Friday, 15 January 2021

ವಾಟ್ಸಪ್ ಹೊಸ ಗೌಪ್ಯತೆ ನೀತಿ ಪ್ರಶ್ನಿಸಿ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ


ವಾಟ್ಸಪ್ ಹೊಸ ಗೌಪ್ಯತೆ ನೀತಿ ಪ್ರಶ್ನಿಸಿ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ

ನವ ದೆಹಲಿ: ಭಾರತ ಮಾತ್ರವಲ್ಲದೆ ವಿಶ್ವದಲ್ಲೇ ಅತ್ಯಂತ ಜನಪ್ರಿಯತೆ ಗಳಿಸಿರುವ ವಾಟ್ಸ್​​ಆ್ಯಪ್​ ಇದೀಗ ಸಾಕಷ್ಟು ವಿವಾದಗಳಲ್ಲಿ ಸಿಲುಕಿದೆ. ಕಳೆದ ಹಲವು ವರ್ಷಗಳಿಂದ ವಾಟ್ಸ್​ಆ್ಯಪ್ ತನ್ನ ಗ್ರಾಹಕರಿಗೆ ಸಂದೇಶ, ಧ್ವನಿ, ಫೋಟೋ, ವಿಡಿಯೋ, ಫೈಲ್​ಗಳನ್ನು ಉಚಿತವಾಗಿ ಕಳುಹಿಸುವ ಅವಕಾಶ ನೀಡಿತ್ತು. ಅಲ್ಲದೆ, ಈ ಎಲ್ಲಾ ಸಂದೇಶಗಳ ಗೌಪ್ಯತೆಯನ್ನು ಕಾಪಾಡುವ ಕುರಿತು ಗ್ರಾಹಕರಿಗೆ ಸ್ಪಷ್ಟ ಭರವಸೆ ನೀಡಿತ್ತು. ಈ ಸೌಲಭ್ಯಗಳು ಕೋಟ್ಯಾಂತರ ಜನರಿಗೆ ಅನುಕೂಲವಾಗಿ ಪರಿಣಮಿಸಿತ್ತು. ವಾಟ್ಸ್​ಆ್ಯಪ್​ ಜನಪ್ರಿಯವಾಗಲು ಇದೂ ಒಂದು ಕಾರಣ. ಆದರೆ, ವಾಟ್ಸ್​ಆ್ಯಪ್​ ಇದೀಗ ಹೊಸ ನೀತಿಯನ್ನು ಜಾರಿಗೆ ತಂದಿದೆ. ಕಳೆದ ಮಂಗಳವಾರ (ಜ.5) ತನ್ನ ಬಳಕೆದಾರರಿಗೆ ಸೇವಾ ನಿಯಮ ಮತ್ತು ಗೌಪ್ಯತೆ ನೀತಿಯನ್ನು ತಿಳಿಸಲು ನೋಟಿಫಿಕೇಶನ್ ಕಳುಹಿಸಿದೆ. ಅಲ್ಲದೆ, ವಾಟ್ಸ್ಆ್ಯಪ್ ನೋಟಿಫಿಕೇಶನ್ ಮೂಲಕ ಕಳುಹಿಸಿರುವ ಷರತ್ತುಗಳನ್ನು ಒಪ್ಪದೆ ಇದ್ದರೆ ಸ್ಮಾರ್ಟ್​ಫೋನ್​ನಲ್ಲಿದ್ದ ವಾಟ್ಸ್ಆ್ಯಪ್ ಡಿಲೀಟ್ ಆಗಲಿದೆ ಎಂದು ಎಚ್ಚರಿಕೆ ನೀಡಿದೆ. ಇದೀಗ ವಾಟ್ಸ್​ಆ್ಯಪ್​ನ ಈ ನಿಯಮವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.

ವಾಟ್ಸ್​ಆ್ಯಪ್​ನ ಹೊಸ ಗೌಪ್ಯತೆ ನೀತಿಯ ಪ್ರಕಾರ ವಾಟ್ಸ್​ಆ್ಯಪ್​ ತನ್ನ ಗ್ರಾಹಕರ ಸಂದೇಶ ಸೇರಿದಂತೆ ಯಾವುದೇ ವ್ಯಯಕ್ತಿಕ ಮಾಹಿತಿಯನ್ನು ಲಾಭಕ್ಕಾಗಿ ಮಾರಿಕೊಳ್ಳುವ ಅವಕಾಶವನ್ನು ಹೊಂದಿರುತ್ತದೆ ಎಂದು ಹೊಸ ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ಹೀಗಾಗಿ ವಾಟ್ಸ್ಆ್ಯಪ್ ತಂದಿರುವ ಈ ನಿರ್ಧಾರ ಸಾಕಷ್ಟು ಜನರಿಗೆ ಅಚ್ಚರಿಗೆ ಕಾರಣವಾಗಿದೆ. ಮತ್ತೊಂದೆಡೆ ಕೆಲವರು ಬೇರೆ ಆ್ಯಪ್​ಗಳತ್ತ ಮುಖ ಮಾಡಿದ್ದಾರೆ.

ಈ ನಡುವೆ ದೆಹಲಿ ಹೈಕೋರ್ಟ್‌ನಲ್ಲಿ ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯು ಬಳಕೆದಾರರ ಚಟುವಟಿಕೆಗಳನ್ನು ಪರಿಶೀಲಿಸಲು ಕಂಪನಿಗೆ ಅಧಿಕಾರ ನೀಡುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ವಕೀಲ ಚೈತನ್ಯ ರೋಹಿಲ್ಲಾ ಅವರು ಈ ಅರ್ಜಿಯನ್ನು ಸಲ್ಲಿಸಿದ್ದು, ಅವರು ತಮ್ಮ ಅರ್ಜಿಯಲ್ಲಿ ವಾಟ್ಸ್​ಆ್ಯಪ್​ನ ಹೊಸ ಗೌಪ್ಯತೆ ನೀತಿಯು ವ್ಯಕ್ತಿಯ ಖಾಸಗೀತನದ ಹಕ್ಕಿನ ಉಲ್ಲಂಘನೆಯಾಗಿದೆ ಹೇಳಿದ್ದಾರೆ. ಖಾಸಗೀತನದ ಹಕ್ಕನ್ನು ಸುಪ್ರೀಂ ಕೋರ್ಟ್ ಸಹ ಮೂಲಭೂತ ಹಕ್ಕು ಎಂದು ಈಗಾಗಲೇ ಘೋಷಿಸಿದೆ.

ಅರ್ಜಿಯಲ್ಲಿ "ವಾಟ್ಸ್​ಆ್ಯಪ್ ಮತ್ತು ಫೇಸ್‌ಬುಕ್‌ನಂತಹ ಪ್ಲಾಟ್‌ಫಾರ್ಮ್‌ಗಳು ಈಗಾಗಲೇ ಬಳಕೆದಾರರ ಡೇಟಾವನ್ನು ಮೂರನೇ ವ್ಯಕ್ತಿಯೊಂದಿಗೆ ಅನಧಿಕೃತ ರೀತಿಯಲ್ಲಿ ಹಂಚಿಕೊಳ್ಳುತ್ತಿವೆ. ಸರ್ಕಾರದಿಂದ ಅನುಮತಿ ಪಡೆಯದೆ ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯನ್ನು ರೂಪಿಸಲಾಗಿದೆ" ಎಂದು ಆರೋಪಿಸಲಾಗಿದೆ.

ಅರ್ಜಿದಾರರು ವಾಟ್ಸ್​ಆ್ಯಪ್ ಹೊಸ ಗೌಪ್ಯತೆ ನೀತಿ ಮತ್ತು ವ್ಯಕ್ತಿಗಳ ಖಾಸಗಿ ಹಕ್ಕನ್ನು ಗಮನದಲ್ಲಿಟ್ಟುಕೊಂಡು ವಾಟ್ಸ್​ಆ್ಯಪ್ ಬಳಕೆಗೆ ಮಾರ್ಗಸೂಚಿಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.


SHARE THIS

Author:

0 التعليقات: