Monday, 14 December 2020

ಖ್ಯಾತ ವಿಜ್ಞಾನಿ, ಪದ್ಮವಿಭೂಷಣ ರೊಡ್ಡಂ ನರಸಿಂಹ ನಿಧನ


ಖ್ಯಾತ ವಿಜ್ಞಾನಿ, ಪದ್ಮವಿಭೂಷಣ ರೊಡ್ಡಂ ನರಸಿಂಹ ನಿಧನ

ಬೆಂಗಳೂರು, ಡಿಸೆಂಬರ್ 15: ಖ್ಯಾತ ಏರೋಸ್ಪೇಸ್ ವಿಜ್ಞಾನಿ ಮತ್ತು ಪದ್ಮ ವಿಭೂಷಣ ಪುರಸ್ಕೃತ ರೊದ್ದಂ ನರಸಿಂಹ (87) ಅವರು ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಬ್ರೈನ್ ಹ್ಯಾಮರೇಜ್‌ಗೆ ಒಳಗಾಗಿದ್ದ ಅವರನ್ನು ಡಿ. 8ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ (ಎನ್‌ಎಎಲ್) ಮಾಜಿ ನಿರ್ದೇಶಕರಾಗಿದ್ದ ರೊದ್ದಂ ಅವರು ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ. ರೊದ್ದಂ ನರಸಿಂಹ ಅವರು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 8.30ರ ವೇಳೆಗೆ ನಿಧನರಾದರು.

'ಅವರನ್ನು ಆಸ್ಪತ್ರೆಗೆ ಕರೆತರುವ ಸಂದರ್ಭದಲ್ಲಿ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಅವರ ಮೆದುಳಿನ ಒಳಗೆ ರಕ್ತಸ್ರಾವವಾಗುತ್ತಿತ್ತು. ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇತ್ತು ಮತ್ತು 2018ರಲ್ಲಿ ಬ್ರೈನ್ ಸ್ಟ್ರೋಕ್‌ಗೆ ಕೂಡ ಒಳಗಾಗಿದ್ದರು' ಎಂದು ಎಂಎಸ್ ರಾಮಯ್ಯ ಆಸ್ಪತ್ರೆಯ ನ್ಯೂರೋಸರ್ಜನ್ ಡಾ. ಫರ್ಟಡೊ ತಿಳಿಸಿದ್ದಾರೆ.

1933ರ ಜುಲೈ 20ರಂದು ಜನಿಸಿದ ಅವರು, ಏರೋಸ್ಪೇಸ್ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದರು. ಐಐಎಸ್‌ಸಿಯಲ್ಲಿ 1962-1999ರವರೆಗೆ ಏರೋಸ್ಪೇಸ್ ಎಂಜಿನಿಯರಿಂಗ್ ಬೋಧಿಸಿದ್ದರು. 1984ರಿಂದ 1993ರವರೆಗೆ ಎನ್‌ಎಎಲ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಬೆಂಗಳೂರಿನ ಜವಹರಲಾಲ್ ನೆಹರೂ ಆಧುನಿಕ ವೈಜ್ಞಾನಿಕ ಸಂಶೋಧನಾ ಸಂಸ್ಥೆಯಲ್ಲಿ (ಜೆಎನ್‌ಸಿಎಎಸ್‌ಆರ್) ಎಂಜಿನಿಯರಿಂಗ್ ಮೆಕ್ಯಾನಿಕ್ ಘಟಕದ ಮುಖ್ಯಸ್ಥರಾಗಿದ್ದರು. ಅವರ ಗಣನೀಯ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಅವರಿಗೆ 2013ರಲ್ಲಿ ಪದ್ಮವಿಭೂಷಣ ಪುರಸ್ಕಾರ ನೀಡಿತ್ತು.

ರೊದ್ದಂ ಅವರು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಬಹಳ ಆಪ್ತರಾಗಿದ್ದರು. ಇಬ್ಬರೂ ಜತೆಗೂಡಿ 'ಡೆವಲಪ್‌ಮೆಂಟ್ಸ್ ಇನ್ ಫ್ಲೂಯೆಡ್ ಮೆಕಾನಿಕ್ಸ್ ಆಂಡ್ ಸ್ಪೇಸ್ ಟೆಕ್ನಾಲಜಿ' ಎಂಬ ಪುಸ್ತಕ ಬರೆದಿದ್ದರು. ಭಾರತೀಯ ರಾಕೆಟ್ ವಿಜ್ಞಾನಿ ಪ್ರೊ. ಸತೀಶ್ ಧವನ್ ಅವರ ಮೊದಲ ವಿದ್ಯಾರ್ಥಿ ಹಾಗೂ ಭಾರತ ರತ್ನ ಡಾ. ಸಿಎನ್‌ಆರ್ ರಾವ್ ಅವರ ಗೆಳೆಯರಾಗಿದ್ದರು.SHARE THIS

Author:

0 التعليقات: