ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
ನಾಗ್ಪುರ,ಜನವರಿ 17: ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ಹೇಳಿದೆ.
ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಆಂದೋಲನ ಸೈದ್ಧಾಂತಿಕ ಕ್ರಾಂತಿ, ನಾವು ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ಕುರಿತ ಕಾನೂನು ಖಾತರಿ ಬಗ್ಗೆ ಬಯಸುತ್ತೇವೆ ಎಂದು ಕಿಸಾನ್ ಯೂನಿಯನ್(ಬಿಕೆಯು) ಮುಖಂಡ ರಾಕೇಶ್ ಟಿಕೈಟ್ ಹೇಳಿದ್ದಾರೆ.
ರೈತರು ಎಷ್ಟು ದಿನ ಪ್ರತಿಭಟನೆಯಲ್ಲಿ ಕುಳಿತುಕೊಳ್ಳುತ್ತಾರೆ ಎಂಬ ಪ್ರಶ್ನೆಗೆ, ಟಿಕೈಟ್, ನಾವು ಮೇ 2024ರವರೆಗೆ ಪ್ರತಿಭಟನೆಯಲ್ಲಿ ಕುಳಿತುಕೊಳ್ಳಲು ಸಿದ್ಧರಿದ್ದೇವೆ. ಮೂರು ಕಾನೂನುಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಮತ್ತು ಎಂಎಸ್ಪಿಗೆ ಸರ್ಕಾರ ಕಾನೂನು ಖಾತರಿ ನೀಡಬೇಕು ಎಂಬುದೇ ನಮ್ಮ ಬೇಡಿಕೆಯಾಗಿದೆ ಎಂದರು.
ದೇಶದ ಮುಂದಿನ ಲೋಕಸಭಾ ಚುನಾವಣೆ 2024ರ ಏಪ್ರಿಲ್-ಮೇನಲ್ಲಿ ನಡೆಯಲಿದೆ. ಇನ್ನು ಪ್ರತಿಭಟನೆಯನ್ನು ಶ್ರೀಮಂತ ರೈತರು ಉತ್ತೇಜಿಸುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು ಹಲವು ಗ್ರಾಮಗಳು, ಹಳ್ಳಿಗಳು ಮತ್ತು ವಿವಿಧ ಸಂಘಟನೆಗಳ ರೈತರು ಪ್ರತಿಭಟನೆಯಲ್ಲಿ ಸೇರಿದ್ದಾರೆ ಎಂದು ಟಿಕೈಟ್ ಹೇಳಿದರು.
ಕಳೆದ ಮಂಗಳವಾರ ಸುಪ್ರೀಂ ಕೋರ್ಟ್ ಮೂರು ಹೊಸ ಕೃಷಿ ಕಾನೂನುಗಳ ಅನುಷ್ಠಾನವನ್ನು ಮುಂದಿನ ಆದೇಶದವರೆಗೆ ತಡೆಹಿಡಿದಿದೆ. ಕೇಂದ್ರ ಮತ್ತು ರೈತ ಸಂಘಗಳ ನಡುವಿನ ಅವ್ಯವಸ್ಥೆಯನ್ನು ಪರಿಹರಿಸಲು ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಲು ನಿರ್ಧರಿಸಿದೆ ಎಂದರು.
ಕೇಂದ್ರವು ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾಯ್ದೆಗಳಿಂದ ಮಧ್ಯವರ್ತಿಗಳು ಇರುವುದಿಲ್ಲ. ಅಲ್ಲದೆ ರೈತರು ದೇಶದಲ್ಲಿ ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಸಿಗುತ್ತದೆ. ಇದು ಕೃಷಿ ಕ್ಷೇತ್ರದ ಪ್ರಮುಖ ಸುಧಾರಣೆ ಎಂದು ಹೇಳುತ್ತಿದೆ ಎಂದರು.
0 التعليقات: