Sunday, 24 January 2021

ಆಲೂರು : ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಬೈಕ್‌ ಸವಾರ ಪಾರು


 ಆಲೂರು : ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಬೈಕ್‌ ಸವಾರ ಪಾರು

ಆಲೂರು: ಒಂಟಿ ಸಲಗವನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಯುತ್ತಿರುವಾಗಲೇ ಬೈಕ್‌ ಸವಾರನೊಬ್ಬ ಕೂದಲೆಳೆ ಅಂತರ ದಲ್ಲಿ ಕಾಡಾನೆಯಿಂದ ಪಾರಾದ ಘಟನೆ ತಾಲೂಕಿನ ಕೆ.ಹೊಸ ಕೋಟೆ ಹೋಬಳಿ ಮಠದಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಕಾಫಿ ತೋಟದಿಂದ ಒಂಟಿ ಸಲಗವೊಂದು ದಿಢೀರ್‌ ರಸ್ತೆಗೆ ಬಂದಿದೆ. ಈ ವೇಳೆ ಬೈಕ್‌ ಸವಾರ ಆನೆಗೆ ಅಡ್ಡಲಾಗಿ ಬಂದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಗ್ರಾಮಸ್ಥರು ಬೈಕ್‌ ಸವಾರನಿಗೆ ಹಿಂತಿರುಗಿ ಹೋಗುವಂತೆ ಕೂಗಾಡಿದ್ದಾರೆ. ಆದರೂ, ಯುವಕ ನುಗ್ಗಿ ಬಂದಿದ್ದು, ಆಶ್ಚರ್ಯ ರೀತಿಯಲ್ಲಿ ಪಾರಾಗಿದ್ದಾನೆ. ಒಂದು ವೇಳೆ ಆನೆ ಸೊಂಡಿಲನ್ನು ಎತ್ತಿದ್ದರೂ ಸಾಕಿತ್ತು, ಬೈಕ್‌ ಬಿದ್ದು ಆನೆಯ ಪಾದ ಸೇರುತ್ತಿದ್ದ ಎಂದು ಸ್ಥಳದಲ್ಲಿ ಕೆಲವರು ಹೇಳಿದ್ದಾರೆ. ಹಾರೋಹಳ್ಳಿ ಗ್ರಾಮದ ಸಂತೋಷ್‌ ಆನೆ ದಾಳಿಯಿಂದ ಪಾರಾದ ಯುವಕ. ಈತ ಸ್ವಗ್ರಾಮದಿಂದ ಮಗ್ಗೆ ಗ್ರಾಮಕ್ಕೆ ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ಇದ್ದವರು ಕಾಡಾನೆಯಿಂದ

ಪಾರಾಗಿ ಬಂದ ಬೈಕ್‌ ಸವಾರನಿಗೆ ಸರಿಯಾಗಿಯೇ ಬುದ್ಧಿ ಹೇಳಿದ್ದಾರೆ. ಆಲೂರು- ಸಕಲೇಶಪುರದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಜನರು ಜೀವಭಯದಿಂದ ಬದುಕು ನಡೆಸುವಂತಾಗಿದೆ.

ಕಳೆದ ಹಲವು ದಿನಗಳಿಂದ ಆಲೂರು ತಾಲೂಕಿನ ಕುಂದೂರು, ಕೆ.ಹೊಸಕೋಟೆ ಹೋಬಳಿಗಳಲ್ಲಿ ಭೀಮ ಎಂದು ಕರೆಯಲ್ಪಡುವ ಒಂಟಿ ಸಲಗವೊಂದು ಹಲವು ದಿನಗಳಿಂದ ಗ್ರಾಮಗಳ ಮುಖ್ಯ ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿದೆ.

ಈವರೆಗೆ ಯಾವ ಪ್ರಾಣ ಹಾನಿಯಾಗದಿದ್ದರೂ ಜನ ಸಾಮಾನ್ಯರು ಭಯ ಭೀತರಾಗಿದ್ದಾರೆ. ಈ ಕಾಡಾನೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕೆನ್ನುವುದು ಜನಸಾಮಾನ್ಯರ ಒತ್ತಾಯವಾಗಿದೆ. ಸೌಮ್ಯ ಸ್ವಭಾವದ ಆನೆ: ಮಠದ ಕೊಪ್ಪಲು ಗ್ರಾಮದ ಕಾಫಿ ತೋಟದಲ್ಲಿ ಶನಿವಾರ ದಿಢೀರ್‌ ಪ್ರತ್ಯಕ್ಷವಾದ ಒಂಟಿ ಸಲಗ(ಭೀಮ) ಸೌಮ್ಯ ಸ್ವಭಾವದ್ದಾಗಿದೆ. ಹಲವು ಗ್ರಾಮಗಳಲ್ಲಿ ಗಂಭೀರ್ಯದೊಂದಿಗೆ ಓಡಾಟ ನಡೆಸಿದ್ದ ಭೀಮ, ಬೆಳೆಗಳನ್ನು ಬಿಟ್ಟರೆ ಮನುಷ್ಯರಿಗೆ ಯಾವುದೇ ತೊಂದರೆ ಮಾಡಿಲ್ಲ.

ತಾಲೂಕಿನ ನಿಡನೂರು, ಮೆಣಸಮಕ್ಕಿ, ಬಾಳ್ಳುಪೇಟೆ, ಮಲ್ಲೇನಹಳ್ಳಿ, ಹಾಚ್ಗೋಡ್ನಹಳ್ಳಿ, ಚಿಗಳೂರು, ಅರಹಳ್ಳ ಕೊಪ್ಪಲು, ಅಬ್ಬನ, ಚಿನ್ನಳ್ಳಿ ಹಾಗೂ ಪಾಳ್ಯ ಸುತ್ತಮುತ್ತಲ ಗ್ರಾಮಗಳಲ್ಲಿ ಓಡಾಟ ನಡೆಸಿದ್ದ ಭೀಮ, ಯಾರಿಗೂ ತೊಂದರೆ ಮಾಡಿಲ್ಲ. ಇತ್ತ ಪುಂಡಾನೆ ಸೆರೆ ಹಿಡಿಯಲು, ಮೂರು ಹೆಣ್ಣಾನೆಗೆ ರೆಡಿಯೋ ಕಾಲರ್‌ ಅಳವಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಒಂದೆಡೆ ಕಾರ್ಯಾಚರಣೆ ನಡೆಸುತ್ತಿದ್ದರೆ, ಇತ್ತ ಮತ್ತೂಂದು ಒಂಟಿ ಸಲಗ ಊರೂರು ತಿರುಗುತ್ತಾ, ಭೀತಿ ಹುಟ್ಟಿಸುತ್ತಿದೆ.


SHARE THIS

Author:

0 التعليقات: