Wednesday, 2 December 2020

ಬ್ರಹ್ಮಪುತ್ರಾ ನದಿಗೆ ಅಣೆಕಟ್ಟು ಚೀನದ ಜಲ ಅಸ್ತ್ರ?


 ಬ್ರಹ್ಮಪುತ್ರಾ ನದಿಗೆ ಅಣೆಕಟ್ಟು ಚೀನದ ಜಲ ಅಸ್ತ್ರ?

ತನ್ನ ನೆರೆ ರಾಷ್ಟ್ರಗಳಿಗೆ ತೊಂದರೆ ಕೊಡಲು ಚೀನ ದಶಕಗಳಿಂದಲೂ ಜಲ ಅಸ್ತ್ರವನ್ನೂ ಬಳಸುತ್ತಾ ಬಂದಿರುವುದು ತಿಳಿಯದ ವಿಷಯವಲ್ಲ. ಈಗ ಚೀನ ತನ್ನ 14ನೇ ಪಂಚವಾರ್ಷಿಕ ಯೋಜನೆಯಲ್ಲಿ ಬ್ರಹ್ಮಪುತ್ರಾ ನದಿಗೆ ಬೃಹತ್‌ ಅಣೆಕಟ್ಟು ನಿರ್ಮಿಸಿ, ಜಲ ವಿದ್ಯುತ್‌ ಯೋಜನೆ ಕೈಗೊಳ್ಳಲು ನಿರ್ಧರಿಸಿರುವುದಾಗಿ ಘೋಷಿಸಿದೆ. ಚೀನದ ಈ ನಡೆ ಭಾರತ ಹಾಗೂ ಬಾಂಗ್ಲಾದೇಶದ ಆಕ್ರೋಶಕ್ಕೆ ಕಾರಣವಾಗಿದೆ…

2021ರಿಂದ ನಿರ್ಮಾಣ ಆರಂಭ

ಬ್ರಹ್ಮಪುತ್ರಾ ನದಿಯು ಟಿಬೆಟ್‌, ಭಾರತ, ಬಾಂಗ್ಲಾದೇಶದಲ್ಲಿ 3,200 ಕಿ.ಮೀ. ಹರಿದು ಬಂಗಾಲಕೊಲ್ಲಿಯಲ್ಲಿ ಲೀನವಾಗುತ್ತದೆ. ಈಗ ಟಿಬೆಟ್‌ ಅಂಚಿನಲ್ಲಿ 2021ರಿಂದ ಯಾರ್ಲುಂಗ್‌ ಝಾಂಗ್ಬೋ(ಬ್ರಹ್ಮಪುತ್ರ ನದಿ) ಪ್ರವಾಹದ ದಿಕ್ಕಿನಲ್ಲಿ 2021ರಿಂದ ಡ್ಯಾಂ ನಿರ್ಮಾಣ ಗುರಿ ಹಾಕಿಕೊಂಡಿರುವ ಚೀನ 2035ರಲ್ಲಿ ಅಣೆಕಟ್ಟು ಪೂರ್ಣಗೊಳಿಸುತ್ತದಂತೆ. ಈ ಹೊಸ ಡ್ಯಾಂ ಅರುಣಾಚಲ ಪ್ರದೇಶದ ಭಾರತ-ಚೀನ ಗಡಿಯಿಂದ ಕೇವಲ 30 ಕಿ.ಮಿ. ದೂರದಲ್ಲಿರಲಿದೆ.

ಅಂತಾರಾಷ್ಟ್ರೀಯ ಜಲ ಒಪ್ಪಂದದ ಉಲ್ಲಂಘನೆ: ಅಂತಾರಾಷ್ಟ್ರೀಯ ಜಲ ಒಪ್ಪಂದದ ಪ್ರಕಾರ ಎರಡು ರಾಷ್ಟ್ರಗಳ ನಡುವೆ ಹರಿಯುವ ಒಂದು ನದಿಯ ಹರಿವಿಗೆ ಅಡ್ಡಿಯಾಗುವಂಥ ಕಾಮಗಾರಿಗಳನ್ನು ಮೇಲ್ಪಾತ್ರದ ರಾಷ್ಟ್ರಗಳು ನಡೆಸಬಾರದು. ಇನ್ನು ಯಾವುದೇ ಅಭಿವೃದ್ಧಿ ಯೋಜನೆ ಕೈಗೊಂಡರೂ, ನದಿ ಹರಿದು ಹೋಗುವ ಕೆಳಪಾತ್ರದ ದೇಶಗಳೊಂದಿಗೆ ಮಾಹಿತಿ ಹಂಚಿಕೊಳ್ಳಬೇಕು. ಆದರೆ, ಡೋಕ್ಲಾಂ ಘರ್ಷಣೆಯ ಅನಂತರ ಬ್ರಹ್ಮಪುತ್ರಾ ನದಿಯ ಕುರಿತ ಜಲವಿಜ್ಞಾನ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಳ್ಳಲು ನಿರಾಕರಿಸುತ್ತಲೇ ಬಂದಿರುವ ಚೀನ, ಈ ಕುರಿತ ಮಾಹಿತಿಯನ್ನು ಬಾಂಗ್ಲಾದೇಶದೊಂದಿಗೆ ಮಾತ್ರ ಹಂಚಿಕೊಂಡು ನಿಯಮ ಉಲ್ಲಂಘಿಸಿದೆ. ಚೀನದ ಈ ದುರುದ್ದೇಶಪೂರಿತ ಯೋಜನೆಯನ್ನು ಬಾಂಗ್ಲಾದೇಶವೂ ವಿರೋಧಿಸುತ್ತಲೇ ಇದೆ.

ಏನು ಅಪಾಯವಿದೆ?

ಇಂಥ ಋಣಾತ್ಮಕ ಕಾಮಗಾರಿಗಳಿಂದಾಗಿ ಕೆಳಪಾತ್ರದಲ್ಲಿ ಜಲಾಭಾವ ಎದುರಾಗುತ್ತದೆ, ಇದರಿಂದಾಗಿ ಜೀವವೈವಿಧ್ಯ, ಕೃಷಿ ಚಟುವಟಿಕೆಯ ಮೇಲೂ ಪರಿಣಾಮವಾಗುತ್ತದೆ. ಈ ಅಣೆಕಟ್ಟೆ ಪೂರ್ಣಗೊಂಡರೆ ಪಶ್ಚಿಮ ಬಂಗಾಲ, ನಾಗಾಲ್ಯಾಂಡ್‌, ಮೇಘಾಲಯ, ಸಿಕ್ಕಿಂ, ಅಸ್ಸಾಂ, ಅರುಣಾಚಲ ಪ್ರದೇಶ ಹಾಗೂ ಬಾಂಗ್ಲಾದೇಶದ ಜೀವ ವೈವಿಧ್ಯಕ್ಕೆ ಭಾರೀ ಅಪಾಯ ಉಂಟಾಗಲಿದೆ ಹಾಗೂ ಯುದ್ಧ ಸಂದರ್ಭಗಳಲ್ಲಿ ಜಲಾಭಾವ ಸೃಷ್ಟಿಸುವ ಅಸ್ತ್ರವಾಗಿಯೂ ಚೀನ ಈ ಯೋಜನೆಗಳನ್ನು ಬಳಸಿಕೊಳ್ಳಬಹುದು ಎಂದು ಪರಿಣತರು ಎಚ್ಚರಿಸುತ್ತಿದ್ದಾರೆ.

ಮೊದಲೇನೂ ಅಲ್ಲ

ದಶಕಗಳಿಂದಲೂ ಬ್ರಹ್ಮಪುತ್ರಾ ನದಿಯ ಸುತ್ತ ಚೀನ ಜಲಯೋಜನೆಗಳನ್ನು ಕೈಗೊಳ್ಳುತ್ತಲೇ ಬಂದಿದೆ. 2010ರಲ್ಲಿ ಅದು ಇದೇ ನದಿಗೆ ನಿರ್ಮಿಸಿದ ಜಗತ್ತಿನ ಅತೀದೊಡ್ಡ ಅಣೆಕಟ್ಟು ಜಾಂಗು ಹಾಗೂ ಲಾಲ್ಹೋ ಜಲವಿದ್ಯುತ್‌ ಯೋಜನೆಯೂ ನದಿಯ ಕೆಳಪಾತ್ರಕ್ಕೆ ಅಪಾರ ಹಾನಿ ಮಾಡುತ್ತಲೇ ಇದೆ. ಈಗಾಗಲೇ ಅದು ಬ್ರಹ್ಮಪುತ್ರಾ ನದಿಗೆ 11 ಡ್ಯಾಂಗಳನ್ನು ನಿರ್ಮಿಸಿದೆ. ಈಗಿನ ಯೋಜನೆಯನ್ನೂ ಒಳಗೊಂಡು ಟಿಬೆಟ್‌ನಲ್ಲಿ ಒಟ್ಟು 55 ಜಲಾಶಯ ನಿರ್ಮಿಸುವ ಉದ್ದೇಶಹೊಂದಿದ್ದು, ತನ್ನ ಕ್ಸಿನ್‌ಜಿಯಾಂಗ್‌ ಮತ್ತು ಗಾನ್ಸುವಿನಂಥ ಪ್ರದೇಶಗಳಿಗೆ ಜಲಪೂರೈಕೆ ಮಾಡುವ ಉದ್ದೇಶ ಇದರ ಹಿಂದಿದೆ ಎನ್ನಲಾಗುತ್ತದೆ. ಈಗ ಬಹ್ಮಪುತ್ರಾ ನದಿಗೆ ನಿರ್ಮಿಸಲು ಯೋಚಿಸುತ್ತಿರುವ ಡ್ಯಾಂನ ಉದ್ದೇಶವೂ ಅದೇ ಆಗಿದೆ ಎನ್ನುತ್ತಾರೆ ರಕ್ಷಣ ಪರಿಣತರು.


SHARE THIS

Author:

0 التعليقات: