ಕೃಷಿ ಕಾಯ್ದೆ: ಪಟ್ಟು ಬಿಡದ ರೈತರು- 9ನೇ ಸುತ್ತಿನ ಮಾತುಕತೆಯೂ ವಿಫಲ
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಯ ಬಿಕ್ಕಟ್ಟು ಇಷ್ಟು ಸುಲಭದಲ್ಲಿ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇವತ್ತು ರೈತರು ಮತ್ತು ಕೇಂದ್ರದ ಜತೆ ನಡೆದಿರುವ 9 ನೇ ಸುತ್ತಿನ ಮಾತುಕತೆ ಕೂಡ ವಿಫಲವಾಗಿದೆ.
ಮೂಲಗಳ ಪ್ರಕಾರ, ರೈತರು ಕಾನೂನುಗಳನ್ನು ರದ್ದುಗೊಳಿಸುವ ತಮ್ಮ ಮೂಲ ಬೇಡಿಕೆಗೆ ಪಟ್ಟು ಹಿಡಿದಿದ್ದಾರೆ ಮತ್ತು ತಿದ್ದುಪಡಿಗಳನ್ನು ನೀಡುವ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಆದರೆ ಈ ಕುರಿತು ಇಂದು ನಡೆದ ಮಾತುಕತೆ ಯಾವುದೇ ಫಲ ನೀಡಿಲ್ಲ ಎನ್ನಲಾಗಿದೆ. ಮುಂದಿನ ಸುತ್ತಿನ ಮಾತುಕತೆ ಜನವರಿ 19 ರಂದು ಮಧ್ಯಾಹ್ನ 12.00 ಗಂಟೆಗೆ ನಿಗದಿಯಾಗಿದೆ.
ಇಂದಿನ ಸಭೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ, ವಾಣಿಜ್ಯ ಮತ್ತು ಆಹಾರ ಸಚಿವ ಪಿಯೂಷ್ ಗೋಯಲ್ ಮತ್ತು ವಾಣಿಜ್ಯ ಸಚಿವ ಸೋಮ್ ಪ್ರಕಾಶ್ ಅವರು ಸುಮಾರು 40 ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಭಾಗವಹಿಸಿದ್ದರು.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಈ ಕುರಿತು ಮಾತನಾಡಿ, ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಯತ್ನಿಸುತ್ತಿದ್ದೇವೆ. ತೀವ್ರವಾದ ಚಳಿಯಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ ಎಂದು ತಿಳಿಸಿದ್ದಾರೆ.
ಸಭೆಗೆ ತೆರಳುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ನರೇಂದ್ರ ಸಿಂಗ್ ತೊಮರ್, ರೈತರ ಪ್ರತಿಭಟನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಸರ್ಕಾರ ಸ್ವಾಗತಿಸುತ್ತದೆ. ಸುಪ್ರೀಂ ಕೋರ್ಟ್ ರಚಿಸಿರುವ ಸಮಿತಿ ಮುಂದೆ ಸರ್ಕಾರ ತನ್ನ ನಿಲುವನ್ನು ತಿಳಿಸಲಿದೆ. ರೈತರ ಜೊತೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದ್ದರು.
0 التعليقات: