ರೈತರನ್ನು ಪ್ರಚೋದಿಸುವ ಪಿತೂರಿ ವಿರುದ್ಧ ಮುಖಂಡರ ಎಚ್ಚರಿಕೆ
ಹೊಸದಿಲ್ಲಿ, ಜ.31: ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಪ್ರಚೋದಿಸುವ ಪಿತೂರಿ ನಡೆದಿದೆ ಎಂದು ರೈತ ಮುಖಂಡ ಬಲಬೀರ್ ಸಿಂಗ್ ರಾಜೇವಾಲ ಗಂಭೀರ ಆರೋಪ ಮಾಡಿದ್ದಾರೆ. ಆದರೆ ರೈತರು ಯಾವುದೇ ಹಿಂಸಾಕೃತ್ಯದಲ್ಲಿ ತೊಡಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
"ದಿಲ್ಲಿಯ ಗಡಿಗಳಲ್ಲಿ ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ. ಶನಿವಾರವೂ ಪ್ರತಿಭಟನೆ ಶಾಂತಿಯುತವಾಗಿತ್ತು" ಎಂದು ಭಾರತೀಯ ಕಿಸಾನ್ ಯೂನಿಯನ್ (ರಾಜೇವಾಲ್) ಸಂಘಟನೆಯ ಅಧ್ಯಕ್ಷರೂ ಆಗಿರುವ ಅವರು ಹೇಳಿದರು.
ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು, "ದಿಲ್ಲಿಯಲ್ಲಿ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ನಾನು ರೈತರನ್ನು ಕೋರುತ್ತಿದ್ದೇನೆ. ಆದರೆ ನಿಮ್ಮನ್ನು ಕೆಲವರು ಪ್ರಚೋದಿಸಿದರೂ, ಭಾವೋದ್ರೇಕದಿಂದ ಯಾವುದೇ ಕ್ರಮ ಕೈಗೊಳ್ಳಬೇಡಿ ಎಂದು ಮನವಿ ಮಾಡುತ್ತೇನೆ. ನಾವು ಯುದ್ಧಕ್ಕೆ ಹೋಗುತ್ತಿಲ್ಲ. ಇದು ನಮ್ಮ ದೇಶ ಮತ್ತು ನಮ್ಮ ಸರಕಾರ ಎನ್ನುವುದು ಮನಸ್ಸಿನಲ್ಲಿರಲಿ" ಎಂದು ಅಭಿಪ್ರಾಯಪಟ್ಟರು.
ಸ್ಥಳೀಯರು ಎಂದು ಹೇಳಿಕೊಂಡ ಗುಂಪು ಪ್ರತಿಭಟನಾಕಾರರ ಮೇಲೆ ಕಲ್ಲೆಸೆದ ಪ್ರಕರಣದ ಬೆನ್ನಲ್ಲೇ ರಾಜೇವಾಲ ಈ ಹೇಳಿಕೆ ನೀಡಿರುವುದಕ್ಕೆ ವಿಶೇಷ ಮಹತ್ವ ಬಂದಿದೆ. ಸ್ಥಳೀಯರು ರೈತರ ಜತೆಗಿದ್ದಾರೆ ಎಂದು ಪ್ರತಿಪಾದಿಸಿದ ಅವರು, ಸಿಂಘು ಗಡಿಯ ಘಟನೆಯ ಹಿಂದಿರುವವರು ಬಿಜೆಪಿ ಮತ್ತು ಆರೆಸ್ಸೆಸ್ ಮಂದಿ ಎಂದು ಆಪಾದಿಸಿದರು.
"ಸರಕಾರ ನಮ್ಮನ್ನು ಹಿಂಸೆಗೆ ಪ್ರಚೋದಿಸುತ್ತಿದೆ. ಆದರೆ ನಾವು ಯಾವುದೇ ಹಿಂಸಾಕೃತ್ಯದಲ್ಲಿ ತೊಡಗುವುದಿಲ್ಲ. ಯವುದೇ ಹಿಂಸೆ ತಡೆಯಲು ನಾವು ಎಚ್ಚರದಿಂದ ಇದ್ದೇವೆ" ಎಂದು ಸ್ಪಷ್ಟಪಡಿಸಿದರು.
0 التعليقات: