ಉದ್ಧವ್ ಠಾಕ್ರೆ ಒಬ್ಬ 'ಮಹಾ' ಹುಚ್ಚ : ಸಾ.ರಾ.ಗೋವಿಂದು ಕಿಡಿ
ಬೆಂಗಳೂರು, ಜ.28- ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಒಬ್ಬ ಅರೆಹುಚ್ಚ ಎಂದುಕೊಂಡಿದ್ದೆವು. ಪೂರ್ತಿ ಹುಚ್ಚ ಎಂಬುದು ಅವರ ಹೇಳಿಕೆಯಿಂದ ಸಾಬೀತಾಗಿದೆ ಎಂದು ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಕಿಡಿಕಾರಿದ್ದಾರೆ.
ಮರಾಠಿ ಮಾತನಾಡುವವರು ಇರುವ ಕರ್ನಾಟಕದ ಗಡಿ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶ ಎಂಬುದಾಗಿ ಘೋಷಿಸಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರು ರಾಜಕೀಯ ಅಸ್ತಿತ್ವಕ್ಕಾಗಿ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿರುವ ಉದ್ಧವ್ ಠಾಕ್ರೆ ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದರು.
ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎನ್ನುವುದಾದರೆ ನಾವು ಒಂದು ಹೆಜ್ಜೆ ಮುಂದೆ ಹೋಗಿ ಮುಂಬೈ, ಸೊಲ್ಲಾಪುರವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹ ಮಾಡುತ್ತೇವೆ. ಮಹಾಜನ್ ವರದಿಯನ್ನು ಎರಡೂ ರಾಜ್ಯಗಳು ಒಪ್ಪಿವೆ. ಬೆಳಗಾವಿ ನಮ್ಮದು ಎಂದು ಈಗಾಗಲೇ ಘೋಷಣೆಯಾಗಿದೆ. ಒಂದಿಂಚೂ ಜಾಗವನ್ನೂ ಮಹಾರಾಷ್ಟ್ರಕ್ಕೆ ಬಿಡಲು ಸಾಧ್ಯವಿಲ್ಲ. ಗಡಿ ವಿವಾದ ನ್ಯಾಯಾಲಯದಲ್ಲಿದೆ.
ಮಹಾರಾಷ್ಟ್ರದವರೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಗಡಿ ಬಗ್ಗೆ ತಕರಾರು ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿಯಂತಹ ಜವಾಬ್ದಾರಿ ಸ್ಥಾನದಲ್ಲಿರುವವರು ಅನಗತ್ಯ ಹೇಳಿಕೆಗಳನ್ನು ನೀಡಿ ನ್ಯಾಯಾಂಗ ನಿಂದನೆ ಮಾಡಿದ್ದಾರೆ.
ಪದೇ ಪದೇ ಇಂತಹ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಮರಾಠಿ ಅಭಿವೃದ್ಧಿ ನಿಗಮವನ್ನು ಕೂಡಲೇ ಸರ್ಕಾರ ಹಿಂತೆಗೆದುಕೊಳ್ಳಬೇಕು. ಸರ್ಕಾರವೇ ಮರಾಠಿ ಅಭಿವೃದ್ಧಿ ನಿಗಮ ರಚನೆ ಮಾಡಿ ಮರಾಠಿಗರು ನಮ್ಮ ಮೇಲೆ ದಬ್ಬಾಳಿಕೆ ಮಾಡಲು ದಾರಿ ತೋರಿಸಿದೆ.
ಯಾವ ಮರಾಠಿಗರು ಅಭಿವೃದ್ಧಿ ನಿಗಮ ರಚನೆ ಮಾಡಲು ಕೇಳಿದ್ದರು, ಈಗ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತಾಗಿದೆ. ಇದಕ್ಕೆ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿಯೇ ಹೊಣೆ. ಉದ್ಧವ್ ಠಾಕ್ರೆ ಅವರ ತಂದೆ ಬಾಳ ಠಾಕ್ರೆ ಅವರು ಕೂಡ ಇದೇ ರೀತಿ ಗಡಿ ಕ್ಯಾತೆ ಮಾಡಿ ಮರಾಠಿಗರು ಮತ್ತು ಕನ್ನಡಿಗರ ನಡುವಿನ ಸೌಹಾರ್ದವನ್ನು ಕೆಡಿಸಿದ್ದರು.
ಅದನ್ನು ಅವರ ಮಗ ಉದ್ಧವ್ ಠಾಕ್ರೆ ಮುಂದುವರಿಸಿದ್ದಾರೆ. ಇದನ್ನು ನಾವು ಸಹಿಸಲು ಸಾಧ್ಯವಿಲ್ಲ. ರಾಜ್ಯದ ಯಾವುದೇ ಒಂದಿಂಚು ಭೂ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಿಸಲು ಸಾಧ್ಯವಿಲ್ಲ. ಅವರ ಹೇಳಿಕೆಗಳನ್ನು ಕೇಳಿಕೊಂಡು ಕೈ ಕಟ್ಟಿ ಕುಳಿತುಕೊಳ್ಳಲು ಆಗುವುದಿಲ್ಲ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಈ ಕೂಡಲೇ ಪತ್ರ ಬರೆಯಬೇಕು.
ಕನ್ನಡದ ನೆಲ, ಜಲ ಉಳಿಸಲು ಹೋರಾಟ ಮಾಡುವ ಕನ್ನಡ ಪರ ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನ ಕೈಬಿಡಬೇಕು ಎಂದು ಸಾ.ರಾ.ಗೋವಿಂದು ಆಕ್ರೋಶ ವ್ಯಕ್ತಪಡಿಸಿದರು. ಮರಾಠ ಅಭಿವೃದ್ಧಿ ನಿಗಮ ಕೈಬಿಡಬೇಕೆಂಬ ಹೋರಾಟವನ್ನು ನಾವು ರಾಜ್ಯಾದ್ಯಂತ ಮುಂದುವರಿಸುತ್ತೇವೆ. ಕನ್ನಡ ಒಕ್ಕೂಟದ ವತಿಯಿಂದ ಈ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಹೇಳಿದರು.
0 التعليقات: