Thursday, 10 December 2020

ಹಜ್ ಯಾತ್ರೆಗೆ ಅರ್ಜಿ: ಅಂತಿಮ ದಿನಾಂಕ ವಿಸ್ತರಣೆ


ಹಜ್ ಯಾತ್ರೆಗೆ ಅರ್ಜಿ: ಅಂತಿಮ ದಿನಾಂಕ ವಿಸ್ತರಣೆ

ಮುಂಬೈ, ಡಿ.10: ಹಜ್ ಯಾತ್ರೆಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಜನವರಿ 10ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

2021ರ ಹಜ್‌ ಯಾತ್ರೆ ಮುಂದಿನ ಜೂನ್-ಜುಲೈಯಲ್ಲಿ ನಿಗದಿಗೊಳಿಸಲಾಗಿದೆ. ವಿಮಾನ ಏರುವ ಸ್ಥಳದ ಆಧಾರದಲ್ಲಿ, ಪ್ರತೀ ಯಾತ್ರಿಕನ ಅಂದಾಜು ವೆಚ್ಚವನ್ನು ಕಡಿಮೆಗೊಳಿಸಲಾಗಿದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಮತ್ತು ಭಾರತ ಸರಕಾರ ಜಾರಿಗೊಳಿಸಿದ ಮಾರ್ಗಸೂಚಿಯನ್ನು ಅನುಸರಿಸಲಾಗುತ್ತದೆ ಎಂದು ನಖ್ವಿ ಹೇಳಿದ್ದಾರೆ.

ಇದುವರೆಗೆ 40,000ಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಲಾಗಿದೆ. 500ಕ್ಕೂ ಹೆಚ್ಚು ಅರ್ಜಿಗಳು 'ಪುರುಷ ಒಡನಾಡಿಯಿಲ್ಲದೆ ಪ್ರಯಾಣಿಸಲು ಬಯಸುವ ಮಹಿಳೆಯರ' ವರ್ಗದಲ್ಲಿ ಸಲ್ಲಿಕೆಯಾಗಿದೆ. ಇದೇ ವರ್ಗದಲ್ಲಿ 2020ರ ಹಜ್‌ಯಾತ್ರೆಗೆ ಅರ್ಜಿ ಸಲ್ಲಿಸಿದ್ದ 2,100ಕ್ಕೂ ಹೆಚ್ಚು ಮಹಿಳೆಯರ ಅರ್ಜಿಗಳು 2021ರ ಹಜ್‌ಯಾತ್ರೆಗೆ ಊರ್ಜಿತವಾಗಿರುತ್ತದೆ . ಅಹ್ಮದಾಬಾದ್ ಮತ್ತು ಮುಂಬೈಯಿಂದ ಹೊರಡುವ ಯಾತ್ರಿಗಳಿಗೆ 3,30,000 ರೂ, ಬೆಂಗಳೂರು, ಲಕ್ನೊ, ದಿಲ್ಲಿ ಮತ್ತು ಹೈದರಾಬಾದ್‌ನಿಂದ ಹೊರಡುವ ಯಾತ್ರಿಗಳಿಗೆ 3,50,000 ರೂ, ಕೊಚ್ಚಿ ಮತ್ತು ಶ್ರೀನಗರದಿಂದ ಹೊರಡುವ ಯಾತ್ರಿಗಳಿಗೆ 3,60,000 ರೂ, ಕೋಲ್ಕತಾದಿಂದ ಹೊರಡುವ ಯಾತ್ರಿಗಳಿಗೆ 3,70,000 ರೂ, ಗುವಾಹಟಿಯಿಂದ ಹೊರಡುವ ಯಾತ್ರಿಗಳಿಗೆ 4 ಲಕ್ಷ ರೂ. ದರವನ್ನು ಅಂದಾಜಿಸಲಾಗಿದೆ.

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವಯಸ್ಸಿನ ಮಾನದಂಡದಲ್ಲಿ ಬದಲಾವಣೆ ಇರಬಹುದು. ಈಗ ಇರುವ ಅಂತರ್ ರಾಷ್ಟ್ರೀಯ ವಿಮಾನ ಪ್ರಯಾಣ ನಿಯಮದಂತೆ, ಪ್ರತೀ ಯಾತ್ರಿಕನೂ ಪ್ರಯಾಣದ 72 ಗಂಟೆ ಮೊದಲು ಕೊರೋನ ಸೋಂಕು ಪರೀಕ್ಷೆಗೆ ಒಳಪಡಬೇಕು. ಅನುಮೋದಿಸಿದ ಪ್ರಯೋಗಾಲಯದಿಂದ ನೆಗೆಟಿವ್ ವರದಿ ಸಲ್ಲಿಸಿದ ವರಿಗೆ ಯಾತ್ರೆಗೆ ಅವಕಾಶ ನೀಡಲಾಗುವುದು ಎಂದವರು ಹೇಳಿದ್ದಾರೆ.


SHARE THIS

Author:

0 التعليقات: