83 ತೇಜಸ್ ಯುದ್ಧ ವಿಮಾನ ಖರೀದಿಗೆ ಸಂಪುಟ ಅಸ್ತು
ಹೊಸದಿಲ್ಲಿ: ಭಾರತೀಯ ವಾಯುಪಡೆಗೆ ಹಾಗೂ ಪ್ರಧಾನಿ ಮೋದಿ ಅವರ “ಆತ್ಮನಿರ್ಭರತೆ’ಯ ಕರೆಗೆ ಅತಿದೊಡ್ಡ ಯಶಸ್ಸು ಎಂಬಂತೆ, ಬೆಂಗಳೂರಿನ ಎಚ್ಎಎಲ್ (ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್)ನಿಂದ 83 ಲಘು ಯುದ್ಧ ವಿಮಾನ “ತೇಜಸ್’ ಅನ್ನು ಖರೀದಿಸಲು ಬುಧವಾರ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ.
48 ಸಾವಿರ ಕೋಟಿ ರೂ. ವೆಚ್ಚದ ಡೀಲ್ ಇದಾಗಿದ್ದು, ಸ್ವದೇಶಿ ಸೇನಾ ವಿಮಾನ ವಲಯದಲ್ಲೇ ಇಷ್ಟು ದೊಡ್ಡ ಪ್ರಮಾಣದ ಖರೀದಿ ನಡೆಯುತ್ತಿರುವುದು ಇದೇ ಮೊದಲು ಎಂದು ಹೇಳಲಾಗಿದೆ.
ಸರಕಾರವು 73 ಎಲ್ಸಿಎ ತೇಜಸ್ ಎಂಕೆ-1ಎ ಯುದ್ಧ ವಿಮಾನ ಮತ್ತು 10 ಎಲ್ಸಿಎ ತೇಜಸ್ ಎಂಕೆ-1 ತರಬೇತಿ ವಿಮಾ ನಗಳನ್ನು ಖರೀದಿಸಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ(ಸಿಸಿಎಸ್) ಈ ಖರೀದಿ ಪ್ರಸ್ತಾವಕ್ಕೆ ಒಪ್ಪಿಗೆಯ ಮುದ್ರೆಯೊತ್ತಿದೆ.
ವಾಯುಪಡೆಯ ಬೆನ್ನೆಲುಬು: ಮುಂದಿನ ದಿನಗಳಲ್ಲಿ ಎಲ್ಸಿಎ ತೇಜಸ್ ವಿಮಾನವು ವಾಯುಪಡೆಯ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಲಿದೆ. ಈವರೆಗೆ ದೇಶದಲ್ಲಿ ಎಲ್ಲೂ ಬಳಸದಂತಹ ಹೊಸ ಹೊಸ ತಂತ್ರಜ್ಞಾನಗಳನ್ನು ಈ ವಿಮಾನದಲ್ಲಿ ಅಳವಡಿಸಲಾಗಿದೆ. ಇದು ಸಮರ ವಿಮಾನದಲ್ಲಿ ಮೊತ್ತಮೊದಲ ಆಖೀY (ಸ್ವದೇಶದಲ್ಲೇ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ, ಉತ್ಪಾದಿಸಲಾದ) ಕೆಟಗರಿಯ ಖರೀದಿ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಶೇ.50ರಷ್ಟು ಸ್ವದೇಶಿ ಪರಿಕರಗಳಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಶೇ.60ಕ್ಕೇರಲಿದೆ ಎಂದು ಸರಕಾರ ತಿಳಿಸಿದೆ. ಜತೆಗೆ, ಡ್ನೂಟಿ ಸ್ಟೇಶನ್ಗಳಲ್ಲೇ ಈ ವಿಮಾನಗಳ ರಿಪೇರಿ ಅಥವಾ ಸರ್ವೀಸಿಂಗ್ಗೆ ಅನುಕೂಲ ಕಲ್ಪಿಸುವಂತೆ ಮೂಲಸೌಕರ್ಯ ಅಭಿವೃದ್ಧಿಗೂ ಸಂಪುಟದ ಒಪ್ಪಿಗೆ ಸಿಕ್ಕಿದೆ.
ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯುವ ಏರೋ ಇಂಡಿಯಾ ಶೋ ವೇಳೆ ವಾಯುಪಡೆಯು ಎಚ್ಎಎಲ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ. 2026ರ ವೇಳೆಗೆ ಎಚ್ಎಎಲ್ ಈ ವಿಮಾನಗಳನ್ನು ಹಸ್ತಾಂತರ ಮಾಡುವ ನಿರೀಕ್ಷೆಯಿದೆ.
ಯುಎಇ ಜತೆಗೆ ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದಲ್ಲಿ ಒಪ್ಪಂದ :
ಸಂಯುಕ್ತ ಅರಬ್ ಗಣರಾಜ್ಯ (ಯುಎಇ) ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಹಕಾರ ಕ್ಷೇತ್ರದಲ್ಲಿ ಸಹಭಾಗಿತ್ವ ಹೊಂದುವ ಬಗ್ಗೆ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿದೆ. ಕೇಂದ್ರ ಭೂ ವಿಜ್ಞಾನ ಮತ್ತು ಯುಎಇನ ನ್ಯಾಶನಲ್ ಸೆಂಟರ್ ಆಫ್ ಮೆಟೊರಾಲಜಿ ಈ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಿವೆ. ಭೂಕಂಪ, ರೇಡಾರ್, ಉಪಗ್ರಹ, ಉಬ್ಬರವಿಳಿತ ಮಾಪನದಲ್ಲಿ ಎರಡೂ ದೇಶಗಳ ನಡುವೆ ಮಾಹಿತಿ ವಿನಿಮಯಕ್ಕೆ ಅನುಕೂಲವಾಗಲಿದೆ. ಇದರಿಂದಾಗಿ ಅರಬಿ ಸಮುದ್ರ ಮತ್ತು ಒಮಾನ್ ಕರಾವಳಿ ಪ್ರದೇಶಗಳಲ್ಲಿನ ಪರಿಸ್ಥಿತಿ ಮೇಲೆ ನಿಗಾ ಇರಿಸಿ ಅಧ್ಯಯನ ನಡೆಸಲು ಅನುಕೂಲವಾಗಲಿದೆ. ಸುನಾಮಿ ಮುನ್ನೆಚ್ಚರಿಕೆ ತಂತ್ರಜ್ಞಾನ ಹೊಂದಲೂ ಅನುಕೂಲಕರವಾಗಲಿದೆ. ದೇಶದ ದಕ್ಷಿಣ ಮತ್ತು ಪಶ್ಚಿಮ ಭೂಕಂಪ ಮಾಹನ ಕೇಂದ್ರಗಳಿಂದ ಸಿಗುವ ಮಾಹಿತಿಯನ್ನು ಯುಎಇ ಜತೆಗೆ ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಿದೆ.
ಖನಿಜ ಕ್ಷೇತ್ರ ಸುಧಾರಣೆಗೆ ಅಸ್ತು: ಇದೇ ವೇಳೆ, ದೊಡ್ಡ ಮಟ್ಟದಲ್ಲಿ ಖನಿಜ ಕ್ಷೇತ್ರಗಳ ಸುಧಾರಣೆ ಪ್ರಸ್ತಾವಕ್ಕೂ ಕೇಂದ್ರ ಸಂಪುಟ ಅನುಮತಿ ನೀಡಿದೆ. ದೇಶದ ಖನಿಜ ಉತ್ಪಾದನೆಗೆ ಉತ್ತೇಜನ ನೀಡುವ ಮತ್ತು ಹೆಚ್ಚೆಚ್ಚು ಖನಿಜ ನಿಕ್ಷೇಪಗಳ ಹರಾಜಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ.
ಸೇನೆಗೆ ಆತ್ಮನಿರ್ಭರ ಅಸ್ಮಿ ಬಲ :
ಭಾರತೀಯ ಸೇನೆಗೆ ಸದ್ಯದಲ್ಲೇ ಸ್ವದೇಶಿ ನಿರ್ಮಿತ “ಅಸ್ಮಿ’ಯ ಬಲ ಸಿಗಲಿದೆ. ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮತ್ತು ಭಾರತೀಯ ಸೇನೆ ಜಂಟಿಯಾಗಿ ಅಸ್ಮಿ ಎಂಬ ಹೆಸರಿನ ಹೊಸ ಮಾದರಿಯ ಮಷಿನ್ ಪಿಸ್ತೂಲ್ ಅಭಿವೃದ್ದಿ ಪಡಿಸಿವೆ. ಶಸ್ತ್ರಾಸ್ತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ “ಮೇಕ್ ಇನ್ ಇಂಡಿಯಾ’ ಧ್ಯೇಯವಾಕ್ಯದಡಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಸದ್ಯ ರಕ್ಷಣ ಪಡೆಗಳು ಬಳಕೆ ಮಾಡುತ್ತಿರುವ 9 ಎಂ.ಎಂ. ಪಿಸ್ತೂಲುಗಳ ಬದಲಿಗೆ ಬಳಕೆಯಾಗಲಿದೆ.
ವೈಶಿಷ್ಟ್ಯವೇನು? :
ಇಸ್ರೇಲ್ ಸೇನೆ ಬಳಸುತ್ತಿರುವ “ಉಝಿ’ ಸರಣಿಯ ಗನ್ ಇದು
100 ಮೀಟರ್ ದೂರದ ಗುರಿ ಛೇದಿಸುವ ಸಾಮರ್ಥ್ಯ, 9 ಎಂ.ಎಂ. ಪಿಸ್ತೂಲ್ನ ಬದಲಿಗೆ ಅಸ್ಮಿ ಬಳಕೆ
ಅಭಿವೃದ್ಧಿಯ ಹಂತದಲ್ಲಿ(4 ತಿಂಗಳು) 300 ಸುತ್ತು ಗುಂಡು ಹಾರಿಸಿ ಪರೀಕ್ಷೆ
ಈ ಅತೀದೊಡ್ಡ ಸ್ವದೇಶಿ ರಕ್ಷಣ ಖರೀದಿ ಡೀಲ್ ಭಾರತದ ರಕ್ಷಣ ಉತ್ಪಾದನೆ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಗೇಮ್ ಚೇಂಜರ್ ಆಗಿರಲಿದೆ. ಜತೆಗೆ ಹೊಸ ಉದ್ಯೋಗಾವ ಕಾಶಗಳನ್ನೂ ಇದು ಸೃಷ್ಟಿಸಲಿದೆ.-ರಾಜನಾಥ್ ಸಿಂಗ್, ರಕ್ಷಣ ಸಚಿವ
0 التعليقات: