Sunday, 3 January 2021

ಉತ್ತರಪ್ರದೇಶ: ಸ್ಮಶಾನದಲ್ಲಿ ಚಾವಣಿ ಕುಸಿತ, ಸಾವಿನ ಸಂಖ್ಯೆ 23 ಕ್ಕೆ ಏರಿಕೆ


ಉತ್ತರಪ್ರದೇಶ: ಸ್ಮಶಾನದಲ್ಲಿ ಚಾವಣಿ ಕುಸಿತ, ಸಾವಿನ ಸಂಖ್ಯೆ 23 ಕ್ಕೆ ಏರಿಕೆ


ಗಾಜಿಯಾಬಾದ್: ಸ್ಮಶಾನದ ಚಾವಣಿ ಕುಸಿದು ಮೃತಪಟ್ಟಿರುವವರ ಸಂಖ್ಯೆ 23 ಕ್ಕೆ ಏರಿಕೆಯಾಗಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.

ಮಳೆಯಿಂದ ರಕ್ಷಿಸಿಕೊಳ್ಳಲು ಸ್ಮಶಾನದಲ್ಲಿದ್ದ ಸಂಕೀಣವೊಂದರ ಕೆಳಗೆ 25ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದಿದ್ದರು. ಈ ವೇಳೆ ಜೋರಾಗಿ ಮಳೆ ಬೀಳುತ್ತಿದ್ದರಿಂದ ಚಾವಣಿ ಕುಸಿದಿದ್ದು ಅದರ ಕೆಳಗೆ ನಿಂತಿದ್ದವರ ಪೈಕಿ ಈ ವರೆಗೂ 23 ಮಂದಿ ಮೃತಪಟ್ಟಿದ್ದರೆ 40 ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಚಾವಣಿ ಕೆಳಗೆ ಸಿಲುಕಿರುವವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಗಾಜಿಯಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಇರಾಜ್ ರಾಜಾ ತಿಳಿಸಿದ್ದಾರೆ.

ಘಟನೆ ಸಂಬಂಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಂತಾಪ ವ್ಯಕ್ತಪಡಿಸಿದ್ದು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ 40 ಮಂದಿಯನ್ನು ರಕ್ಷಿಸಲಾಗಿದೆ ಎಂದು ಘಾಜಿಯಾಬಾದ್ ನ ಡಿಎಂ ಅಜಯ್ ಶಂಕರ್ ಪಾಂಡೇ ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಮೀರತ್ ನ ವಿಭಾಗೀಯ ಆಯುಕ್ತ ಅನಿತಾ ಸಿ ಮೇಶ್ರಮ್, "ಚಾವಣಿ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ. ಈ ದುರ್ಘಟನೆ ನಡೆಯುವುದಕ್ಕೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ. ಸ್ಥಳೀಯ ಮೂಲಗಳ ಪ್ರಕಾರ ಈ ಪ್ರದೇಶದಲ್ಲಿ 100 ಕ್ಕೂ ಹೆಚ್ಚು ಮಂದಿ ಇದ್ದರು ಎಂದು ತಿಳಿದುಬಂದಿದೆ.



SHARE THIS

Author:

0 التعليقات: