Wednesday, 27 January 2021

ಕಾಡಾನೆಗೆ ರೇಡಿಯೊ ಕಾಲರ್ ಅಳವಡಿಸಿ ಸ್ಥಳಾಂತರ


ಕಾಡಾನೆಗೆ ರೇಡಿಯೊ ಕಾಲರ್ ಅಳವಡಿಸಿ ಸ್ಥಳಾಂತರ

ಸಕಲೇಶಪುರ: ತಾಲ್ಲೂಕಿನ ಉದೇವಾರ ಸಮೀಪದ ಲಿಂಗಾಪುರ ಗ್ರಾಮದಲ್ಲಿ ಬುಧವಾರ ಸಂಜೆ ಅರಣ್ಯ ಇಲಾಖೆ ಸಿಬ್ಬಂದಿ ಒಂದು ಹೆಣ್ಣು ಕಾಡಾನೆಗೆ ರೇಡಿಯೊ ಕಾಲರ್ ಅಳವಡಿಸಿದರು.

ಏಳು ದಿನದ ಕಾರ್ಯಾಚರಣೆಯಲ್ಲಿ ಒಟ್ಟು ಮೂರು ಹೆಣ್ಣು ಹಾಗೂ ಒಂದು ಗಂಡು ಕಾಡಾನೆಗೆ ಕಾಲರ್ ಅಳವಡಿಸಿ ಸ್ಥಳಾಂತರ ಕಾರ್ಯದಲ್ಲಿ ಇಲಾಖೆ ಯಶಸ್ವಿಯಾಗಿದೆ.

ಸಕಲೇಶಪುರ ಹಾಗೂ ಬೇಲೂರು ತಾಲ್ಲೂಕು ಗಡಿ ಭಾಗದ ಉದೇವಾರ, ಲಿಂಗಾಪುರ ಸುತ್ತಮುತ್ತ ಗ್ರಾಮಗಳ ಕಾಫಿ ತೋಟಗಳಲ್ಲಿ 5 ಕಾಡಾನೆಗಳ ಗುಂಪನ್ನು ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಪಡೆ ಯೋಧರು ಪತ್ತೆ ಹಚ್ಚಿದರು.

ಸಂಜೆ 5.30 ಗಂಟೆ ಸುಮಾರಿಗೆ ಅರಣ್ಯ ಇಲಾಖೆಯ ವೆಂಕಟೇಶ್‌ ಗುಂಪು ನಿರ್ವಹಣೆ ಮಾಡುವ ಹೆಣ್ಣಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡುವಲ್ಲಿ ಯಶಸ್ವಿಯಾದರು. ಸುಮಾರು ನಾಲ್ಕು ಕಿ.ಮೀ. ಚಲಿಸಿದ ಆನೆಯನ್ನು ಸೆರೆಹಿಡಿಯಲು ದಸರಾ ಅಂಬಾರಿ ಹೋರುವ ಆನೆ ಅಭಿಮನ್ಯು ಹಾಗೂ ಗೋಪಾಲಸ್ವಾಮಿ ಮೇಲೆ ಕುಳಿತ ಮಾವುತರು ಹಾಗೂ ವೈದ್ಯರು ಸತತ ಒಂದು ಗಂಟೆ ಹರಸಾಹಸ ಪಟ್ಟರು.

ಸಂಜೆ 6.30ರ ಸುಮಾರಿಗೆ ಮಲ್ಲೇಶ್‌ಗೌಡ ಅವರ ತೋಟದಲ್ಲಿ ಕಾಡಾನೆ ಸೆರೆ ಹಿಡಿದು ರೇಡಿಯೊ ಕಾಲರ್‌ ಅಳವಡಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಗುಂಪಿನ ಇತರ ಕಾಡಾನೆಗಳು ಗೀಳಿಡುತ್ತಾ ಭಯದ ವಾತಾವರಣ ಉಂಟುಮಾಡಿದ್ದವು.

ಅಂಬಾರಿ ಮೇಲೆ ಡಿಎಫ್‌ಓ ಕಾರ್ಯಾಚರಣೆ: ಮಾವುತರೊಂದಿಗೆ ಡಿಎಫ್‌ಒ ಡಾ. ಬಸವರಾಜು ಅಂಬಾರಿ ಆನೆ ಅಭಿಮನ್ಯು ಮೇಲೆ ಮೂರು ಗಂಟೆ ಕಾಲ ಕುಳಿತು ಕಾರ್ಯಾಚರಣೆಯಲ್ಲಿ ತೊಡಗಿ ಸಿಬ್ಬಂದಿಗೆ ಉತ್ಸಾಹ ತುಂಬಿದರು.

'ಕಾಡಾನೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರಕ್ಕಾಗಿ ರೇಡಿಯೊ ಕಾಲರ್ ಅಳವಡಿಸಿ ಸ್ಥಳಾಂತರ ಮಾಡಲು ಅನುಮತಿ ದೊರಕಿತ್ತು. ಜ. 21 ರಿಂದ 27ರ ಒಳಗೆ ಈ ಕಾರ್ಯಾಚರಣೆ ನಡೆಸಲು ಇಲಾಖೆ ಎಲ್ಲಾ ರೀತಿ ವ್ಯವಸ್ಥೆ ಮಾಡಿಕೊಂಡಂತೆಯೇ ಕಾರ್ಯಾಚರಣೆ ಯಶಸ್ವಿಯಾಗಿದೆ' ಡಾ.ಬಸವರಾಜು 'ಪ್ರಜಾವಾಣಿ' ಗೆ ಹೇಳಿದರು.

ಡಾ.ಸನತ್‌ಕುಮಾರ್‌, ಡಾ.ಮುಜೀಬ್‌, ಡಾ.ಮುರುಳಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾಡಿ ಲಿಂಗರಾಜು, ಆರ್‌ಎಫ್‌ಓ ಗಳಾದ ಮೋಹನ್‌, ರಾಘವೇಂದ್ರ ಅಗಸೆ, ವಿನಯ್‌ಚಂದ್ರ, ಉಪ ವಲಯ ಅರಣ್ಯಾಧಿಕಾರಿಗಳಾದ ಪೃಥ್ವಿ, ಹೇಮಂತ್‌, ದಿನೇಶ್, ಗುರುರಾಜ್‌, ಪ್ರದೀಪ್, ಇಲಾಖೆ ಸಿಬ್ಬಂದಿ ಜೊತೆ ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ 7 ದಿನಗಳ ಕಾಲ ಜೀವದ ಹಂಗು ತೊರೆದು ಕಾರ್ಯಾಚರಣೆಯಲ್ಲಿ ತೊಡಗಿದ್ದರು.SHARE THIS

Author:

0 التعليقات: