Thursday, 31 December 2020

ಜಗತ್ತಿನ ಅತಿದೊಡ್ಡ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಿದ್ಧರಾಗಿ: ದೇಶವಾಸಿಗಳಿಗೆ ಪ್ರಧಾನಿ ಕರೆ


 ಜಗತ್ತಿನ ಅತಿದೊಡ್ಡ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಿದ್ಧರಾಗಿ: ದೇಶವಾಸಿಗಳಿಗೆ ಪ್ರಧಾನಿ ಕರೆ

ನವದೆಹಲಿ: ಕಾಲಚಕ್ರದಲ್ಲಿ 2020 ಕಳೆದು ಹೋಗಿ 2021ಕ್ಕೆ ಕಾಲಿರಿಸುತ್ತಿರುವ ಹೊತ್ತಲ್ಲಿ ಜಗತ್ತಿನ ಬೃಹತ್ ಕೋವಿಡ್ ಲಸಿಕಾ ಅಭಿಯಾನಕ್ಕೆ ಸಿದ್ಧರಾಗಿ. ಯಾವುದೇ ವದಂತಿಗಳಿಗೆ ಕಿವಿಗೊಡದಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ದೇಶವಾಸಿಗಳಿಗೆ ಕರೆ ನೀಡಿದ್ದಾರೆ. ಅವರು ಇಂದು ಗುಜರಾತಿನ ಏಮ್ಸ್​ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ದೇಶದಲ್ಲಿ ಕೋವಿಡ್ 19 ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಮುಂದಿನ ವರ್ಷ ನಾವು ಜಗತ್ತಿನ ಅತಿದೊಡ್ಡ ಲಸಿಕಾ ಅಭಿಯಾನ ನಡೆಸುವುದಕ್ಕೆ ಸಿದ್ಧತೆ ನಡೆಸುತ್ತಿದ್ದೇವೆ. ಆರೋಗ್ಯವೇ ಸಂಪತ್ತು. 2020ನೇ ಇಸವಿ ಇದನ್ನು ನಮಗೆ ಚೆನ್ನಾಗಿ ಅರ್ಥಮಾಡಿಸಿಕೊಟ್ಟಿತು. ಇದೊಂದು ವರ್ಷ ಪೂರ್ಣ ಸವಾಲಿನದ್ದೇ ವರ್ಷವಾಗಿತ್ತು. ಇವೆಲ್ಲದರ ನಡುವೆ ಜಾಗತಿಕ ಆರೋಗ್ಯದ ಕೇಂದ್ರ ಸ್ಥಾನವಾಗಿ ಭಾರತ ಮುನ್ನೆಲೆಗೆ ಬಂತು. 2021ರಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಭಾರತದ ಪಾತ್ರವನ್ನು ನಾವು ಇನ್ನಷ್ಟು ಬಲಪಡಿಸಬೇಕು. 2020ರಲ್ಲಿ ನಾನು ಹೇಳಿದ್ದೆ - ದವಾಯಿ ನಹಿ ತೋ ಧಿಲಾಯಿ ನಹಿ. ಈಗ ನಾನು ಹೇಳ್ತಾ ಇದ್ದೇನೆ 2021ರ ನಮ್ಮ ಮಂತ್ರ ದವಾಯಿ ಭೀ ಔರ್ ಕಡಾಯಿ ಭೀ.

ನಮ್ಮ ದೇಶದಲ್ಲಿ ವದಂತಿಗಳು ಬಹುಬೇಗನೆ ಹರಡುತ್ತವೆ. ವಿಭಿನ್ನ ಜನರು ತಮ್ಮ ಸ್ವಾರ್ಥಕ್ಕೋಸ್ಕರ ಅಥವಾ ಬೇಜವಾಬ್ದಾರಿ ನಡವಳಿಕೆ ಕಾರಣ ಹಲವಾರು ವದಂತಿಗಳನ್ನು ಹರಡಬಹುದು. ಲಸಿಕಾ ಅಭಿಯಾನ ಶುರುವಾಗುತ್ತಿದ್ದಂತೆ ಇಂತಹ ರೂಮರ್​ಗಳ ಸಂಖ್ಯೆ ಹೆಚ್ಚಾಗಬಹುದು. ಈಗಾಗಲೇ ಕೆಲವು ಹುಟ್ಟಿಕೊಂಡಿವೆ. ದೇಶವಾಸಿಗಳಲ್ಲಿ ನನ್ನ ಮನವಿ ಇಷ್ಟೆ - ಕಣ್ಣಿಗೆ ಕಾಣದ ಶತ್ರುವಾಗಿರುವ ಕೋವಿಡ್ 19 ವಿರುದ್ಧ ನಾವೆಲ್ಲರೂ ಹೋರಾಡೋಣ. ವದಂತಿಗಳನ್ನು ಪರಿಶೀಲಿಸದೆ ನಂಬೋದಕ್ಕೆ ಹೋಗಬೇಡಿ ಮತ್ತು ಫಾರ್ವರ್ಡ್​ ಅಥವಾ ಹರಡುವುದಕ್ಕೂ ಹೋಗಬೇಡಿ. ಅರಿವುಳ್ಳವರಾಗಿ ವರ್ತಿಸೋಣ ಎಂದು ಪ್ರಧಾನಿ ಮೋದಿ ಹೇಳಿದರು. 


SHARE THIS

Author:

0 التعليقات: