ನಕಲಿ ಯುದ್ಧದ ಮೂಲಕ ಭಾರತವನ್ನು ಸೋಲಿಸಲು ಸಾಧ್ಯವಿಲ್ಲ : ರಾಜನಾಥ್ ಸಿಂಗ್
ಹೈದರಾಬಾದ್, ಡಿ.19- ಭಾರತೀಯರು ಶಾಂತಿ ಪ್ರಿಯರು. ಆದರೆ, ನಮ್ಮ ಆತ್ಮಗೌರವಕ್ಕೆ ಧಕ್ಕೆ ಬಂದರೆ ಸಹಿಸಿಕೊಳ್ಳುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಹೈದರಾಬಾದ್ನ ದುಂಡಿಗುಲ್ ವಾಯುನೆಲೆಯಲ್ಲಿ ಸಂಯುಕ್ತ ಪಥ ಸಂಚಲನದಲ್ಲಿ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದ ಅವರು, ಚೀನಾ ಗಡಿ ಭಾಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯರು ದುರ್ಬಲರಲ್ಲ. ಯಾವುದೇ ರೀತಿಯ ಆಕ್ರಮಣ, ದುರಾಚಾರ ಮತ್ತು ಅನುಚಿತ ವರ್ತನೆಗಳಿಗೆ ತಕ್ಕ ಉತ್ತರ ನೀಡುವ ಸಾಮಥ್ರ್ಯ ನಮಗಿದೆ ಎಂದು ತಿರುಗೇಟು ನೀಡಿದ್ದಾರೆ. ಎರಡು ದೇಶಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದ ಬಳಿಕವೂ ಸಮಸ್ಯೆ ಬಗೆಹರಿದಿಲ್ಲ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಶಾಂತಿ ಕಾಪಾಡಲು ಬಯಸುತ್ತೇವೆ. ಆದರೆ, ಆತ್ಮಗೌರವಕ್ಕೆ ಧಕ್ಕೆಯಾಗುವಂತಹ ಯಾವುದೇ ದುರ್ವರ್ತನೆಯನ್ನು ಭಾರತ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ನಾವು ಶಾಂತಿ ಭಂಗವನ್ನು ಬಯಸುವುದಿಲ್ಲ. ಹಾಗಾಗಿ ಸೌಹಾರ್ದಯುತ ಮತ್ತು ಸೇನಾ ನೆಲೆಯಲ್ಲಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದೆವು. ಅದರ ಹೊರತಾಗಿಯೂ ಕೂಡ ಸದಾ ಕಾಲ ನಾವು ಯಾವುದೇ ಪರಿಸ್ಥಿತಿ ಎದುರಿಸಲು ನಾವು ಸಿದ್ದರಿದ್ದೇವೆ ಎಂದು ಹೇಳಿದ್ದಾರೆ. ಕೋವಿಡ್ ಸೋಂಕಿನ ಸಂದರ್ಭದಲ್ಲಿ ಚೀನಾದ ಉದ್ದೇಶ ಇಡೀ ಜಗತ್ತಿಗೆ ತಿಳಿದಿದೆ ಎಂದು ಅವರು ತಿರುಗೇಟು ನೀಡಿದರು.
ನೆರೆಯ ಪಾಕಿಸ್ತಾನದ ಬಗ್ಗೆಯೂ ಪರೋಕ್ಷ ವಾಗ್ದಾಳಿ ನಡೆಸಿದ ರಾಜ್ನಾಥ್ಸಿಂಗ್, ಭಯೋತ್ಪಾದನೆಯನ್ನು ಬಳಸಿಕೊಂಡು ನಕಲಿ ಯುದ್ಧ ಮಾಡುವ ಮೂಲಕ ಭಾರತವನ್ನು ಸೋಲಿಸಲು ಪ್ರಯತ್ನಗಳು ನಡೆಯುತ್ತಿವೆ. ಆದರೆ, ನಾಲ್ಕು ಯುದ್ಧಗಳು ನಡೆದರೂ ಇದು ಸಾಧ್ಯವಾಗಿಲ್ಲ.
ನಮ್ಮ ಪೊಲೀಸರು ಮತ್ತು ಸಶಸ್ತ್ರಪಡೆಗಳು ಭಯೋತ್ಪಾದನೆಯನ್ನು ಹತ್ತಿಕ್ಕುವ ಸಾಮಥ್ರ್ಯ ಹೊಂದಿವೆ. ನಾವು ಭಯೋತ್ಪಾದನೆಯನ್ನಷ್ಟೇ ಎದುರಿಸುವುದಿಲ್ಲ. ದೇಶದ ಒಳಗೆ ಹಾಗೂ ಗಡಿ ಭಾಗದಲ್ಲಿ ನಡೆಯುವ ದುಷ್ಕøತ್ಯಗಳಿಗೂ ತಕ್ಕ ಉತ್ತರ ನೀಡುತ್ತೇವೆ ಎಂದು ಏರ್ ಸ್ಟ್ರೈಕನ್ನು ಉಲ್ಲೇಖಿಸಿ ರಾಜನಾಥ್ ಸಿಂಗ್ ಹೇಳಿದರು.
0 التعليقات: