ್ಪಾಡಿ ಉಸ್ತಾದರು!ಉಸ್ತಾದರ ತಂದೆ ಊರಿನಲ್ಲಿ ಪ್ರಸಿದ್ಧರಾದರಾದ ಕೃಷಿಕರಾಗಿದ್ದರು. ತಂದೆಯವರ ಎಂಟು ಮಕ್ಕಳಲ್ಲಿ ಪ್ರಥಮ ಪುತ್ರನಾಗಿದ್ದರು ಶೈಖುನಾ ಬೆಳ್ಳಿಪ್ಪಾಡಿ ಉಸ್ತಾದರು! ಉಸ್ತಾದರು ಪ್ರಥಮವಾಗಿ ಉನ್ನತ ವಿದ್ವಾಂಸರಾದ ಬೋರ್ಕ ಅಬ್ದುಲ್ಲ ಉಸ್ತಾದರಿಂದ ಕುರ್ಆನ್ ಕಲಿತರು.ಕುರ್ಆನ್ ಕಲಿಕೆ 6 ವರ್ಷ ಮುಂದುವರೆಯಿತು. ಧೀರ್ಘವಾದ ದರ್ಸ್ ವಿಧ್ಯಾಭ್ಯಾಸದ ನಂತರ 1971 ರಲ್ಲಿ ಫೈಝಿ ಬಿರುದುದಾರಿಯಾಗಿ ಕರ್ಮರಂಗಕ್ಕಿಳಿದರು.ಶೈಖುನಾ ಉಸ್ತಾದರು ಮುತಅಲ್ಲಿಮರಿಗೆ ದರ್ಸ್ ಹೇಳಿಕೊಡುವುದಕ್ಕೆ ಹೆಚ್ಚು ಪ್ರೋತ್ಸಾಹವನ್ನು ಅಂದಿನಿಂದಲೇ ನೀಡಲಾರಂಭಿಸಿದರು.ಉಸ್ತಾದರ ಮನಸ್ಸಿನ ಇಚ್ಛೆಯಂತೆಯೇ ಅಂದಿನ ಖ್ಯಾತ ವಿದ್ವಾಂಸರಾದ ಅಡ್ಯಾರ್ ಕಣ್ಣೂರು ಮುಹಮ್ಮದ್ ಹಾಜಿ ಹಾಗೂ ಅಲಿಕುಂಞಿ ಉಸ್ತಾದರ ನಿರ್ದೇಶನದ ಮೇರೆಗೆ ಉಪ್ಪಿನಂಗಡಿ ಟೌನ್ ಜುಮಾ ಮಸೀದಿಯಲ್ಲಿ ಪ್ರಥಮವಾಗಿ ದರ್ಸ್ ವ್ಯವಸ್ಥೆ ಆರಂಭಿಸಿದರು.ಪ್ರಪ್ರಥಮವಾಗಿ ದರ್ಸಿನಲ್ಲಿ ಕೇವಲ 30  ವಿದ್ಯಾರ್ಥಿಗಳಿದ್ದರು. ತದನಂತರ ನೂರರಷ್ಟು ‌ಮುತಅಲ್ಲಿಮರು ಕಲಿಯುವ ಜಿಲ್ಲೆಯ ಪ್ರತಿಷ್ಠಿತ ದರ್ಸ್ ಆಗಿ ಬದಲಾಯಿತು.ತದನಂತರ ಉಸ್ತಾದರು ಇಂದಿನ ಸುಳ್ಯ ಟೌನ್ ಜುಮಾ ಮಸೀದಿಯಲ್ಲಿ 9 ವರ್ಷಗಳ ಕಾಲ ನಿರಂತರವಾಗಿ ದರ್ಸ್ ನಡೆಸಿದರು.ನಂತರ ಕಾಸರಗೋಡು ಜಿಲ್ಲೆಯ ಪೆರ್ಲ ಪರಿಸರದಲ್ಲಿರುವ ಮರ್ತ್ಯ (ಇಂದು ಬಹು! ರಫೀಕ್ ಸಅದಿ ಉಸ್ತಾದರು ದರ್ಸ್ ನಡೆಸುವ ಸ್ಥಳ) ಎಂಬ ಊರಿನಲ್ಲಿ ಸತತ 20 ವರ್ಷಗಳ ಕಾಲ ದರ್ಸ್ ಸೇವೆಗೈದರು.ತದನಂತರವಾಗಿತ್ತು ಉಸ್ತಾದರು ಕುಂಬೋಳ್ ತಲುಪುವುದು.ಸಾದಾತ್ ಮನೆತನಗಳಿಂದ ಪ್ರಸಿದ್ದವಾದ ಕುಂಬೋಳಿನಲ್ಲಿ 3 ವರ್ಷಗಳ ಕಾಲ ದರ್ಸ್ ನಡೆಸಿದ ಶೈಖುನಾರವರು ತನ್ನ ದರ್ಸಿ ರಂಗದ ಕೊನೆಯ 12 ವರ್ಷಗಳನ್ನು ಪೂರ್ತಿಗೊಳಿಸುವ ಸಲುವಾಗಿ ತಂಙಳುಸ್ತಾದರ ಕನಸಿನ ಕೂಸು ಪುಣ್ಯ ಮುಹಿಮ್ಮಾತಿಗೆ ತಲುಪಿದರು.ಅಲ್ಹಂದುಲಿಲ್ಲಾಹ್!!!

            ಮುಹಿಮ್ಮಾತಿನಲ್ಲಿ ಉಸ್ತಾದರಿಗೆ ಹಲವು ಹಿಮಮಿಗಳಾದ ಶಿಷ್ಯಂದಿರನ್ನು ಸಮುದಾಯಕ್ಕೆ ಸಮರ್ಪಿಸಿಲು ಸಾಧ್ಯವಾಯಿತು.ಅಲ್ಲದೆ ಉಸ್ತಾದರ ಇನ್ನಿತರ ದರ್ಸ್ ಗಳಿಂದ ಹಲವಾರು ಶಿಷ್ಯಂದಿರು ಸಮೂಹದ ಅತ್ಯುನ್ನತ ವಲಯಗಳಲ್ಲಿ ಮಿಂಚುತ್ತಿದ್ದಾರೆ.ಉಸ್ತಾದರನ್ನು ಮುಹಿಮ್ಮಾತಿಗೆ ತಲುಪಿಸಿರುವುದು ತಂಙಳುಸ್ತಾದರೊಂದಿಗಿನ ಆದಮ್ಯವಾದ ಸ್ನೇಹ ಹಾಗೂ ಗೌರವಗಳಾಗಿವೆ. ತ್ವಾಹಿರುಲ್ ಅಹ್ದಲ್ ತಂಙಳುಸ್ತಾದರಿಗೆ ಜಾಮಿಯಾ ನೂರಿಯಾ ಅರೆಬಿಕ್ ಕಾಲೇಜಿನಲ್ಲೇ ಆರಂಭವಾದ ಪ್ರೀತಿಯಾಗಿತ್ತು ಶೈಖುನಾ ಬೆಳ್ಳಿಪ್ಪಾಡಿ ಉಸ್ತಾದರನ್ನು ಮುಹಿಮ್ಮಾತ್ ತಲುಪುವಂತೆ ಮಾಡಿರುವುದು ಮುಹಿಮ್ಮಾತ್ ವಿದ್ಯಾರ್ಥಿ ಯಾಗಿ ಕಲಿತ ನನಗೆ ಉಸ್ತಾದರ ಕುರಿತು ಹಲವಾರು ಅನುಭವಗಳಿವೆ.ಉಸ್ತಾದರ ಕೊಠಡಿಯೊಳಗೆ ಎಷ್ಟೇ ದೊಡ್ಡ ವ್ಯಕ್ತಿ ಬಂದರೂ ಎಷ್ಟೇ ಕಿರಿಯ ವ್ಯಕ್ತಿ ಅಥವಾ ಒಬ್ಬ ಮುತಅಲ್ಲಿಮ್ ಆದರೂ ಉಸ್ತಾದರು ಎಲ್ಲರನ್ನು ಒಂದೇ ರೂಪದಲ್ಲಿ ಕಾಣುತ್ತಿದ್ದರು.ಅತ್ಯಂತ ವಿನಯದೊಂದಿಗೆ ಅವರ ಮುಂದೆ ಕುಳಿತು ತಾನೊಬ್ಬ ಉಸ್ತಾದ್ ಎಂಬ ದೊಡ್ಡಸ್ಥಿಕೆ ತೋರಿಸದೆ ಅವರೊಂದಿಗೆ ಕುಶಲೋಪರಿ ಹಾಗೂ ದೀರ್ಘವಾದ ಮಾತುಗಳಲ್ಲಿ ತೊಡಗುತ್ತಿದ್ದರು.ಇದು ಬೆಳ್ಳಿಪ್ಪಾಡಿ ಉಸ್ತಾದರೊಂದಿಗೆ ಗೆಳೆತನವನ್ನು ಬೆಳೆಸಿಕೊಂಡ ಹಲವು ಉಸ್ತಾದರುಗಳು ಹಾಗೂ ಜನಸಾಮಾನ್ಯರ ಅನುಭವಗಳಾಗಿವೆ. ಮುಹಿಮ್ಮಾತ್ ಅಗದಿ ಮಂದಿರದಲ್ಲಿ ಕಲಿಯುತ್ತಿರುವ ವೇಳೆ ನಮ್ಮ ವಸ್ತ್ರಗಳು ಒಗೆಯುವ ಸ್ಥಳ ಬೆಳ್ಳಿಪ್ಪಾಡಿ ಉಸ್ತಾದರ ಕೊಠಡಿಯ ಸಮೀಪವಾಗಿತ್ತು. ಕೆಲವೊಮ್ಮೆ ಉಸ್ತಾದರು ಅವರ ಪುಣ್ಯ ಶರೀರದ ಮೇಲೆ ಹಾಸುವ ಆ ಪವಿತ್ರವಾದ ಹಸಿರು ಶಾಲನ್ನು ನಮಗೆ ಒಗೆಯಲು ಕೊಡುತ್ತಿದ್ದರು. ನಾನು ಅದನ್ನು ಅತ್ಯಂತ ಪಾವಿತ್ರತೆಯೊಂದಿಗೆ ಒಗೆದು ಕೊಡುತ್ತಿದ್ದಾಗ ಸಂತೋಷದೊಂದಿಗೆ ಉಸ್ತಾದ್ ಅದನ್ನು ಸ್ವೀಕರಿಸುತ್ತಿದ್ದರು.ಇದೇ ನೆನಪಿನೊಂದಿಗೆ ಉಸ್ತಾದರು ಇತ್ತೀಚೆಗೆ ಕೊನೆಯ ವರ್ಷದ ಮುಹಿಮ್ಮಾತಿನ ಉಸ್ತಾದರ ತರಗತಿಯಲ್ಲಿ ನನ್ನನ್ನು ಗುರುತು ಹಿಡಿದು ಅಂದಿನ ವಿಷಯಗಳನ್ನು ಮಗದೊಮ್ಮೆ ನೆನಪಿಸಿದರು.

           ಉಸ್ತಾದರ ಧಾರ್ಮಿಕ ವಿದ್ಯೆ ಅಪಾರವಾಗಿತ್ತು. ಅದು ಅವರ ತರಗತಿಗಳಲ್ಲಿ ಭಾಗವಹಿಸಿದ ಎಲ್ಲಾ ಶಿಷ್ಯಂದಿರು ಒತ್ತಿಹೇಳುವ  ವಿಷಯವಾಗಿದೆ.ಕಾರಣವೇನೆಂದರೆ ಅರಬೀ ಗ್ರಂಥಗಳಲ್ಲಿ ಉತ್ತಮವಾಗಿ ಕಲಿಯಬೇಕಾದ ಅರಬಿ ವ್ಯಾಕರಣಗಳನ್ನು ಅತ್ಯಂತ ಸಲೀಸಾಗಿ ಹಾಗೂ ಲೀಲಾಜಾಲವಾಗಿ ವಿವರಿಸುತ್ತಿದ್ದರು. ಅಷ್ಟೊಂದು ಪ್ರಖಾಂಡ ವಿದ್ವಾಂಸರಾಗಿದ್ದರು ಅವರು.ಆದ್ದರಿಂದಲೇ ಅವರ ಜ್ಞಾನದ ಆಳವನ್ನು ತಿಳಿದ ವಿದ್ವಾಂಸರು ಬೆಳ್ಳಿಪ್ಪಾಡಿ ಉಸ್ತಾದರನ್ನು ಕಾಸರಗೋಡು ಜಿಲ್ಲಾ ಮುಶಾವರದ ಉಪಾಧ್ಯಕ್ಷರಾಗಿ ಆರಿಸಿರುವುದು.ಹಳೆಯ ಕಾಲದಲ್ಲಿ ಅವರ ಭಾಷಣಗಳು ಎಂಥಹ ಜನಸಾಮಾನ್ಯರ ಹಾಗೂ ಉಸ್ತಾದರುಗಳ ಮನಸ್ಸುಗಳನ್ನು ಚಿಂತನಾ ಲೋಕಕ್ಕೆ ಕೊಂಡೊಯ್ಯುತ್ತಿತ್ತು. ಅಷ್ಟೊಂದು ಆಲೋಚಿಸಬೇಕಾದ ಮಾತುಗಳಾಗಿತ್ತು ಅವರ ಭಾಷಣದಲ್ಲಿ ನನಗೆ ಕೇಳಲು ಸಾಧ್ಯವಾಗಿರುವುದು.ಅವರ ಸರ್ವ ಭಾಷಣದಲ್ಲಿ ತ್ವಾಹಿರುಲ್ ಅಹ್ದಲ್ ತಂಙಳುಸ್ತಾದರ ಕುರಿತು ಆ ಮಹಾನುಭಾವರಿಬ್ಬರೂ ಕಲಿತು ಬೆಳೆದ "ಪಟ್ಟಿಕ್ಕಾಡ್" ಸಂಸ್ಥೆಯ ಕುರಿತು ಹೇಳದ  ಭಾಷಣಗಳಿರಲಿಲ್ಲ.ತಂಙಳುಸ್ತಾದರ ವಫಾತ್ ನಂತರವೂ ಬೆಳ್ಳಿಪ್ಪಾಡಿ ಉಸ್ತಾದರು ತಂಙಳುಸ್ತಾದರ ಮಖಾಂ ಝಿಯಾರತ್ ನಡೆಸುತ್ತಿದ್ದರು. ಅದೇ ರೀತಿ ತಂಙಳುಸ್ತಾದರ ಸಮೀಪದಲ್ಲೇ  ವಿಶ್ರಾಂತಿ ಪಡೆಯುತ್ತಿರುವಂತಹ ತನ್ನ ಪ್ರೀತಿಯ ಶಿಷ್ಯನಾದ ಮುಹಿಮ್ಮಾತಿನ ಸಕ್ರೀಯ ಕಾರ್ಯಕರ್ತರಾಗಿದ್ದ ಬಹು!ಇಝ್ಝುದ್ದೀನ್ ಸಖಾಫಿ ಉಸ್ತಾದರನ್ನು ಝಿಯಾರತ್ ಮಾಡುತ್ತಿದ್ದರು.ಝಿಯಾರತ್ ಮುಗಿದು ಬರುವಾಗ ಉಸ್ತಾದರಿಗೆ ಸುಬುಹಿ ನಮಾಜಿಗಾಗಿ ಬರುವ ನಮ್ಮನ್ನು ಕಾಣುತ್ತಿತ್ತು.ಅದಾಗಲೇ ಉಸ್ತಾದರು ನಮ್ಮೊಂದಿಗೆ ಕುಂಬೋಳ್ ಕುಟುಂಬದ ಸಾದಾತುಗಳಿಗೆ ಫಾತಿಹಾ,ಇಖ್ಲಾಸ್,ಮುಅವ್ವಿಝತೈನಿ ಓದಿ ಹದಿಯಾ ಮಾಡಬೇಕೆಂದು ಹೇಳುತ್ತಿದ್ದರು. ಇವೆಲ್ಲವೂ ಮುಹಿಮ್ಮಾತ್ ಜೀವನದಲ್ಲಿ ಬೆಳ್ಳಿಪ್ಪಾಡಿ ಉಸ್ತಾದರ ಕುರಿತು ಕಣ್ತುಂಬಿಸಿದ ಅನುಭವಗಳಾಗಿವೆ.

      ಉಸ್ತಾದರು ಪ್ರಥಮವಾಗಿ ಹಜ್ಜ್ ನಿರ್ವಹಿಸಿರುವುದು  1977 ರಲ್ಲಾಗಿತ್ತು. ಹಡಗಿನ ಮೂಲಕವಾಗಿತ್ತು ಅಂದು ಹಜ್ಜ್ ಯಾತ್ರೆ.ಸತತ  3 ಸಲ ಉಸ್ತಾದರು ಹಜ್ಜ್ ಯಾತ್ರೆ ಕೈಗೊಂಡಿದ್ದರು. ಜೀವನದ ಪ್ರಧಾನ ಭಾಗವಾದ ವಿವಾಹವನ್ನು  1972ರಲ್ಲಿ ನೆರವೇರಿಸಿದರು.ಆದೂರು ಮುಹಮ್ಮದ್ ಮುಸ್ಲಿಯಾರರ ಮಗಳಾಗಿದ್ದ "ನಫೀಸಾ" ಎಂಬವರಾಗಿದ್ದಾರೆ ಉಸ್ತಾದರ ಸಹಧರ್ಮಿಣಿ.ಮುಹಮ್ಮದ್,ಸಿದ್ದೀಕ್,ಉಮರುಲ್ ಫಾರೂಕ್,ಹಂಝ,ಉಸ್ಮಾನ್,ಮುಹಮ್ಮದ್ ಅಲಿ ಹಿಮಮಿ,ಯೂಸುಫ್,ಸೌದ ಎಂಬಿವರು ಮಕ್ಕಳಾಗಿದ್ದಾರೆ.

         ಬೆಳ್ಳಿಪ್ಪಾಡಿ ಉಸ್ತಾದರು ಹಲವಾರು ವಿದ್ವಾಂಸರುಗಳಿಂದ ಇಜಾಝತ್ ಸ್ವೀಕರಿಸಿದ್ದರು.ಅದರಲ್ಲಿ ಪ್ರಧಾನವಾಗಿ ನಮ್ಮ ಅನುಭವದಲ್ಲಿರುವುದು ಮುಹಿಮ್ಮಾತ್  ಸಂತತಿಗಳಾದ ನಾವು ಹಲವಾರು ಸಂದರ್ಭಗಳಲ್ಲಿ ಕಲಿಕೆಯ ಉನ್ನತಿಗೆ ಹಾಗೂ ಪರೀಕ್ಷೆಯ ಉತ್ತಮ ಫಲಿತಾಂಶಕ್ಕಾಗಿ ಉಸ್ತಾದರ ಬಳಿ ತಲುಪುತ್ತಿದ್ದಾಗ ಉಸ್ತಾದರು ಕುಂಬೋಳ್ ಸಾದಾತುಗಳಿಗೆ ಫಾತಿಹಾ ಓದಿ ಪರೀಕ್ಷಾ ಕೊಠಡಿಗೆ ತೆರಳಿರಿ ನಿಮಗೆ ವಿಜಯ ಹೊಂದಬಹುದು ಎನ್ನುತ್ತಿದ್ದರು.ಅದಲ್ಲದೇ ಉಸ್ತಾದರು ಕುಂಬೋಳ್ ಕುಟುಂಬದ ಕಣ್ಮಣಿ ಆಟಕೋಯ ತಂಙಳುಸ್ತಾದರಿಂದ ಲಾ ಹವ್ಲ ವಲಾ ಕುವ್ವತ ಇಲ್ಲಾ ಬಿಲ್ಲಾ ಎಂಬ ದಿಕ್ರಿನ ಇಜಾಝತ್ ಪಡೆದಿದ್ದರು.ಶೈಖುನಾ ತಾಜುಲ್ ಉಲಮಾ ಉಳ್ಳಾಲ ತಂಙಳುಸ್ತಾದರಿಂದ ಖಾದಿರಿಯ್ಯಾ ತ್ವರೀಖತ್,ದಲಾಯಿಲುಲ್ ಖೈರಾತ್ ಹಾಗೂ ನಾರಿಯತ್ ಸ್ವಲಾತ್ ಗಳ ಇಜಾಝತನ್ನು ಸ್ವೀಕರಿಸಿದರು.ಶೈಖ್ ಸ್ವಬಾಹುದ್ದೀನ್ ರಿಫಾಯಿ ಅವರಿಂದ ರಿಫಾಯಿ ತ್ವರೀಖತಿನ ಇಜಾಝತ್ ಸ್ವೀಕರಿಸಿದ್ದಾರೆ.ಕಕ್ಕಡಿಪ್ಪುರಂ ವಲಿಯಲ್ಲಾಹಿ ಎಂಬ ಮಹಾತ್ಮರಿಂದ ನೂರುಲ್ ಈಮಾನ್ ಹಾಗೂ ಹದ್ದಾದ್ ರಾತೀಬಿನ ಇಜಾಝತ್ ಸ್ವೀಕರಿಸಿದರು.ಪಾನೂರ್ ಪೂಕೋಯ ತಂಙಳರಿಂದ ಯಾ ಲತ್ವೀಫು ಎಂಬ ದ್ಸಿಕ್ರ್ ಹಾಗೂ ಶಂಸುಲ್ ಉಲಮಾ ಈ.ಕೆ ಉಸ್ತಾದರಿಂದ ಯಾಹಯ್ಯುಯಾಕಯ್ಯೂಂ ಎಂಬ ದ್ಸಿಕ್ರಿನ ಇಜಾಝತ್ ಅದೇ ರೂಪದಲ್ಲಿ ಕಣ್ಣಿಯತ್ ಉಸ್ತಾದರಿಂದ ಏಳು ಫಾತಿಹಾ ಓದಿ ಮಂತ್ರಿಸಲು ಹಾಗೂ ಹಸನ್ ಶದ್ದಾದ್ ಎಂಬ ಮಹಾನುಭಾವರಿಂದ ಸ್ವಲಾತಿನ ಇಜಾಝತ್ ಪಡೆದಿದ್ದರು. ಆಧ್ಯಾತ್ಮಿಕ ನಾಯಕರಾದ ಶೈಖುನಾ ತ್ವಾಹಿರುಲ್ ಅಹ್ದಲ್ ತಂಙಳುಸ್ತಾದರಿಂದ ಬಿರಹ್ಮತಿಕ ಅಸ್ತಗೀಸು ಎಂಬ ದ್ಸಿಕ್ರಿನ ಇಜಾಝತುಗಳನ್ನು ಪಡೆದು ಧನ್ಯರಾಗಿದ್ದಾರೆ. ಇದಲ್ಲದೇ ಇನ್ನೂ ಹಲವಾರು ವಿದ್ವಾಂಸರುಗಳಿಂದ ಉಸ್ತಾದರು ಇಜಾಝತ್ ಪಡೆದಿದ್ದರು.ಅಲ್ಲಾಹನು ಉಸ್ತಾದರಿಗೆ ಸ್ವರ್ಗ ನೀಡಲಿ ಆಮೀನ್....

      ಸುದೀರ್ಘವಾದ 48 ವರ್ಷ ದರ್ಸ್ ನಡೆಸಿ , ತಾಳ್ಮೆ ಹಾಗೂ ವಿನಯದ ಪ್ರತೀಕವಾಗಿದ್ದ ಆ ಸರಳ ಸ್ವಭಾವದ ಉಸ್ತಾದರು  2021 ಜನವರಿ 21 ಗುರುವಾರ ಮಧ್ಯಾಹ್ನ ನಮ್ಮನ್ನಗಲಿದರು. ಅಲ್ಲಾಹು ಉಸ್ತಾದರ ಪಾರತ್ರಿಕ ಲೋಕ ಸಂತೋಷಗೊಳಿಸಲಿ ಆಮೀನ್ ಯಾ ರಬ್ಬಲ್ ಆಲಮೀನ್...

- ಎ.ಕೆ ಮುಸ್ತಫ ಹಿಮಮಿ ಕೃಷ್ಣಾಪುರ
9995771805SHARE THIS

Author:

0 التعليقات: