Sunday, 20 December 2020

ಶಿಕ್ಷಣ ವ್ಯವಸ್ಥೆ ಇಷ್ಟೊಂದು ಹದಗೆಡಲು ರಾಜ್ಯ ಸರ್ಕಾರವೇ ಕಾರಣ : ಸಿದ್ದರಾಮಯ್ಯ


ಶಿಕ್ಷಣ ವ್ಯವಸ್ಥೆ ಇಷ್ಟೊಂದು ಹದಗೆಡಲು ರಾಜ್ಯ ಸರ್ಕಾರವೇ ಕಾರಣ : ಸಿದ್ದರಾಮಯ್ಯ

ಬೆಂಗಳೂರು: ಶಾಲಾ-ಕಾಲೇಜುಗಳ ಪುನರಾರಂಭದ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿದೆ. ಈ ವಿಷಯವಾಗಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿನ ಈಗಿನ ಬಿಕ್ಕಟ್ಟಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ನೇರ ಹೊಣೆಗಾರರು ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರದ ಎಡಬಿಡಂಗಿ ನಿಲುವುಗಳಿಂದಾಗಿ ರಾಜ್ಯದ ವಿದ್ಯಾರ್ಥಿಗಳು, ಪೋಷಕರು ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಎಲ್ಲರೂ ಬೀದಿಗಿಳಿಯುವಂತಾಗಿದೆ. ಈ ರೀತಿಯ ಗೊಂದಲದಿಂದಾಗಿ ಬಹಳ ಮುಖ್ಯವಾಗಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಸ್ಪಷ್ಟನಿರ್ಧಾರ ಕೈಗೊಂಡು ಈ ಬಿಕ್ಕಟ್ಟನ್ನು ಬಗೆಹರಿಸಬೇಕು ಎಂದು ಹೇಳಿದರು.

ಖಾಸಗಿ ಶಾಲೆಗಳ ಮೇಲೆ ಸರ್ಕಾರಕ್ಕೆ ಯಾವುದೇ ಸರಿಯಾದ ನಿಯಂತ್ರಣವಿಲ್ಲ. ಆದ್ದರಿಂದಲೇ ಅವರು ಪೋಷಕರ ಮೇಲೆ ಒತ್ತಡ ಹೇರುತ್ತಿರುವುದು. ಈಗಾಗಲೇ ಆನ್ಲೈನ್ ತರಗತಿಗಳನ್ನು ಕೈದು ಮಾಡಿ ಶಾಲಾ ಶುಲ್ಕ ಕಟ್ಟದಿದ್ದರೆ ತರಗತಿಗಳು ಮುಂದೆ ನಡೆಯುವುದಿಲ್ಲ ಎಂದು ಹೆದರಿಸುತ್ತಿರುವುದು. ಇಷ್ಟೆಲ್ಲಾ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಸಚಿವ ಕಣ್ಣುಮುಚ್ಚಿ ಕೂತಿದೆ ಎಂದು ಹೇಳಿದರು.

ಶಾಲೆಗಳ ಪುನರಾರಂಭದ ಬಗ್ಗೆ ಸಭೆಗಳ ಮೇಲೆ ಸಭೆಗಳು ನಡೆಯುತ್ತಿವೆಯೇ ಹೊರತು ಯಾವುದೇ ಉಪಯೋಗವಾಗುತ್ತಿಲ್ಲ. ಶಿಕ್ಷಣ ಸಚಿವರು ಮತ್ತು ಅಧಿಕಾರಿಗಳು ದಿನಕ್ಕೊಂದು ಹೇಳಿಕೆಗಳನ್ನು ನೀಡಿ ಪೋಷಕರನ್ನು ಗೊಂದಲಕ್ಕೆ ನೂಕಿದ್ದಾರೆ. ಈ ತಕ್ಷಣ ಶಿಕ್ಷಣ ಸಚಿವರು ಖಾಸಗಿ ಶಾಲೆಗಳ ಮಾಲೀಕರು ಮತ್ತು ಪೋಷಕರ ಸಭೆ ಕರೆದು ಪಾರದರ್ಶಕವಾಗಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.



SHARE THIS

Author:

0 التعليقات: