Sunday, 10 January 2021

ಸಂಕ್ರಾಂತಿಯೊಳಗೆ ಸಂಪುಟ ವಿಸ್ತರಣೆ ಫಿಕ್ಸ್! ಮಂತ್ರಿ ಭಾಗ್ಯ ಯಾರಿಗೆ?


ಸಂಕ್ರಾಂತಿಯೊಳಗೆ ಸಂಪುಟ ವಿಸ್ತರಣೆ ಫಿಕ್ಸ್! ಮಂತ್ರಿ ಭಾಗ್ಯ ಯಾರಿಗೆ?

ಬೆಂಗಳೂರು,ಜ.10 - ಹಲವು ದಿನಗಳಿಂದ ಒಂದಿಲ್ಲೊಂದು ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ ಸಂಕ್ರಾಂತಿ ಹಬ್ಬದೊಳಗೆ ನಡೆಯುವುದು ಬಹುತೇಕ ಖಚಿತವಾಗಿದೆ. ವರಿಷ್ಠರ ಬುಲಾವ್ ಮೇರೆಗೆ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ/ಪುನರಾಚನೆಯನ್ನು ಏಕಕಾಲದಲ್ಲಿ ನಡೆಸಲು ಅವಕಾಶ ಕೊಡಬೇಕೆಂಬ ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ.

ಎಲ್ಲವೂ ನಿರೀಕ್ಷೆಯಂತೆ ನಡೆದರೆ ಸಂಕ್ರಾಂತಿ ಹಬ್ಬದೊಳಗೆ ವಿಸ್ತರಣೆ ಅಥವಾ ಪುನಾರಚನೆ ನಡೆಯಲಿದ್ದು, ಸಂಪುಟಕ್ಕೆ 7ರಿಂದ 8 ಸಚಿವರು ಸೇರ್ಪಡೆಯಾಗಲಿದ್ದಾರೆ. ವಿಧಾನಪರಿಷತ್‍ನಿಂದ ಮೂವರು ಹಾಗೂ ವಿಧಾನಸಭೆಯಿಂದ 5-6 ಮಂದಿ ಶಾಸಕರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಸಿಎಂ ಯಡಿಯೂರಪ್ಪ ತೀರ್ಮಾನಿಸಿದ್ದು, ಮುಂದಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ 2ರಿಂದ 3 ಸ್ಥಾನವನ್ನು ಭರ್ತಿ ಮಾಡದೆ ಹಾಗೇ ಉಳಿಸಿಕೊಳ್ಳುವ ಸಂಭವವೂ ಇದೆ.

ಸಂಕ್ರಾಂತಿಯೊಳಗೆ ಸಂಪುಟ ವಿಸ್ತರಣೆಗೆ ವರಿಷ್ಠರು ಹಸಿರುನಿಶಾನೆ ತೋರಿದರೆ ವಿಧಾನಪರಿಷತ್ ಸದಸ್ಯರಾದ ಎಂಟಿಬಿ ನಾಗರಾಜ್, ಆರ್.ಶಂಕರ್, ಸಿ.ಪಿ.ಯೋಗೇಶ್ವರ್, ಶಾಸಕರಾದ ಉಮೇಶ್ ಕತ್ತಿ(ಹುಕ್ಕೇರಿ), ಎಸ್.ಸುನೀಲ್‍ಕುಮಾರ್(ಕಾರ್ಕಳ), ಅರವಿಂದ ಲಿಂಬಾವಳಿ(ಮಹದೇವಪುರ), ಬಸವನಗೌಡ ಪಾಟೀಲ್ ಯತ್ನಾಳ್(ವಿಜಯಪುರ), ಎಂ.ಪಿ.ರೇಣುಕಾ ಚಾರ್ಯ(ಹೊನ್ನಾಳಿ), ತಿಪ್ಪಾರೆಡ್ಡಿ(ಚಿತ್ರದುರ್ಗ) ಅವರು ಸಚಿವರಾಗುವ ಸಾಧ್ಯತೆ ಹೆಚ್ಚಾಗಿದೆ.

ಯಡಿಯೂರಪ್ಪನವರ ಒತ್ತಾಸೆಯಂತೆ ಕೇಂದ್ರ ಹೈಕಮಾಂಡ್ ಸಂಪುಟ ಪುನಾರಚನೆಗೂ ಅವಕಾಶ ಕೊಟ್ಟರೆ ಹಾಲಿ ಸಂಪುಟದಲ್ಲಿರುವ ನಾಲ್ವರಿಂದ ಐದು ಸಚಿವರ ತಲೆದಂಡವಾಗುವ ಸಾಧ್ಯತೆಯೂ ಇದೆ.ಸಂಪುಟದಿಂದ ಹೊರಗುಳಿಯುವವರ ಪಟ್ಟಿಯಲ್ಲಿ ಆಗಾಗ್ಗೆ ಕೇಳಿಬರುತ್ತಿರುವ ಹೆಸರಿನಲ್ಲಿ ಸಿ.ಸಿ.ಪಾಟೀಲ್, ಕೋಟಾ ಶ್ರೀನಿವಾಸಪೂಜಾರಿ, ಪ್ರಭು ಚವ್ಹಾಣ್, ಶಶಿಕಲಾ ಜೊಲ್ಲೆ ಹೆಸರುಗಳು ಪಟ್ಟಿಯಲ್ಲಿದೆ.

ಇದರ ಜೊತೆಗೆ ಕೆಲವು ಹಿರಿಯ ಸಚಿವರನ್ನು ಪಕ್ಷದ ಸಂಘಟನೆಗೆ ನಿಯೋಜನೆ ಮಾಡಬೇಕೆಂಬುದು ವರಿಷ್ಠರ ಇಚ್ಛೆಯಾಗಿದೆ. ಹಾಗೊಂದು ವೇಳೆ ಅದು ನಿಜವೇ ಆದರೆ ಹಿರಿಯ ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವಪ್ಪ ಸ್ಥಾನ ಕಳೆದುಕೊಂಡರೂ ಅಚ್ಚರಿಯಿಲ್ಲ.

ಆದರೆ ಅವೇಶನದ ಸಂದರ್ಭದಲ್ಲಿ ಸರ್ಕಾರವನ್ನು ಪ್ರಬಲವಾಗಿ ಸಮರ್ಥಿಸಿಕೊಳ್ಳಲು ಹಿರಿಯ ಸಚಿವರ ಅಗತ್ಯತೆ ಇದೆ ಎಂದು ವರಿಷ್ಠರಿಗೆ ಮನವಿ ಮಾಡಿಕೊಟ್ಟರೆ ಇವರುಗಳು ಮುಂದುವರೆಯಲೂಬಹುದು. ಈ ಬಾರಿ ಹಿರಿಯರು, ಕಿರಿಯರು ಒಳಗೊಂಡ, ಪಕ್ಷಕ್ಕೆ ಸಲ್ಲಿಸಿದ ಸೇವೆ, ಸಂಘಟನೆ, ಜಾತಿ, ಪ್ರದೇಶವಾರು ಇವೆಲ್ಲವನ್ನೂ ಪರಿಗಣಿಸಿ ಸಂಪುಟಕ್ಕೆ ಇಂಥವರನ್ನೇ ತೆಗೆದುಕೊಳ್ಳಬೇಕೆಂದು ವರಿಷ್ಠ ನಾಯಕರು ಸಿಎಂಗೆ ಸ್ಪಷ್ಟವಾಗಿ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಕರಾವಳಿ ಭಾಗದಿಂದ ಕೋಟಾ ಶ್ರೀನಿವಾಸ್ ಪೂಜಾರಿಯನ್ನು ಕೈಬಿಟ್ಟರೆ ಅದೇ ಸಮುದಾಯಕ್ಕೆ ಸೇರಿರುವ ಯುವಕ ಸುನೀಲ್‍ಕುಮಾರ್‍ಗೆ ಅದೃಷ್ಟ ಖುಲಾಯಿಸಬಹುದು. ಸತತ 6 ಬಾರಿ ಗೆದ್ದು ಬಂದಿರುವ ಹಿರಿಯ ಶಾಸಕ ಸುಳ್ಯದ ಅಂಗಾರಗೂ ಈ ಬಾರಿ ಕರವಾಳಿ ಭಾಗದಿಂದಲೇ ಸಚಿವರಾಗುಬಹುದೆಂದು ಹೇಳಲಾಗಿದೆ.

ಇನ್ನು ಉಳಿದಂತೆ ಮಧ್ಯಕರ್ನಾಟಕ ಭಾಗದಿಂದ ಲಿಂಗಾಯಿತ ಸಮುದಾಯ ಹಾಗೂ ಸಿಎಂ ಯಡಿಯೂರಪ್ಪನವರ ಬಲಗೈ ಭಂಟ ಎಂ.ಪಿ.ರೇಣುಕಾಚಾರ್ಯ, ರೆಡ್ಡಿ ಸಮುದಾಯದಿಂದ ತಿಪ್ಪಾರೆಡ್ಡಿ, ಬೆಂಗಳೂರು ಭಾಗದಿಂದ ಅರವಿಂದ ಲಿಂಬಾವಳಿ, ಬೆಳಗಾವಿಯಿಂದ ಪ್ರಬಲ ವೀರಶೈವ ಸಮುದಾಯಕ್ಕೆ ಸೇರಿದ ಉಮೇಶ್ ಕತ್ತಿ, ಕಲ್ಯಾಣ ಕರ್ನಾಟಕದಿಂದ ವಿವಾದಗಳನ್ನು ಎಬ್ಬಿಸುತ್ತಿರುವ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ಮೇಲ್ಮನೆಯಿಂದ ಮೂವರು ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಪ್ರಸ್ತುತ ಗ್ರಾಮಪಂಚಾಯ್ತಿ ಚುನಾವಣೆ ಮುಗಿದಿರುವುದರಿಂದ ಮುಂಬರುವ ಬೆಳಗಾವಿ ಲೋಕಸಭೆ, ವಿಧಾನಸಭೆ ಎರಡು ಕ್ಷೇತ್ರಗಳ ಉಪಚುನಾವಣೆ ನಂತರ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆ ಎದುರಾಗುವ ಕಾರಣ ಕೂಡಲೇ ಸಂಪುಟ ವಿಸ್ತರಣೆಗೆ ಅವಕಾಶ ನೀಡಬೇಕೆಂದು ಸಿಎಂ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಸಂಪುಟ ವಿಸ್ತರಣೆಗೆ ಕೆಲವು ಶಾಸಕರು ನನ್ನ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ. ಇದಕ್ಕೆ ಸಮ್ಮತಿ ನೀಡಬೇಕೆಂದು ಬಿಎಸ್‍ವೈ ಅವರು ಹೈಕಮಾಂಡ್ ಬಳಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.


SHARE THIS

Author:

0 التعليقات: