ಸದ್ಭಾವನಾ ದಿನ ಆಚರಿಸುವ ಮೂಲಕ ಒಂದು ದಿನ ಉಪವಾಸಕ್ಕೆ ರೈತರ ನಿರ್ಧಾರ
ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಪುಣ್ಯತಿಥಿಯಾದ ಇಂದು 'ಸದ್ಭಾವನಾ ದಿನ'ವನ್ನು ಆಚರಿಸುವ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ. ಹೆಚ್ಚಿನ ಸಂಖ್ಯೆಯ ರೈತರು ಸೇರಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ತಮ್ಮ ಆಂದೋಲನ ಮತ್ತಷ್ಟು ಬಲಗೊಳ್ಳುತ್ತದೆ ಎಂದು ರೈತ ಮುಖಂಡರು ಪ್ರತಿಪಾದಿಸಿದ್ದಾರೆ.
ದೆಹಲಿಯ ಸಿಂಘು ಗಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೈತರು, ವಿವಾದಿತ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ನಮ್ಮ ಹೋರಾಟವನ್ನು ನಾಶಮಾಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.
"ರೈತರನ್ನು ನಾಶಮಾಡಲು ಆಡಳಿತಾರೂಢ ಬಿಜೆಪಿಯ ಸಂಚು ಬಟಾ ಬಯಲಾಗಿದೆ ' ಎಂದು ಭಾರತೀಯ ಕಿಸಾನ್ ಯೂನಿಯನ್ನ ಜಗ್ಜೀತ್ ಸಿಂಗ್ ದಲ್ಲೇವಾಲ್ ಆರೋಪಿಸಿದ್ಧಾರೆ.
ರೈತ ಮುಖಂಡ ರಾಕೇಶ್ ಟಿಕಾಯತ್ ಅವರನ್ನು ಗುರುವಾರ ರಾತ್ರಿ ಗಾಜಿಪುರ ಗಡಿಯಿಂದ ಹೊರಹಾಕಲು ಪೊಲೀಸರು ಪ್ರಯತ್ನಿಸಿದ ನಂತರ ಎಲ್ಲಾ ಪ್ರಮುಖ ಪ್ರತಿಭಟನಾ ಸ್ಥಳಗಳಾದ ಗಾಜಿಪುರ, ಸಿಂಗು ಮತ್ತು ಟಿಕ್ರಿಗಳಲ್ಲಿ ಚಳವಳಿಗಾರರ ಸಂಖ್ಯೆ ಹೆಚ್ಚುತ್ತಿದೆ ಎಂದು ರೈತ ಮುಖಂಡರು ಪ್ರತಿಪಾದಿಸಿದರು.
"ಈ (ಬಿಜೆಪಿ) ಜನರಿಂದ ರಾಷ್ಟ್ರಧ್ವಜವನ್ನು ಗೌರವಿಸುವ ಕುರಿತು ನಮಗೆ ಉಪನ್ಯಾಸ ಅಗತ್ಯವಿಲ್ಲ. ಇಲ್ಲಿ ಕುಳಿತಿರುವ ಬಹುಪಾಲು ರೈತರ ಮಕ್ಕಳು ಗಡಿಯಲ್ಲಿ ಹೋರಾಡುತ್ತಿದ್ದಾರೆ" ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಯುಧ್ವೀರ್ ಸಿಂಗ್ ಹೇಳಿದರು.
ರೈತರ ಆಂದೋಲನವನ್ನು ಹತ್ತಿಕ್ಕುವ ಸರ್ಕಾರದ ಹತಾಶ ಕ್ರಮ, ಅದರಲ್ಲೂ ವಿಶೇಷವಾಗಿ ಗಾಜಿಪುರ ಗಡಿಯನ್ನು ಖಾಲಿ ಮಾಡುವಂತೆ ಒತ್ತಾಯಿಸುವ ಮೂಲಕ ಹೋರಾಟ ಮತ್ತಷ್ಟು ಪ್ರವರ್ಧಮಾನಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ.
ಜನವರಿ 26 ರಂದು ನಡೆದ ಟ್ರಾಕ್ಟರ್ ಮೆರವಣಿಗೆಯಲ್ಲಿ ಸಾವಿರಾರು ಪ್ರತಿಭಟನಾನಿರತ ರೈತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಅವರಲ್ಲಿ ಹಲವರು ಟ್ರಾಕ್ಟರುಗಳ ಮೂಲಕ ಕೆಂಪು ಕೋಟೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ಬಳಿಕ ಅನ್ಯ ಧ್ವಜ ಹಾರಿಸಿದ್ದರು.
ಶಾಂತಿಯುತ ರೈತರ ಆಂದೋಲನಕ್ಕೆ ಬಿಜೆಪಿ ಸರ್ಕಾರ ಕೋಮು ಬಣ್ಣವನ್ನು ಹಚ್ಚುತ್ತಿದೆ ಎಂದು ಸಂಯುಕ್ತಾ ಕಿಸಾನ್ ಮೋರ್ಚಾ ಹೇಳಿಕೆ ಬಿಡುಗಡೆ ಮಾಡಿತ್ತು.
0 التعليقات: