ಮೃತರ ಹೆಸರಿನಲ್ಲಿ ಪಿಂಚಣಿ, ಪಡಿತರ ಪಡೆಯುತ್ತಿರುವವರಿಗೆ ಬಿಗ್ ಶಾಕ್!
ಬೆಂಗಳೂರು : ಮೃತರ ಹೆಸರಿನಲ್ಲಿ ಪಿಂಚಣಿ ಹಾಗೂ ಪಡಿತರ ಪಡೆಯುತ್ತಿರುವುದನ್ನು ಒಂದು ತಿಂಗಳಲ್ಲಿ ತಡೆದು ಸೂಕ್ತ ಕ್ರಮಕೈಗೊಳ್ಳುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಡಿಸಿ, ಸಿಇಒಗಳ ಸಭೆಯಲ್ಲಿ ಮಾತನಾಡಿದ ಸಿಎಂ ಬಿಎಸ್ ವೈ, ಮೃತರಿಗೆ ಪೆನ್ಷನ್ ಹಾಗೂ ಪಡಿತರ ಹೋಗುತ್ತಿದ್ದು, ಇದನ್ನು ಒಂದು ತಿಂಗಳಲ್ಲಿ ತಡೆದು ಕ್ರಮ ವಹಿಸುವಂತೆ ಗಡವು ನೀಡಿದ್ದಾರೆ. ಮೃತಪಟ್ಟವರ ಹೆಸರಿನಲ್ಲಿ ವಿವಿಧ ಪಿಂಚಣಿಗಳ ದುರ್ಬಳಕೆ ಪ್ರಕರಣ ಪತ್ತೆಯಾಗಿರುವ ವಿಷಯ ತಿಳಿದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಮಾಜಿಕ ಭದ್ರತಾ ಯೋಜನೆಯಡಿ ಮೃತಪಟ್ಟ ಫಲಾನುಭವಿಗಳಿಗೆ ಪಿಂಚಣಿ ಪಾವತಿಯಾಗುತ್ತಿದೆ ಮತ್ತು ಪಡಿತರ ವಿತರಣೆಯಾಗುತ್ತಿದೆ. ರಾಜ್ಯದಲ್ಲಿ 67 ಲಕ್ಷ ಜನರಿಗೆ ಪಿಂಚಣಿ ಹೋಗುತ್ತಿದ್ದು, ಪ್ರತಿ ವರ್ಷ ಏಳೂವರೆ ಸಾವಿರ ಕೋಟಿ ರೂ. ಖರ್ಚಾಗುತ್ತಿದೆ. 67 ಲಕ್ಷ ಜನರ ಪೈಕಿ ಶೇ. 20 ರಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಮೃತ ವ್ಯಕ್ತಿಗಳಿಗೆ ಪಾವತಿಯಾಗುತ್ತಿರುವ ಪಿಂಚಣಿ ನಿಲ್ಲಿಸಿದರೆ ಅಂದಾಜು 600 ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ಉಳಿತಾಯವಾಗಲಿದೆ ಎಂದು ಹೇಳಿದ್ದಾರೆ.
0 التعليقات: