Friday, 8 January 2021

ನೂತನ ನಾಗರಿಕ ಸೇವಾ ನಿಯಮ ಅಧಿಸೂಚನೆ ಮರುಶೀಲನೆಗೆ ನೌಕರರ ಸಂಘ ಒತ್ತಾಯ


 ನೂತನ ನಾಗರಿಕ ಸೇವಾ ನಿಯಮ ಅಧಿಸೂಚನೆ ಮರುಶೀಲನೆಗೆ ನೌಕರರ ಸಂಘ ಒತ್ತಾಯ

ಬೆಂಗಳೂರು,ಜ.9- ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ನಡವಳಿಕೆ) ನಿಯಮಗಳು 2020 ಸರ್ಕಾರಿ ನೌಕರರು ಚಲನಚಿತ್ರಗಳು, ದೂರದರ್ಶನ ಧಾರಾವಾಹಿಗಳು ಹಾಗೂ ಪುಸ್ತಕಗಳ ಪ್ರಕಟಣೆಗಳಲ್ಲಿ ತೊಡಗಿಕೊಳ್ಳದಂತೆ ಮತ್ತು ರಾಜ್ಯ-ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸುವುದನ್ನು ನಿಷೇಧಿಸಿರುವುದನ್ನು ರಾಜ್ಯ ಸಚಿವಾಲಯ ನೌಕರರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕೂಡಲೇ ಈ ನಿರ್ಧಾರವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದೆ.

ರಾಜ್ಯ ಸರ್ಕಾರ ಹೊರಡಿಸಿರುವ ಈ ಆದೇಶವನ್ನು ಹಿಂಪಡೆಯಬೇಕು. ಇದರಿಂದಾಗಿ ಸರ್ಕಾರಿ ನೌಕರರು ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ. ಜ.12ರಂದು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸುವುದಾಗಿ ಸಚಿವಾಲಯದ ಸಂಘದ ಅಧ್ಯಕ್ಷ ಗುರುಸ್ವಾಮಿ ಹೇಳಿದ್ದಾರೆ.

ಸರ್ಕಾರದ ಅನುಮತಿ ಇಲ್ಲದೇ ಯಾವುದೇ ರೀತಿಯ ವಿದೇಶ ಪ್ರವಾಸ ಕೈಗೊಳ್ಳುವಂತಿಲ್ಲ. ಯಾವುದೇ ರೀತಿಯಲ್ಲಿ ಸರ್ಕಾರದ ಕಾರ್ಯ ವಿಧಾನವನ್ನು ಟೀಕಿಸುವಂತಿಲ್ಲ. ಯಾವುದೇ ಸಮಿತಿ ಮತ್ತು ಪ್ರಾಧಿಕಾರದ ಮುಂದೆ ಸಾಕ್ಷ್ಯ ನೀಡುವಂತಿಲ್ಲ. ಸರ್ಕಾರಿ ನೌಕರರು ಯಾವುದೇ ರೀತಿಯ ವಂತಿಗೆ ಪಡೆಯುವಂತಿಲ್ಲ, ವಿವಾಹ ವಾರ್ಷಿಕೋತ್ಸವ, ಧಾರ್ಮಿಕ ವಿಧಿವಿಧಾನಗಳ ಸಂದರ್ಭದಲ್ಲಿ ನೀಡುವ ಉಡುಗೊರೆ ಪಡೆಯಲು ಅವಕಾಶವಿಲ್ಲ ಎಂದು ಹೇಳಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.


ಆಕಾಶವಾಣಿ, ದೂರದರ್ಶನ, ಪತ್ರಿಕೆಗಳಿಗೆ ಲೇಖನ ಬರೆಯುವಂತಿಲ್ಲ, ಸಾಂಸ್ಕೃತಿಕ ಕಾರ್ಯಕ್ರಮ ನೀಡುವಂತಿಲ್ಲ. ದೂರದರ್ಶನ ಹಾಗೂ ಇತರ ವಾಹಿನಿಗಳ ಧಾರಾವಾಹಿಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಆರ್ಥಿಕ ಉದ್ದೇಶವಲ್ಲದ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆ ನಡೆಸಲು ಯಾವುದೇ ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೆ ಅದು ನೌಕರರು ಪಡೆಯುವ ಮಾಸಿಕ ಸಂಬಳಕ್ಕಿಂತ ಹೆಚ್ಚಾಗಿದ್ದರೆ, ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರದಿ ನೀಡುವಂತೆ ಸೂಚಿಸಿರುವುದಕ್ಕೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ನೌಕರರು ಕೂಡ ಮನುಷ್ಯರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮನ್ನು ಜೀತಾದಾಳಿನಂತೆ ನೋಡಬಾರದು. ಈಗ ಹೊರಡಿಸಿರುವ ಅಧಿಸೂಚನೆಯನ್ನು ವಾಪಸ್ ಪಡೆಯುವಂತೆ ಕೋರಿದ್ದಾರೆ.

ಗಳಿಕೆ ರಜೆ ಸೌಲಭ್ಯ ರದ್ದತಿಗೆ ಆಕ್ಷೇಪ:

ಕೋವಿಡ್ ಸಂದರ್ಭದಲ್ಲೂ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನ ನೀಡಿದ್ದೇವೆ. ಹಾಗಿದ್ದು ಸಹ ರಾಜ್ಯದ ಕೋವಿಡ್ ನಂತರದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ 2021ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ಗಳಿಕೆ ರಜೆ ನಗದೀಕರಣ ಸೌಲಭ್ಯ ರದ್ದುಗೊಳಿಸಿರುವುದು ಸರಿಯಲ್ಲ. ಅದನ್ನು ಹಿಂಪಡೆಯಬೇಕೆಂದು ಗುರುಸ್ವಾಮಿ ಒತ್ತಾಯಿಸಿದ್ದಾರೆ.


SHARE THIS

Author:

0 التعليقات: