ವಿಮಾನ ದುರಂತ: ಟೂರ್ನಿಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಫುಟ್ಬಾಲ್ ಆಟಗಾರರ ಸಾವು
ಸಾವೊಪೌಲೊ (ಬ್ರೆಜಿಲ್): ಲಘು ವಿಮಾನವೊಂದು ಟೇಕ್ ಆಫ್ ವೇಳೆ ಅಪಘಾತಗೀಡಾಗಿದ್ದು, ವಿಮಾನದಲ್ಲಿದ್ದ ಫುಟ್ಬಾಲ್ ಆಟಗಾರ ಸೇರಿ ಆರು ಮಂದಿ ಮೃತಪಟ್ಟಿದ್ದಾರೆ.
ಪಲ್ಮಾಸ್ ಫುಟ್ಬಾಲ್ ಕ್ಲಬ್ನ ಅಧ್ಯಕ್ಷ, ನಾಲ್ವರು ಆಟಗಾರರು ಹಾಗೂ ಪೈಲಟ್ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕ್ಲಬ್ ಅಧ್ಯಕ್ಷ ಲೂಕಸ್ ಮೇರಾ, ಆಟಗಾರರಾದ ಲೂಕಸ್ ಪ್ರಕ್ಸಿಡಿಸ್, ಗುಲೇರ್ಮೆ ನೋಯೆ, ರಣುಲ್ ಮತ್ತು ಮಾರ್ಕಸ್ ಮೋಲಿನರಿ ಮೃತಪಟ್ಟವರು.
ಪಲ್ಮಾಸ್ನಿಂದ 800 ಕಿಲೋಮೀಟರ್ ದೂರದ ಗೊಯಾನಿಯದಲ್ಲಿ ಇಂದು (ಸೋಮವಾರ) ನಡೆಯಲಿದ್ದ ಬ್ರೆಜಿಲಿಯನ್ ಕಪ್ ಟೂರ್ನಿಯ ಪಂದ್ಯದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ತಂಡವನ್ನು ಕರೆದೊಯ್ಯಲು ಸಜ್ಜಾಗಿದ್ದ ಲಘು ವಿಮಾನ ಇದಾಗಿತ್ತು.
ಸೋಮವಾರ ವಿವಾ ನೋವಾ ವಿರುದ್ಧದ ಪಂದ್ಯಕ್ಕಾಗಿ ಆಟಗಾರರು ಭಾನುವಾರ ವಿಮಾನದ ಮೂಲಕ ಹೊರಟ್ಟಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಪಲ್ಮಾಸ್ ಬಳಿಯ ಕಿರು ವಾಯುನೆಲೆ ಟೆಕಾಟಿನೆನ್ಸ್ ಏವಿಯೇಷನ್ ಅಸೋಸಿಯೇಷನ್ನಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತು.
2016ರಲ್ಲಿ ಮೆಡಿಲಿನ್ ಹೊರವಲಯದ ಗುಡ್ಡದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ತಂಡವೊಂದರ ಎಲ್ಲ ಆಟಗಾರರು ಮೃತಪಟ್ಟಿದ್ದರು. ಗೊಯಾಸ್ನಲ್ಲಿ ಎರಡು ವರ್ಷಗಳ ಹಿಂದೆ ಹೆಲಿಕಾಪ್ಟರ್ ಪತನಗೊಂಡ ಕಾರಣ ಬ್ರೆಜಿಲ್ ತಂಡದ ಮಾಜಿ ಫರ್ನಾಂಡೊ ಸಾವಿಗೀಡಾಗಿದ್ದರು.
0 التعليقات: