Saturday, 16 January 2021

ಚೀನಾ ಲಸಿಕೆಗೆ ನೋ! ಬ್ರಿಟನ್'ನ ಆಸ್ಟ್ರಾಜೆನೆಕಾ ಲಸಿಕೆ ತುರ್ತು ಬಳಕೆಗೆ ಪಾಕ್ ಅಸ್ತು!


ಚೀನಾ ಲಸಿಕೆಗೆ ನೋ! ಬ್ರಿಟನ್'ನ ಆಸ್ಟ್ರಾಜೆನೆಕಾ ಲಸಿಕೆ ತುರ್ತು ಬಳಕೆಗೆ ಪಾಕ್ ಅಸ್ತು!

ಇಸ್ಲಾಮಾಬಾದ್: ತನ್ನ ಅತ್ಯಾಪ್ತ ರಾಷ್ಟ್ರ ಚೀನಾ ಸರ್ಕಾರಿ ಸ್ವಾಮ್ಯದ ಸಿನೋಫಾರ್ಮ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್ 19 ಲಸಿಕೆಗೆ ನೋ ಅಂದಿರುವ ಪಾಕಿಸ್ತಾನ ಬ್ರಿಟನ್'ನ ಆಸ್ಟ್ರಾಜೆನೆಕಾ ಲಸಿಕೆಯ ತುರ್ತು ಬಳಕೆಗೆ ಅಸ್ತು ಅಂದಿದೆ.

ಅಸ್ಟ್ರಾಜೆನೆಕಾದ ಕೋವಿಡ್-19 ಲಸಿಕೆಯನ್ನು ಪಾಕಿಸ್ತಾನದಲ್ಲಿ ತುರ್ತು ಬಳಕೆಗಾಗಿ ಅನುಮೋದಿಸಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ದಕ್ಷಿಣ ಏಷ್ಯಾ ದೇಶದಲ್ಲಿ ಬಳಕೆಗೆ ಹಸಿರು ನಿಶಾನೆ ಸಿಕ್ಕಿರುವ ಮೊದಲ ಕೊರೋನಾವೈರಸ್ ಲಸಿಕೆ ಇದಾಗಿದೆ.

ಕೊರೋನಾ ವೈರಸ್ ಎರಡನೇ ಅಲೆಯ ಮಧ್ಯದಲ್ಲಿರುವ ಪಾಕಿಸ್ತಾನ, ಸಿನೋಫಾರ್ಮ್‌ನ ಲಸಿಕೆಯನ್ನು ಒಂದು ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುವುದಾಗಿ ಹೇಳಿದೆ. ಆದರೆ ಚೀನಾದ ಲಸಿಕೆಯನ್ನು ಪಾಕಿಸ್ತಾನದ ಔಷಧ ನಿಯಂತ್ರಣ ಪ್ರಾಧಿಕಾರ(ಡಿಆರ್‌ಎಪಿ) ಇನ್ನೂ ಅನುಮೋದಿಸಿಲ್ಲ.

ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆ ತುರ್ತು ಬಳಕೆಗೆ ಡಿಆರ್‌ಎಪಿ ಅನುಮತಿ ನೀಡಿದೆ ಎಂದು ಪಾಕ್ ಆರೋಗ್ಯ ಸಚಿವ ಫೈಸಲ್ ಸುಲ್ತಾನ್ ರಾಯಿಟರ್ಸ್ಗೆ ತಿಳಿಸಿದ್ದಾರೆ.

ಪಾಕಿಸ್ತಾನವು ಹಲವಾರು ಲಸಿಕೆ ತಯಾರಕರೊಂದಿಗೆ ಮಾತುಕತೆ ಪ್ರಗತಿಯಲ್ಲಿ. ಚೀನಾದ ಕ್ಯಾನ್‌ಸಿನೊಬಿಯೊ ಜೊತೆಗಿನ ಒಪ್ಪಂದದ ಪ್ರಕಾರ ದೇಶವು 10 ಲಕ್ಷ ಲಸಿಕೆ ಡೋಸ್ ಪಡೆಯಬಹುದು ಎಂದು ಸುಲ್ತಾನ್ ಹೇಳಿದರು.

ಪಾಕಿಸ್ತಾನದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 2,432 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು 45 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 5,16,000ಕ್ಕಿಂತ ಹೆಚ್ಚಾಗಿದ್ದು ಸಾವಿನ ಸಂಖ್ಯೆ 11,000 ಗಡಿಯಲ್ಲಿದೆ.



SHARE THIS

Author:

0 التعليقات: