ಕೈ ತಪ್ಪಿದ ಸಚಿವ ಸ್ಥಾನ; ಅಪಚ್ಚು ರಂಜನ್ ಆಕ್ರೋಶ
ಮಡಿಕೇರಿ, ಜನವರಿ 17: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿದ್ದಾರೆ. 7 ಶಾಸಕರು ಸಂಪುಟವನ್ನು ಸೇರಿದ್ದಾರೆ. ಸಚಿವ ಸ್ಥಾನ ಸಿಗದ ಶಾಸಕರು ಬಹಿರಂಗವಾಗಿಯೇ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ದೆಹಲಿಯಲ್ಲಿರುವ ವರಿಷ್ಠರಿಗೂ ಸಹ ಹಲವು ಶಾಸಕರು ದೂರು ನೀಡಿದ್ದಾರೆ.
ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಕಾರಣ ಅನೇಕ ಶಾಸಕರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಮುಖ್ಯ ಮಂತ್ರಿಗಳನ್ನು ನಿಂದಿಸುವ ಮಟ್ಟಕ್ಕೂ ಆಕ್ರೋಶ ವ್ಯಕ್ತವಾಗಿದೆ. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, "ಪಕ್ಷದಲ್ಲಿ ಬಕೆಟ್ ಹಿಡಿದವರಿಗೆ ಸಚಿವ ಸ್ಥಾನ ಕೊಡಲಾಗುತ್ತಿದೆ, ಪ್ರಾಮಾಣಿಕರಿಗೆ ಬೆಲೆ ಇಲ್ಲದಂತಾಗಿದೆ" ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
"ಈ ಹಿಂದೆ ಸಂಘ ಪರಿವಾರದವರು ಸುಮ್ಮನಿರಲು ಹೇಳಿದಾಗ ಪಕ್ಷದ ವಿಚಾರ ಬೀದಿಗೆ ಬರಬಾರದು ಎಂದು ಸುಮ್ಮನೆ ಇದ್ದೆವು. ಆದರೆ, ಈಗ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ" ಎಂದು ಆರೋಪಿಸಿದರು.
"ಹುಣಸೂರು ವಿಧಾನ ಸಭಾ ಉಪ ಚುನಾವಣೆಯಲ್ಲಿ ನಾನು ಚುನಾವಣಾ ಉಸ್ತುವಾರಿ ವಹಿಸಿದ್ದೆ. ಆದರೆ, ಉಪ ಚುನಾವಣೆಯಲ್ಲಿ ವಿಶ್ವನಾಥ್ ಸೋಲಲು ಸಿ. ಪಿ. ಯೋಗೇಶ್ವರ್ ಅವರೇ ಕಾರಣ ಎಂಬುದು ಸತ್ಯವಾಗಿದೆ. ಅಂಥವರಿಗೆ ಸಚಿವ ಸ್ಥಾನ ಕೊಟ್ಟಿರುವುದು ದುರಂತ" ಎಂದು ಅಪಚ್ಚು ರಂಜನ್ ಹೇಳಿದರು.
"ಪಕ್ಷಕ್ಕಾಗಿ ದುಡಿದವರನ್ನು ಮೂಲೆಗುಂಪು ಮಾಡಲಾಗಿದೆ. ರಾಜ್ಯದ ಈ ಎಲ್ಲಾ ಬೆಳವಣಿಗೆಯನ್ನು ಕೇಂದ್ರದ ನಾಯಕರಿಗೆ ತಿಳಿಸುವುದಾಗಿ" ಅಪ್ಪಚ್ಚು ರಂಜನ್ ತಿಳಿಸಿದರು.
ಸಚಿವ ಸ್ಥಾನ ಸಿಗದ ಅನೇಕ ಶಾಸಕರು ಚನ್ನಪಟ್ಟಣದಲ್ಲಿ ವಿಧಾನಸಭೆ ಚುನಾವಣೆ ಸೋತ ಸಿ. ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
0 التعليقات: