ರಾಜೀವ್ ಹಂತಕರ ಬಿಡುಗಡೆ: 3-4 ದಿನದಲ್ಲಿ ತಮಿಳುನಾಡು ರಾಜ್ಯಪಾಲರ ನಿರ್ಧಾರ
ನವದೆಹಲಿ, ಜನವರಿ 21: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಏಳು ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡುವ ಬಗ್ಗೆ ತಮಿಳು ನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ಇನ್ನು ಮೂರು ನಾಲ್ಕು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಅಪರಾಧಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ರಾಜ್ಯಪಾಲರ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಅದಕ್ಕೆ ವಿವರಣೆ ನೀಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅವರು ಮೂರು ನಾಲ್ಕು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
1991ರಲ್ಲಿ ನಡೆದಿದ್ದ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಎಲ್ಲ ಏಳು ಅಪರಾಧಿಗಳನ್ನು ಶಿಕ್ಷೆ ಅವಧಿಗೂ ಮುನ್ನ ಬಿಡುಗಡೆಗೊಳಿಸಲು 2018ರಲ್ಲಿ ತಮಿಳುನಾಡು ಸರ್ಕಾರ ಶಿಫಾರಸು ಮಾಡಿತ್ತು. ಇದರ ಪರವಾಗಿ ಸಂಪುಟ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದ್ದ ರಾಜ್ಯಪಾಲರು ಸಹಿ ಹಾಕದೆ ಹಾಗೆಯೇ ಉಳಿಸಿಕೊಂಡಿದ್ದಾರೆ. ತಮಿಳುನಾಡು ಸಂಪುಟದ ನಿರ್ಧಾರದ ಬಗ್ಗೆ ಎರಡು ವರ್ಷಗಳಿಗೂ ಹೆಚ್ಚು ಸಮಯದಿಂದ ರಾಜ್ಯಪಾಲರು ನಿರ್ಧಾರ ತೆಗೆದುಕೊಂಡಿಲ್ಲ.
ಅಪರಾಧಿಗಳಲ್ಲಿ ಒಬ್ಬನಾದ ಎ.ಜಿ. ಪೆರಿಯಾವಲನ್ 2016ರಲ್ಲಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ, ಎಂಡಿಎಂಎ ತನ್ನ ತನಿಖೆ ಮುಗಿಸುವವರೆಗೂ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿದ್ದನು. ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಹಿಂದಿನ ಬೃಹತ್ ಸಂಚಿನ ಕುರಿತು ಇನ್ನೂ ತನಿಖೆ ನಡೆಸುತ್ತಿರುವುದಾಗಿ ಸುಪ್ರೀಂಕೋರ್ಟ್ಗೆ ಸಿಬಿಐ ತಿಳಿಸಿತ್ತು.
0 التعليقات: