ಪ್ರಜಾಪ್ರಭುತ್ವದ ಘನತೆಗೆ ಧಕ್ಕೆ ತಂದ ಬಿಜೆಪಿ: ಪ್ರಿಯಾಂಕಾ ಗಾಂಧಿ ಆರೋಪ
ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಆರು ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿರುವುದನ್ನು ವಿರೋಧಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, 'ಆಡಳಿತಾರೂಢ ಬಿಜೆಪಿ ಪಕ್ಷವು ಪ್ರಜಾಪ್ರಭುತ್ವದ ಘನತೆಯನ್ನು ಚೂರು ಚೂರು ಮಾಡಿದೆ' ಎಂದು ಶನಿವಾರ ಆರೋಪಿಸಿದ್ದಾರೆ.
'ಜನಪ್ರತಿನಿಧಿಗಳು ಮತ್ತು ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲಿಸುವ ಮೂಲಕ ಬೆದರಿಸುತ್ತಿರುವ ಬಿಜೆಪಿ ಸರ್ಕಾರದ ನಡೆಯು ಬಲು ಅಪಾಯಕಾರಿಯಾದದ್ದು' ಎಂದೂ ಅವರು ದೂರಿದ್ದಾರೆ.
'ಪ್ರಜಾಪ್ರಭುತ್ವವನ್ನು ಗೌರವಿಸುವುದು ಸರ್ಕಾರದ ಅಧಿಕಾರವಷ್ಟೇ ಅಲ್ಲ, ಅದು ಜವಾಬ್ದಾರಿ ಕೂಡಾ ಆಗಿದೆ. ಬೆದರಿಕೆಯಂಥ ತಂತ್ರಗಳು ಪ್ರಜಾಪ್ರಭುತ್ವಕ್ಕೆ ವಿಷಕಾರಿಯಾಗಿವೆ' ಎಂದೂ ಪ್ರಿಯಾಂಕಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
'ದೆಹಲಿಯ ಟ್ರ್ಯಾಕ್ಟರ್ ರ್ಯಾಲಿ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜನರನ್ನು ತಪ್ಪು ದಾರಿಗೆಳೆಯುವ ಟ್ವೀಟ್ ಮಾಡಿದ ಆರೋಪದ ಮೇರೆಗೆ ಸಂಸದ ಶಶಿ ತರೂರ್, ಪತ್ರಕರ್ತರಾದ ರಾಜ್ದೀಪ್ ಸರ್ದೇಸಾಯಿ, ಮೃಣಾಲ್ ಪಾಂಡೆ, ವಿನೋದ್ ಜೋಸೆ, ಜಫರ್ ಅಘಾ, ಪ್ರಾಣೇಶ್ ನಾಥ್, ಅನಂತ್ನಾಥ್ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ' ಎಂದು ಮೂಲಗಳು ತಿಳಿಸಿವೆ.
0 التعليقات: