ಗಾಂಧಿ ಹಂತಕ ಗೋಡ್ಸೆಯನ್ನು 'ದೇಶಭಕ್ತ' ಎಂದು ಕರೆದು ಮತ್ತೆ ವಿವಾದದ ಕಿಡಿ ಹಚ್ಚಿದ ಸಂಸದೆ ಪ್ರಜ್ಞಾ ಠಾಕೂರ್
ಉಜ್ಜಯಿನಿ: ಭೋಪಾಲ್ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಮಹಾತ್ಮ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯನ್ನು "ದೇಶಭಕ್ತ" ಎಂದೆನ್ನುವ ಮೂಲಕ ಮತ್ತೊಮ್ಮೆ ವಿವಾದ ಎಬ್ಬಿಸಿದ್ದಾರೆ.
2008 ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಪ್ರಜ್ಞಾ ಠಾಕೂರ್ ಮಂಗಳವಾರ ಸಂಜೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ "ಆ ಪಕ್ಷದವರು ಯಾವಾಗಲೂ ನಿಜವಾದ ದೇಶಭಕ್ತರನ್ನು ನಿಂದಿಸುತ್ತಾರೆ" ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಗೋಡ್ಸೆಯನ್ನು "ಮೊದಲ ಭಯೋತ್ಪಾದಕ" ಎಂದು ಬಣ್ಣಿಸಿದ ಹಿನ್ನೆಲೆಯಲ್ಲಿ ಸಂಸದೆ ಈ ಪ್ರತಿಕ್ರಿಯೆ ನೀಡಿದ್ದಾರೆ.
"ಕಾಂಗ್ರೆಸ್ ಯಾವಾಗಲೂ ನಿಜ ದೇಶಭಕ್ತರನ್ನು ನಿಂದಿಸುತ್ತದೆ, ಅವರನ್ನು 'ಕೇಸರಿ ಭಯೋತ್ಪಾದಕರು' ಎಂದು ಕರೆಯುತ್ತದೆ. ಇದಕ್ಕಿಂತ ಕೆಟ್ಟದ್ದೇನನ್ನೂ ಹೇಳಲು ಸಾಧ್ಯವಿಲ್ಲ.ಈ ವಿಷಯದ ಬಗ್ಗೆ ಹೆಚ್ಚಿನದನ್ನು ಹೇಳಲು ನಾನು ಬಯಸುವುದಿಲ್ಲ" ಎಂದು ಗೋಡ್ಸೆ ಕುರಿತು ಸಂಸದೆ ಪ್ರಜ್ಞಾ ಠಾಕೂರ್ ಸುದ್ದಿಗಾರರಿಗೆ ತಿಳಿಸಿದರು.
ಮೇ 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಜ್ಞಾ ಠಾಕೂರ್ ಗೋಡ್ಸೆಯನ್ನು "ದೇಶಭಕ್ತ"ನೆಂದು ಕರೆಯುವ ಮೂಲಕ ಭಾರಿ ವಿವಾದವನ್ನು ಹುಟ್ಟುಹಾಕಿದ್ದರು, ಆದರೆ ನಂತರ ಆ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿ ಹೇಳಿಕೆಯನ್ನು ಹಿಂತೆಗೆದುಕೊಂಡರು. ಸಂಸತ್ತಿನ ಕೆಳಮನೆಯಲ್ಲಿ ಗೋಡ್ಸೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ 2019 ರ ನವೆಂಬರ್ನಲ್ಲಿ ಬಿಜೆಪಿ ಸಂಸದೆ ಲೋಕಸಭೆಯಲ್ಲಿ ಕ್ಷಮೆಯಾಚಿಸಿದ್ದರು.
ಕಳೆದ ಭಾನುವಾರ, ಹಿಂದೂ ಮಹಾಸಭಾ ಗ್ವಾಲಿಯರ್ನಲ್ಲಿ ಗೋಡ್ಸೆ ಹೆಸರಿನ ಅಧ್ಯಯನ ಕೇಂದ್ರವನ್ನು ತೆರೆದಿತ್ತು. ಆದರೆ ರಡು ದಿನಗಳ ನಂತರ ಜಿಲ್ಲಾಡಳಿತದ ಹಸ್ತಕ್ಷೇಪದ ಹಿನ್ನೆಲೆ ಅದನ್ನು ಮುಚ್ಚಲಾಯಿತು. ಎಬಿವಿಪಿ (ಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷತ್) ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಜೆಪಿ ಸಂಸದೆ ಉಜ್ಜಯಿನಿಗೆ ಆಗಮಿಸಿದ್ದರು.,
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ಬಗ್ಗೆ ಜಾಗೃತಿ ಮೂಡಿಸಲು ರ್ಯಾಲಿಗಳನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸುವ ಕಲ್ಲು ತೂರಾಟಗಾರರೊಂದಿಗೆ ಕಟ್ಟುನಿಟ್ಟಾಗಿ ವ್ಯವಹರಿಸಿದ್ದಕ್ಕಾಗಿ ಮಧ್ಯಪ್ರದೇಶದ ಬಿಜೆಪಿ ಸರ್ಕಾರವನ್ನು ಸಂಸದೆ ಶ್ಲಾಘಿಸಿದ್ದಾರೆ.
0 التعليقات: