Tuesday, 19 January 2021

ಜ.20: ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಬೈಡನ್


ಜ.20: ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಬೈಡನ್

ವಾಶಿಂಗ್ಟನ್, ಜ. 19: ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ, ಪ್ರಸಕ್ತ ರಾಜಕೀಯ ಸ್ಥಿತಿಗತಿ ಮತ್ತು ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಬಾರಿಯ ಅಧ್ಯಕ್ಷೀಯ ಪ್ರಮಾಣವಚನ ಕಾರ್ಯಕ್ರಮವು ಹಿಂದಿನವುಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ.

ಸಾಮಾನ್ಯವಾಗಿ ಸಂಸತ್ತಿನಲ್ಲಿ ನಡೆಯುವ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುಮಾರು 2 ಲಕ್ಷ ಪಾಸ್‌ಗಳನ್ನು ವಿತರಿಸಲಾಗುತ್ತದೆ. ಆದರೆ, ಈ ಬಾರಿ ಪಾಸ್‌ಗಳನ್ನು ವಿತರಿಸಲಾಗುವುದಿಲ್ಲ. ಅದೂ ಅಲ್ಲದೆ, ತನ್ನ ಪ್ರಮಾಣವಚನ ಕಾರ್ಯಕ್ರಮದ ವೇಳೆ ಮನೆಯಲ್ಲೇ ಇರುವಂತೆ ಅವರು ತನ್ನ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.

ಈ ಬಾರಿ ಸೇನಾ ಕವಾಯತು ಮತ್ತು ನೃತ್ಯ (ಬಾಲ್) ಇರುವುದಿಲ್ಲ. ಬದಲಿಗೆ ಆನ್‌ಲೈನ್ ಕವಾಯತು ಇರುತ್ತದೆ. ಇದರಲ್ಲಿ ದೇಶಾದ್ಯಂತದ ವಿವಿಧ ಸಮುದಾಯಗಳ ವೈವಿಧ್ಯಮಯ ಪ್ರದರ್ಶನಗಳು ಒಳಗೊಂಡಿವೆ.

ಪ್ರಮಾಣವಚನ ಕಾರ್ಯಕ್ರಮವು ಬುಧವಾರ ಬೆಳಗ್ಗೆ 11:30ಕ್ಕೆ (ಭಾರತೀಯ ಕಾಲಮಾನ ರಾತ್ರಿ 10 ಗಂಟೆ) ಆರಂಭಗೊಳ್ಳುತ್ತದೆ.

ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ಸೋನಿಯಾ ಸೊಟೊಮೇಯರ್ ಮಧ್ಯಾಹ್ನ 12 ಗಂಟೆಗೆ ಸ್ವಲ್ಪ ಮೊದಲು ಪ್ರಮಾಣವಚನ ಬೋಧಿಸುತ್ತಾರೆ.

ಮಧ್ಯಾಹ್ನ 12 ಗಂಟೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಜಾನ್ ರಾಬರ್ಟ್ಸ್, ಬೈಡನ್‌ಗೆ ಅಧ್ಯಕ್ಷರಾಗಿ ಪ್ರಮಾಣವಚನ ಬೋಧಿಸಲಿದ್ದಾರೆ.

ಲೇಡಿ ಗಾಗಾ, ಲೊಪೇಝ್ ಕಾರ್ಯಕ್ರಮ

ಈ ಸಂದರ್ಭದಲ್ಲಿ ಗಾಯಕಿಯರಾದ ಲೇಡಿ ಗಾಗಾ ಮತ್ತು ಜೆನಿಫರ್ ಲೊಪೇಝ್ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ಲೇಡಿ ಗಾಗಾ ರಾಷ್ಟ್ರಗೀತೆ ಹಾಡಿದರೆ, ಲೊಪೇಝ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಟ್ರಂಪ್ ಭಾಗವಹಿಸುವುದಿಲ್ಲ

ಒಂದು ಮಹತ್ವದ ಬದಲಾವಣೆಯೆಂದರೆ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಎದುರಾಳಿಯ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಆ ಸಮಯದಲ್ಲಿ ಅವರು ತನ್ನ ಪತ್ನಿ ಹಾಗೂ ನಿರ್ಗಮನ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಜೊತೆ ಶ್ವೇತಭವನದಿಂದ ಸುಮಾರು 1,500 ಕಿ.ಮೀ. ದೂರದಲ್ಲಿರುವ ಫ್ಲೋರಿಡ ರಾಜ್ಯದ ಪಾಮ್ ಬೀಚ್‌ನಲ್ಲಿರುವ ತನ್ನ ಖಾಸಗಿ ಮಾರ್-ಅ-ಲಾಗೊ ರಿಸಾರ್ಟ್‌ನಲ್ಲಿರುತ್ತಾರೆ.

ಅದಕ್ಕೂ ಮೊದಲು, ಮೇರಿಲ್ಯಾಂಡ್‌ನಲ್ಲಿರುವ ಸೇನಾ ಏರ್‌ಫೀಲ್ಡ್‌ನಲ್ಲಿ ತನಗಾಗಿ ವಿದಾಯಕೂಟವೊಂದನ್ನು ಏರ್ಪಡಿಸಿಕೊಂಡಿದ್ದಾರೆ.

ನಿರ್ಗಮನ ಉಪಾಧ್ಯಕ್ಷ ಮೈಕ್ ಪೆನ್ಸ್, ಬೈಡನ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಾಜಿ ಅಧ್ಯಕ್ಷರುಗಳ ಉಪಸ್ಥಿತಿ

ಅಮೆರಿಕದ ಮಾಜಿ ಅಧ್ಯಕ್ಷರುಗಳಾದ ಬರಾಕ್ ಒಬಾಮ, ಜಾರ್ಜ್ ಡಬ್ಲು. ಬುಶ್ ಮತ್ತು ಬಿಲ್ ಕ್ಲಿಂಟನ್ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಬದುಕಿರುವ ಇನ್ನೋರ್ವ ಮಾಜಿ ಅಧ್ಯಕ್ಷ 96 ವರ್ಷದ ಜಿಮ್ಮಿ ಕಾರ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ.

ಕೊರೋನ ವೈರಸ್ ಬೆದರಿಕೆ ಹಿನ್ನೆಲೆಯಲ್ಲಿ, ಜಿಮ್ಮಿ ಕಾರ್ಟರ್ ತನ್ನ ಹೆಚ್ಚಿನ ಸಮಯವನ್ನು ಜಾರ್ಜಿಯದಲ್ಲಿರುವ ತನ್ನ ಮನೆಯಲ್ಲೇ ಕಳೆಯುತ್ತಿದ್ದಾರೆ. ಆದರೆ, ಅವರು ಬೈಡನ್‌ಗೆ ಶುಭಾಶಯ ಕೋರಿದ್ದಾರೆ.SHARE THIS

Author:

0 التعليقات: