ಅಮೆರಿಕ: ಆರೋಗ್ಯ ರಕ್ಷಣೆ ಕಾರ್ಯಾದೇಶಗಳಿಗೆ ಬೈಡನ್ ಸಹಿ
ವಾಷಿಂಗ್ಟನ್: ಜನರಿಗೆ ಕೈಗೆಟುಕುವಂತೆ ಆರೋಗ್ಯ ಸೇವೆ ಮತ್ತು ವೈದ್ಯಕೀಯ ಸೌಲಭ್ಯ ಹಾಗೂ ಮಹಿಳೆಯರ ಆರೋಗ್ಯ ರಕ್ಷಣೆಗೆ ನೆರವಾಗುವಂತಹ ಎರಡು ಆರೋಗ್ಯ ಸುರಕ್ಷಾ ಯೋಜನೆಗಳ ಕಾರ್ಯಾದೇಶಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರ ಸಹಿಹಾಕಿದ್ದಾರೆ.
ಮೊದಲ ಕಾರ್ಯಾದೇಶ, ಟ್ರಂಪ್ ಕಾಲದಲ್ಲಿ ರದ್ದುಗೊಂಡಿದ್ದ 'ಜನರ ಕೈಗೆಟುಕುವ ಆರೈಕೆ ಕಾಯ್ದೆ ಮತ್ತು ವೈದ್ಯಕೀಯ ಸೌಲಭ್ಯ(ಮೆಡಿಕೇಡ್)' ಅನ್ನು ಪುನರ್ ಅನುಷ್ಠಾನಗೊಳಿಸುವುದಾಗಿದೆ. ಎರಡನೇ ಕಾರ್ಯದೇಶ, ದೇಶ ಮತ್ತು ವಿದೇಶದಲ್ಲಿ ಮಹಿಳೆಯರ ಆರೋಗ್ಯ ರಕ್ಷಣೆಗೆ ಸಂಬಂಧಪಟ್ಟಿದ್ದಾಗಿದೆ.
ರದ್ದಾಗಿದ್ದ ಹಲವು ಕಾಯ್ದೆಗಳಿಗೆ ಅಧಿಕಾರವಹಿಸಿಕೊಂಡ ವಾರದೊಳಗೆ ಮರುಜೀವ ಕೊಟ್ಟಿದ್ದ ನೂತನ ಅಧ್ಯಕ್ಷ ಜೋ ಬೈಡನ್ ಈಗ ಆರೋಗ್ಯ ಸುರಕ್ಷತೆಯತ್ತ ಗಮನ ಹರಿಸಿದ್ದಾರೆ.
'ಟ್ರಂಪ್ ಅವಧಿಯಲ್ಲಿ ವೈದ್ಯಕೀಯ ಸೌಲಭ್ಯ ದುಬಾರಿಯಾಗಿತ್ತು. ಸಾಮಾನ್ಯ ಜನರ ಕೈಗೆಟುಕದಂತಿತ್ತು. ಆ ಸೌಲಭ್ಯಗಳನ್ನು ಪಡೆಯುವುದೇ ಕಠಿಣವಾಗಿತ್ತು' ಎಂದು ಶ್ವೇತನಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ ಬೈಡನ್, ನೂತನ ಕಾರ್ಯಾದೇಶಗಳು ಸಾಮಾನ್ಯ ಜನರಿಗೆ ಕೈಗೆಟಕುವಂತೆ ಆರೋಗ್ಯ ಸೌಲಭ್ಯವನ್ನು ನೀಡುತ್ತವೆ. ಮಹಿಳೆಯರು ತಮ್ಮ ಆರೋಗ್ಯ ರಕ್ಷಣೆಗೆ ಸುಲಭವಾಗಿ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ನೆರವಾಗುತ್ತದೆ' ಎಂದರು.
0 التعليقات: