ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ವಿವಾದಾಸ್ಪದ ತೀರ್ಪು ನೀಡಿದ್ದ ಜಡ್ಜ್ ಕುರಿತು ಸುಪ್ರೀಂ ಕೋರ್ಟ್ ಹೇಳಿದ್ದೇನು?
ಹೊಸದಿಲ್ಲಿ,ಜ.30: ಎರಡು ಲೈಂಗಿಕ ಕಿರುಕುಳ ಪ್ರಕರಣಗಳಲ್ಲಿ ವಿವಾದಾಸ್ಪದ ತೀರ್ಪುಗಳನ್ನು ನೀಡಿದ ಬಾಂಬೆ ಹೈಕೋರ್ಟಿನ ನಾಗ್ಪುರ್ ಪೀಠದ ನ್ಯಾಯಾಧೀಶೆ ಪುಷ್ಪಾ ಗನೇಡಿವಾಲ ಅವರ ಖಾಯಮಾತಿ ಕುರಿತಂತೆ ತಾನು ನೀಡಿದ ಶಿಫಾರಸನ್ನು ಸುಪ್ರೀಂ ಕೋರ್ಟ್ ಕೊಲೀಜಿಯಂ ಅಪರೂಪದ ನಿರ್ದಶನದಲ್ಲಿ ವಾಪಸ್ ಪಡೆದಿದೆ.
"ವೈಯಕ್ತಿಕವಾಗಿ ಆಕೆಯ ವಿರುದ್ಧ ಯಾವುದೇ ಅಭಿಪ್ರಾಯವಿಲ್ಲ. ಆದರೆ ಆಕೆಗೆ ಇನ್ನಷ್ಟು ಅನುಭವದ ಅಗತ್ಯವಿದೆ ಹಾಗೂ ಪ್ರಾಯಶಃ ವಕೀಲೆಯಾಗಿದ್ದಾಗ ಆಕೆ ಇಂತಹ ಪ್ರಕರಣಗಳನ್ನು ನಿಭಾಯಿಸದೇ ಇರಲಿಕ್ಕಿಲ್ಲ. ಆಕೆಗೆ ಇನ್ನಷ್ಟು ತರಬೇತಿ ಅಗತ್ಯವಿದೆ" ಎಂದು ಸುಪ್ರೀಂ ಕೋರ್ಟ್ ಮೂಲವೊಂದು ತಿಳಿಸಿದೆ.
ನಾಗ್ಪುರ್ ಪೀಠದ ಖಾಯಂ ನ್ಯಾಯಾಧೀಶೆಯಾಗಿ ಆಕೆಯ ಹೆಸರನ್ನು ಕೊಲೀಜಿಯಂ ಜನವರಿ 20ರಂದು ದೃಢೀಕರಿಸಿತ್ತು. ಆದರೆ ಆಕೆ ಇತ್ತೀಚೆಗೆ ನೀಡಿದ್ದ ಕೆಲವೊಂದು ತೀರ್ಪುಗಳು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದವು.
ವಸ್ತ್ರದ ಮೇಲಿನಿಂದ ಅಪ್ರಾಪ್ರೆಯೊಬ್ಬಳ ಎದೆ ಸವರುವುದು ಪೋಕ್ಸೋ ಕಾಯಿದೆಯಡಿ ಲೈಂಗಿಕ ದೌರ್ಜನ್ಯವಲ್ಲ ಎಂದು ಜನವರಿ 19ರಂದು ನೀಡಿದ್ದ ಒಂದು ತೀರ್ಪಿನಲ್ಲಿ ಆಕೆ ಹೇಳಿದ್ದರು. ಈ ತೀರ್ಪಿಗೆ ಸುಪ್ರೀಂ ಕೋರ್ಟ್ ಬುಧವಾರ ತಡೆ ಹೇರಿತ್ತಲ್ಲದೆ ಇಂತಹ ತೀರ್ಪುಗಳು ಕಳವಳಕಾರಿ ಹಾಗೂ ಅಪಾಯಕಾರಿ ಪೂರ್ವನಿರ್ದಶನವಾಗಬಹುದು ಎಂದು ಹೇಳಿತ್ತು.
ಗುರುವಾರ ಇನ್ನೊಂದು ಪ್ರಕರಣದಲ್ಲಿ ಆಕೆ ಸಂತ್ರಸ್ತೆಯ ಕೈಗಳನ್ನು ಹಿಡಿಯುವುದು ಅಥವಾ ಆರೋಪಿ ತನ್ನ ಪ್ಯಾಂಟ್ ಜಿಪ್ ತೆರೆಯುವುದು ಲೈಂಗಿಕ ಕಿರುಕುಳವೆಂದು ಎಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರಲ್ಲದೆ ಪೋಕ್ಸೋ ಅಡಿ ದೋಷಿ ಎಂದು ಘೋಷಿತವಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಿದ್ದರು. ಈ ಪ್ರಕರಣದಲ್ಲಿ ಸಂತ್ರಸ್ತೆ 5 ವರ್ಷದ ಬಾಲಕಿಯಾಗಿದ್ದಳು.
0 التعليقات: