Friday, 18 December 2020

IND vs AUS | ಸ್ಪಿನ್‌ ಮೋಡಿಗೆ ಕನಲಿದ ಆಸಿಸ್; ಭಾರತಕ್ಕೆ ಇನಿಂಗ್ಸ್ ಮುನ್ನಡೆ


IND vs AUS | ಸ್ಪಿನ್‌ ಮೋಡಿಗೆ ಕನಲಿದ ಆಸಿಸ್; ಭಾರತಕ್ಕೆ ಇನಿಂಗ್ಸ್ ಮುನ್ನಡೆ

ಅಡಿಲೇಡ್: ಟೆಸ್ಟ್ ಕ್ರಿಕೆಟ್ ಅಂಗಳದಲ್ಲಿ ತಾವು ಎಷ್ಟು ಪರಿಣಾಮಕಾರಿ ಎಂಬುದನ್ನು ರವಿಚಂದ್ರನ್ ಅಶ್ವಿನ್ ಶುಕ್ರವಾರ ತೋರಿಸಿಕೊಟ್ಟರು.

ವಿದೇಶಿ ಪಿಚ್‌ನಲ್ಲಿ ನಸುಗೆಂಪು ವರ್ಣದ ಚೆಂಡಿನಲ್ಲಿಯೂ ತಮ್ಮ ಸ್ಪಿನ್‌ ಮೋಡಿ ಮೆರೆದ ಅಶ್ವಿನ್ ಇಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾಕ್ಕೆ ಸಿಂಹಸ್ವಪ್ನರಾದರು.

ಅಶ್ವಿನ್ (18-3-55-4) ಕರಾಮತ್ತಿನಿಂದಾಗಿ ಭಾರತವು ಮೊದಲ ಇನಿಂಗ್ಸ್‌ನಲ್ಲಿ 53 ರನ್‌ಗಳ ಮುನ್ನಡೆ ಗಳಿಸಿತು. ವಿರಾಟ್ ಕೊಹ್ಲಿ ಬಳಗವು ಪ್ರಥಮ ಇನಿಂಗ್ಸ್‌ನಲ್ಲಿ ಗಳಿಸಿದ್ದ 244 ರನ್‌ಗಳಿಗೆ ಉತ್ತರವಾಗಿ ಆತಿಥೇಯ ತಂಡವು 71.2 ಓವರ್‌ಗಳಲ್ಲಿ 191 ರನ್ ಗಳಿಸಿ ಸರ್ವಪತನ ಕಂಡಿತು. ಎರಡನೇ ದಿನದಾಟದ ಕೊನೆಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತವು 6 ಓವರ್‌ಗಳಲ್ಲಿ 1 ವಿಕೆಟ್‌ಗೆ 9 ರನ್ ಗಳಿಸಿದೆ. ಕೇವಲ 4 ರನ್ ಗಳಿಸಿದ್ದ ವೇಳೆ ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ನಲ್ಲಿ ಬೌಲ್ಡ್‌ ಆದರು. ಸದ್ಯ ನೈಟ್‌ ವಾಚ್‌ಮನ್‌ ಜಸ್‌ಪ್ರೀತ್ ಬೂಮ್ರಾ ಕ್ರೀಸ್‌ಗೆ ಬಂದಿದ್ದು, ಮಯಂಕ್‌ ಅಗರವಾಲ್‌ (4) ಜೊತೆಗೆ ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಟಿಮ್-ಮಾರ್ನಸ್ ಆಸರೆ

ಭಾರತ ಗಳಿಸಿದ ಸಾಧಾರಣ ಮೊತ್ತದೆದುರು ಇನಿಂಗ್ಸ್‌ ಆರಂಭಿಸಿದ ಆಸಿಸ್‌ಗೆ ವೇಗಿ ಜಸ್‌ಪ್ರೀತ್ ಬೂಮ್ರಾ ಆರಂಭಿಕ ಆಘಾತ ನೀಡಿದರು. ಆರಂಭಿಕ ಮ್ಯಾಥ್ಯೂ ವೇಡ್‌ (8) ಮತ್ತು ಜೋ ಬರ್ನ್ಸ್‌ (8) ಇಬ್ಬರನ್ನೂ ಎಲ್‌ಬಿ ಬಲೆಗೆ ಕೆಡವಿದ ಬೂಮ್ರಾ ಭಾರತಕ್ಕೆ ಮೇಲುಗೈ ತಂದುಕೊಟ್ಟರು. ಬಳಿಕ ಬಂದ ಸ್ಟೀವ್‌ ಸ್ಮಿತ್‌ (1), ಟ್ರಾವಿಸ್‌ ಹೆಡ್‌ (7), ಮತ್ತು ಕೆಮರೂನ್‌ ಗ್ರೀನ್‌ (11) ಅವರೂ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಈ ವೇಳೆ ಜೊತೆಯಾದ ಭರವಸೆಯ ಬ್ಯಾಟ್ಸ್‌ಮನ್‌ ಮಾರ್ನಸ್‌ ಲಾಬುಶೇನ್‌ ಮತ್ತು ನಾಯಕ ಟಿಮ್‌ ಪೇನ್‌ ಆರನೇ ವಿಕೆಟ್‌ ಜೊತೆಯಾಟದಲ್ಲಿ 41 ರನ್‌ ಗಳಿಸಿದರು. ಲಾಬುಶೇನ್‌ 47 ರನ್‌ ಗಳಿಸಿ ಔಟಾದರೆ, ಕೊನೆವರೆಗೂ ವಿಕೆಟ್‌ ಒಪ್ಪಿಸದೆ ಆಡಿದ ಪೇನ್‌ 99 ಎಸೆತಗಳಲ್ಲಿ 73 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಭಾರತ ಪರ ಮಿಂಚಿದ ರವಿಚಂದ್ರನ್‌ ಅಶ್ವಿನ್‌ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರೆ, ಉಮೇಶ್‌ ಯಾದವ್‌ 3 ಹಾಗೂ ಜಸ್‌ಪ್ರೀತ್‌ ಬೂಮ್ರಾ ಎರಡು ವಿಕೆಟ್‌ ಕಬಳಿಸಿದರು.

ಕನಿಷ್ಠ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ ಸ್ಮಿತ್‌

ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಂಬರ್‌ 1 ಸ್ಥಾನದಲ್ಲಿರುವ ಸ್ಟೀವ್‌ ಸ್ಮಿತ್‌ ಕೇವಲ ಒಂದು ರನ್ ಗಳಿಸಿ ಔಟಾದರು. ಅವರು ಭಾರತ ತಂಡದ ವಿರುದ್ಧ 5ಕ್ಕಿಂತಲೂ ಕಡಿಮೆ ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದು ಇದೇ ಮೊದಲ ಬಾರಿಗೆ. 2013ರಲ್ಲಿ ಮೊಹಾಲಿಯಲ್ಲಿ ನಡೆದ ಟೆಸ್ಟ್‌ನಲ್ಲಿ 5 ರನ್‌ ಗಳಿಸಿ ಔಟಾಗಿದ್ದರು. ಅದು ಈ ಹಿಂದಿನ ಕನಿಷ್ಠ ಗಳಿಕೆಯಾಗಿತ್ತು.

ಟೀಂ ಇಂಡಿಯಾ ವಿರುದ್ಧ ಇದುವರೆಗೆ 21 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಸ್ಮಿತ್‌ 7 ಶತಕ ಸಹಿತ ಒಟ್ಟು 1430 ರನ್ ಗಳಿಸಿದ್ದಾರೆ.



SHARE THIS

Author:

0 التعليقات: