Saturday, 12 December 2020

ಭಾರಿ ಹಿಮಪಾತ, ಮಳೆ, ಭೂಕುಸಿತ; ಜಮ್ಮು-ಶ್ರೀನಗರ ಹೆದ್ದಾರಿ ಬಂದ್


 ಭಾರಿ ಹಿಮಪಾತ, ಮಳೆ, ಭೂಕುಸಿತ; ಜಮ್ಮು-ಶ್ರೀನಗರ ಹೆದ್ದಾರಿ ಬಂದ್

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಶುಕ್ರವಾರ ರಾತ್ರಿ ಉಂಟಾಗಿರುವ ಭಾರಿ ಹಿಮಪಾತದಿಂದಾಗಿ 270 ಕೀ.ಮೀ. ಉದ್ದದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚುಗಡೆಗೊಳಿಸಲಾಗಿದೆ.

ದೋಡಾ ಜಿಲ್ಲೆಯ ಗುರ್ಮುಲ್ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಪರಿಣಾಮ ಎಂಟು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆದ್ದಾರಿಯ ಜವಾಹರ್ ಸುರಂಗದ ಮೇಲ್ಮೆಯಲ್ಲಿ ಒಂಬತ್ತು ಇಂಚುಗಳಷ್ಟು ಹಿಮ ಸಂಗ್ರಹವಾಗಿದೆ. ಮರೋಗ್, ಮಗೇರ್‌ಕೋಟ್ ಹಾಗೂ ಪಾಂಥಿಯಾಲ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಮಳೆಯಿಂದಾಗಿ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ರಸ್ತೆ ತಡೆ ಉಂಟಾಗಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಅಧಿಕಾರಿಗಳು ಆದಷ್ಟು ಬೇಗನೇ ಕಾಶ್ಮೀರ ಪ್ರದೇಶವನ್ನು ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಂಚಾರ ಪುನಃಸ್ಥಾಪಿಸುವ ಪ್ರಯತ್ನದಲ್ಲಿದ್ದಾರೆ.

ಕೇಂದ್ರಾಡಳಿತ ಜಮ್ಮುವಿನ ದೋಡಾ ಜಿಲ್ಲೆಯಲ್ಲಿ ಮಳೆಯಿಂದಾಗಿ ಭಾರಿ ಭೂಕುಸಿತ ಸಂಭವಿಸಿತ್ತು. ಹಾಗಾಗಿ ಕಸ್ತಿಗರದ ಗುರ್ಮುಲ್ ಗ್ರಾಮದಲ್ಲಿ ಎಂಟು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಚಳಿಗಾಲ ಆರಂಭವಾಗಿರುವುದರಿಂದ ಜಮ್ಮುವಿನಲ್ಲಿ ಹೆಚ್ಚಿನ ಹಿಮಪಾತ ನಿರೀಕ್ಷೆ ಮಾಡಲಾಗಿದೆ. ಹಾಗೆಯೇ ತಾಪಮಾನವು 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ.


SHARE THIS

Author:

0 التعليقات: