ರಾಯ್ತ ತಯಾರಿಸಿ ಬಿರಿಯಾನಿ ಸವಿದ ರಾಹುಲ್- 'ನಲ್ಲ ಇರಕು', ಅಮೆರಿಕಕ್ಕೂ ಕಳಿಸ್ತೇನೆ ಎಂದರು!
ಚೆನ್ನೈ: ತಮಿಳುನಾಡಿನ ಪ್ರವಾಸದಲ್ಲಿದ್ದ ಸಂಸದ ರಾಹುಲ್ಗಾಂಧಿ ಇದಾಗಲೇ ಹಲವಾರು ವಿಡಿಯೋಗಳ ಮೂಲಕ ಭಾರಿ ಸುದ್ದಿಯಲ್ಲಿದ್ದಾರೆ. ದಿನವೂ ಅವರು ಮಾಡಿರುವ ಭಾಷಣಗಳ ವಿಡಿಯೋ ಟ್ರೋಲ್ ಆಗುತ್ತಲೇ ಇವೆ. ಈ ಬಾರಿ ತಮಿಳಿನ ಚಾನೆಲ್ ಒಂದರಲ್ಲಿ ಬಿರಿಯಾನಿಗಾಗಿ ಖುದ್ದು ರಾಯತ ತಯಾರಿಸಿ, ಅದನ್ನು ಸವಿದಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗಿದೆ.
ತಮಿಳಿನ 'ವಿಲೇಜ್ ಕುಕ್ಕಿಂಗ್' ಯುಟ್ಯೂಬ್ ಚಾನೆಲ್ನಲ್ಲಿ ಕಾಣಿಸಿಕೊಂಡಿರುವ ರಾಹುಲ್, ಅಲ್ಲಿ ಅಣಬೆಯ ಬಿರಿಯಾನಿ ಸವಿದಿದ್ದಾರೆ. ಚಾಪೆಯ ಮೇಲೆ ಕುಳಿತು ಗ್ರಾಮಸ್ಥರ ಜತೆ ಚರ್ಚಿಸುತ್ತಾ, ಬಿರಿಯಾನಿ ಸವಿಯುತ್ತಿರುವ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಿರಿಯಾನಿ ಸವಿಯುಂಡ ರಾಹುಲ್ ಗಾಂಧಿ ತಮಿಳಿನಲ್ಲಿ 'ನಲ್ಲ ಇರಕು' (ಇದು ಚೆನ್ನಾಗಿದೆ) ಎಂದು ಹೇಳಿರುವುದನ್ನು ವಿಡಿಯೋದಲ್ಲಿ ಕೇಳಬಹುದು. ಕಾಡಿನ ಮಧ್ಯೆ ಸೌದೆ ಒಲೆಯಲ್ಲಿ ಸಿದ್ಧವಾದ ಬಿರಿಯಾನಿಯನ್ನು ಬಾಳೆ ಎಲೆಯಲ್ಲಿ ಬಡಿಸಿಕೊಂಡು ಸವಿದರು.
ಸೌದೆ ಒಲೆಯಲ್ಲಿ ದೊಡ್ಡದಾದ ಬಾಣಲಿಯಲ್ಲಿ ತಯಾರಾದ ಈ ಬಿರಿಯಾನಿಯನ್ನು ಮೆಚ್ಚಿಕೊಂಡ ಅವರು, ಅದನ್ನು ಸಿದ್ಧಪಡಿಸುವ ಬಗೆಯನ್ನೂ ತಿಳಿದುಕೊಂಡರು. ರಾಹುಲ್ ಗಾಂಧಿ ಅವರ ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ತಮಿಳುನಾಡು ಪ್ರವಾಸದಲ್ಲಿದ್ದ ವೇಳೆ ಅವರು ಕೊಯಮತ್ತೂರು ಮತ್ತು ತಿರುಪ್ಪೂರಿಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಕೈಗಾರಿಕೆ ಹಾಗೂ ಕೃಷಿ ವಲಯದ ಅಭಿವೃದ್ಧಿ ಮತ್ತು ಕೇಂದ್ರ ಸರ್ಕಾರವು ಅಂಗೀಕರಿಸಿದ ಹೊಸ ಕೃಷಿ ಕಾನೂನುಗಳ ಬಗ್ಗೆ ಸಂವಹನ ನಡೆಸಿದ್ದರು.
ನನ್ನ ಆತ್ಮೀಯ ಸ್ನೇಹಿತನೊಬ್ಬ ಅಮೆರಿಕದಲ್ಲಿದ್ದಾನೆ. ಆತನಿಗೆ ನಾನು ಹೇಳಿ ನಿಮ್ಮ ಅಡುಗೆ ಶೋ ನಡೆಸಲು ವ್ಯವಸ್ಥೆ ಮಾಡಿಸುತ್ತೇನೆ. ಅಮೆರಿಕಕ್ಕೂ ಹೋಗಿ ಭಾರತೀಯ ಅಡುಗೆ ಮಾಡಿಬನ್ನಿ. ಹಾಗೇ, ಕರ್ನಾಟಕ, ಕೇರಳ ಸೇರಿದಂತೆ ಭಾರತದ ಬೇರೆ ರಾಜ್ಯಗಳಿಗೂ ಹೋಗಿ ಅಡುಗೆ ಮಾಡುವಂತೆ ಸಲಹೆ ನೀಡಿದರು.
ತಮಿಳುನಾಡಿನ ಕರೂರ್ ಕಾಂಗ್ರೆಸ್ ಸಂಸದೆ ಜ್ಯೋತಿಮಣಿ ಭಾಗವಹಿಸಿ, ಇಂಗ್ಲಿಷ್ನಲ್ಲಿ ಮಾಹಿತಿ ನೀಡಿದರು.
0 التعليقات: