Thursday, 14 January 2021

ಯಡಿಯೂರಪ್ಪ ಒಬ್ಬ ದುರ್ಬಲ ಸಿಎಂ : ಸಿದ್ದರಾಮಯ್ಯ


 ಯಡಿಯೂರಪ್ಪ ಒಬ್ಬ ದುರ್ಬಲ ಸಿಎಂ : ಸಿದ್ದರಾಮಯ್ಯ

ಮೈಸೂರು,ಜ.14- ಸಿಡಿಯನ್ನು ಮುಂದಿಟ್ಟುಕೊಂಡು ಬ್ಲಾಕ್‍ಮೇಲ್ ಮಾಡುತ್ತಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ದುರ್ಬಲರಾಗಿರುತ್ತಾರೋ ಅವರನ್ನೇ ಬ್ಲಾಕ್‍ಮೇಲ್ ಮಾಡಲು ಸಾಧ್ಯ. ಯಡಿಯೂರಪ್ಪನವರು ದುರ್ಬಲರಾಗಿದ್ದಾರೆ. ಹಾಗಾಗಿ ಬ್ಲಾಕ್‍ಮೇಲ್ ಮಾಡಲಾಗುತ್ತಿದೆ. ಬ್ಲಾಕ್‍ಮೇಲ್ ಮಾಡುವವರ ವಿರುದ್ಧ ದೂರು ನೀಡಬೇಕು. ಕ್ರಿಮಿನಲ್ ಕೇಸು ಹಾಕಿಸಬೇಕು. ಜತೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಸಿಡಿ ಮುಂದಿಟ್ಟುಕೊಂಡು ಬ್ಲಾಕ್‍ಮೇಲ್ ಮಾಡುತ್ತಿರುವವರು ಬಿಜೆಪಿಯ ಸದಸ್ಯರಾಗಿದ್ದಾರೆ. ಒಂದು ವೇಳೆ ನಾವೇನಾದರು ಮಾತನಾಡಿದರೆ ರಾಜಕೀಯಕ್ಕಾಗಿ ಪ್ರತಿಪಕ್ಷ ಆರೋಪ ಮಾಡುತ್ತಿದೆ ಎಂದು ಹೇಳುತ್ತಿದ್ದರು. ಈಗ ಅವರದೇ ಪಕ್ಷದ ಸದಸ್ಯರು ಹೇಳುತ್ತಿರುವುದರಿಂದ ಬಹುಶಃ ಅದರಲ್ಲಿ ಸತ್ಯ ಇದ್ದರೂ ಇರಬಹುದು ಎಂದರು.

ಬ್ಲಾಕ್‍ಮೇಲ್‍ನಿಂದಾಗಿ ಯಡಿಯೂರಪ್ಪ ಅವರು ಒತ್ತಡದಲ್ಲಿದ್ದಾರೋ, ತಾಪದಲ್ಲಿದ್ದಾರೋ ನನಗೆ ಗೊತ್ತಿಲ್ಲ. ಆದರೆ, ಈ ಹಿಂದೆ ಯಾವ ಮುಖ್ಯಮಂತ್ರಿಯನ್ನೂ ಈ ರೀತಿಯಾಗಿ ಬ್ಲಾಕ್‍ಮೇಲ್ ಮಾಡಿರಲಿಲ್ಲ. ಸಿಡಿ ವಿಚಾರಕ್ಕಾಗಿ ತನಿಖೆ ಮಾಡಿ ಎಂದು ನಾನು ಹೇಳುವುದಿಲ್ಲ. ಹೆದರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ರಾಜ್ಯ ಸರ್ಕಾರದಲ್ಲಿ ಇಬ್ಬರು ಮುಖ್ಯಮಂತ್ರಿಗಳು ಇದ್ದಾರೆ ಎಂದು ನಾನು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ. ಚುನಾಯಿತ ಮುಖ್ಯಮಂತ್ರಿ ಒಬ್ಬರಾದರೆ, ಅನಧಿಕೃತವಾಗಿ ಮತ್ತೊಬ್ಬರು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರ ಕುಟುಂಬದ ಸದಸ್ಯರ ಖಾತೆಗೆ 7.40 ಕೋಟಿ ಲಂಚದ ಹಣ ಬಿಡಿಎ ಹಗರಣದಲ್ಲಿ ಸಂದಾಯವಾಗಿದೆ. ಹಾಗಾಗಿ ಕುಟುಂಬದ ರಾಜಕಾರಣ ತೀವ್ರವಾಗಿದೆ ಎಂದು ಅವರು ಆರೋಪಿಸಿದರು.

ಬಿಜೆಪಿ ಸರ್ಕಾರ ಹಗರಣದಲ್ಲಿ ಮುಳುಗಿಹೋಗಿದೆ. ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿಲ್ಲ. ಈ ಹಿಂದೆ ನಮ್ಮ ಸರ್ಕಾರ ಜಾರಿ ಮಾಡಿದ ಯೋಜನೆಗಳನ್ನು ಕೂಡ ಸ್ಥಗಿತ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಷಯ ಚರ್ಚೆಯಲ್ಲಿ ಇಲ್ಲ ಎಂದಾದರೆ ಸಂಪುಟ ವಿಸ್ತರಣೆ ಮಾಡಲು ಇಷ್ಟು ದಿನ ವಿಳಂಬವಾಗಿದ್ದೇಕೆ ? ವರಿಷ್ಠರ ಕೈ-ಕಾಲು ಹಿಡಿದು ಅನುಮತಿಪಡೆದು ಸಂಪುಟ ವಿಸ್ತರಣೆ ಮಾಡಿದ್ದಾರೆ. ಅದರಲ್ಲೂ ಒಬ್ಬ ಸಚಿವರನ್ನು ಕೈ ಬಿಟ್ಟಿದ್ದಾರೆ. ಕಾಂಗ್ರೆಸ್ ಬೆಂಬಲದಿಂದ ಆಯ್ಕೆಯಾಗಿ ಆಪರೇಷನ್ ಕಮಲದಿಂದ ಬಿಜೆಪಿ ಸೇರಿದ ನಾಗೇಶ್ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ.

ಮುನಿರತ್ನ ಅವರನ್ನು ಸಚಿವರನ್ನಾಗಿ ಮಾಡಲು ಆಗುವುದಿಲ್ಲ ಎಂದಾಗಿದ್ದರೆ ಅವರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಸಚಿವ ಸ್ಥಾನ ಸಿಗದ ಕಾರಣಕ್ಕಾಗಿ ವಿಶ್ವನಾಥ್ ಬಾಯಿಬಾಯಿ ಬಡೆದುಕೊಳ್ಳುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.


SHARE THIS

Author:

0 التعليقات: