Friday, 11 December 2020

ಈ ಬೆಳವಣಿಗೆ ಆತಂಕಕಾರಿ

ಈ ಬೆಳವಣಿಗೆ ಆತಂಕಕಾರಿ


ಹೈದರಾಬಾದ್ ಮಹಾನಗರ ಪಾಲಿಕೆಯ  ಚುನಾವಣೆ ಎನ್ನುವುದು ಹೆಚ್ಚೆಂದರೆ ತೆಲಂಗಾಣ ರಾಜ್ಯಕ್ಕೆ ಕುತೂಹಲಕಾರಿ ಸಂಗತಿಯಾಗಬೇಕು. ಆದರೆ, ಕೇಂದ್ರ ಗೃಹ ಸಚಿವ, ಉತ್ತರ ಪ್ರದೇಶದ ಮುಖ್ಯಮಂತ್ರಿ, ಆಡಳಿತ ಪಕ್ಷದ ರಾಷ್ಟಿಯ ಅಧ್ಯಕ್ಷ ಸೇರಿ ರಾಷ್ಟಮಟ್ಟದ ನಾಯಕರೇ ಪ್ರಚಾರಕ್ಕಿಳಿಯುವ ಮೂಲಕ ಆ ಚುನಾವಣೆಯನ್ನು ರಾಷ್ಟಿಯ ಕುತೂಹಲವಾಗಿ ಮಾರ್ಪಡಿಸಿದರು. ನಿರೀಕ್ಷಿತ ಫಲ ಕಾಣದಿದ್ದರೂ 4 ವರ್ಷಗಳ ಹಿಂದೆ 4 ಸ್ಥಾನದಲ್ಲಿದ್ದ ಬಿಜೆಪಿ 48 ಸ್ಥಾನಗಳನ್ನು ಪಡೆದು ಎರಡನೇ ದೊಡ್ಡ ಪಕ್ಷವಾಗಿ ಎದ್ದು ನಿಂತಿರುವುದು ಆತಂಕಕಾರಿಯೆ. ಮುಸ್ಲಿಮರೇ ನಿರ್ಣಾಯಕ ಶಕ್ತಿಯಾಗಿರುವ ಹೈದರಾಬಾದ್, ಅಸದುದ್ದೀನ್ ಉವೈಸಿಯವರ ಆಲ್ ಇಂಡಿಯಾ ಮಜ್ಲಿಸೇ ಇತ್ತಿಹಾದುಲ್ ಮುಸ್ಲಿಮೀನ್ ಭದ್ರಕೋಟೆ ಕೂಡಾ. ಎಲ್ಲಕ್ಕಿಂತ ಮುಖ್ಯವಾಗಿ, ಹೈದರಾಬಾದಿನ ಅಭಿವೃದ್ಧಿಗಿಂತಲೂ ‘ಹೈದರಾಬಾದ್’ ಎನ್ನುವ ಹೆಸರನ್ನು ಬದಲಿಸುವುದಾಗಿತ್ತು ಬಿಜೆಪಿಯ ಮುಖ್ಯ ಅಜೆಂಡಾ. ಪುಣ್ಯಕ್ಕೆ ಈ ಬಾರಿ ಸರಳ ಬಹುಮತಕ್ಕೆ ಬೇಕಾಗಿದ್ದ 76 ಸೀಟುಗಳನ್ನು ಗೆಲ್ಲಲಾಗಿಲ್ಲ. ಆದರೆ ಮುಂದಿನ ಬಾರಿ ಗೆಲ್ಲುವ ಎಲ್ಲ ಸಾಧ್ಯತೆಗಳನ್ನು ಪ್ರದರ್ಶಿಸಿದೆ.

   ಇಲ್ಲಿಯೂ ಕಾಂಗ್ರೆಸ್ ನದ್ದು ಕಳಪೆ ಸಾಧನೆ. ಅದಕ್ಕಿಂತಲೂ ಮುಖ್ಯವಾಗಿ ತನ್ನನ್ನು ತಾನರಿಯದೇ ಹೋಗಿರುವ ಕಾಂಗ್ರೆಸ್ ನ ನಾಯಕತ್ವದ ಬಗ್ಗೆ ಅನುಕಂಪ ಮೂಡಬೇಕು.

   150 ಸ್ಥಾನಗಳ ಪೈಕಿ 146 ಸ್ಥಾನಗಳನ್ನು ಅದು ಸ್ಫರ್ಧಿಸಿದೆ. ಗೆದ್ದಿರುವುದು ಎರಡೇ 2! ಉವೈಸಿ ಯವರ ಮಜ್ಲಿಸ್ ಸ್ಫರ್ಧಿಸಿರುವ 51 ಸ್ಥಾನಗಳ ಪೈಕಿ 44ನ್ನು ಗೆದ್ದುಕೊಂಡಿದೆ. ಅಂದರೆ, ಅವರು ತನ್ನ ಗೆಲ್ಲುವ ಸಾಮರ್ಥ್ಯವನ್ನು ಆಧರಿಸಿಯೇ ಸ್ಫರ್ಧಿಸಿದ್ದಾರೆಂದರ್ಥ. ಕಾಂಗ್ರೆಸ್ ಕೂಡ ಈ ಪಕ್ವತೆಯನ್ನು ತೋರಿಸಿದ್ದರೆ, ಇತರ ಪಕ್ಷಗಳ ಜತೆ ಮೈತ್ರಿಯೋ, ಒಪ್ಪಂದವೋ ಮಾಡಿಕೊಂಡಿದ್ದರೆ ಬಿಜೆಪಿಯ ವೇಗವನ್ನು ನಿಯಂತ್ರಿಸಬಹುದಿತ್ತು. ಕಾಂಗ್ರೆಸ್ ನ ಸಮಸ್ಯೆಯೆಂದರೆ; ಜಾತ್ಯತೀತ ಪಕ್ಷಗಳು ಮತ ವಿಭಜನೆಯನ್ನು ತಪ್ಪಿಸುವುದಕ್ಕಾಗಿ ತನ್ನನ್ನು ಬೆಂಬಲಿಸಬೇಕೆAದು  ಮುಂದಾಗುವುದಿಲ್ಲ. ಮೊನ್ನೆ ಬಿಹಾರದಲ್ಲಿ, ಈಗ ಹೈದರಾಬಾದಿನಲ್ಲಿ ಅದು ಸಾಬೀತಾಗಿದೆ. 

   ಅಷ್ಟಕ್ಕೂ ಹೈದರಾಬಾದಿನಲ್ಲಿ ಬಿಜೆಪಿ ಏಕೆ ಗೆಲ್ಲಬಾರದಿತ್ತು ಎಂದರೆ, ಅದು ಜನರ ಮನಸ್ಸುಗಳಲ್ಲಿ ವಿಷ ತುಂಬುವ ಕೆಲಸವನ್ನೇ ಅದು ಎಂದಿನAತೆ ಅಲ್ಲೂ ಮಾಡಿದೆ. ಹೈದರಾಬಾದ್ ಎನ್ನುವ ಹೆಸರನ್ನು ‘ಭಾಗ್ಯ ನಗರ’ ಮಾಡುವುದಕ್ಕಾಗಿಯೇ ಅದು ಓಟು ಕೇಳಿತ್ತು. ‘ಭಾಗ್ಯ ನಗರ’ ಮಾಡುವುದರಿಂದ ಹೈದರಾಬಾದಿಗರಿಗೆ ಅದೇನು ಭಾಗ್ಯ ಬರುವುದಿತ್ತೋ? ಆದರೆ, ಜನರ ಮನಸ್ಸುಗಳಲ್ಲಿ ಒಡಕುಂಟು ಮಾಡುವುದಕ್ಕೆ, ಸಂಘರ್ಷ ಸೃಷ್ಟಿಸುವುದಕ್ಕೇ ಸಾಧ್ಯವಾಗುತ್ತಿತ್ತು. ಅವರಿಗೆ ಬೇಕಿರುವುದೂ ಅದುವೇ ತಾನೇ? ಪ್ರತೀ ಊರಿನ ಹೆಸರುಗಳಿಗೂ ಅವರದೇ ಆದ ಐತಿಹಾಸಿಕ ಹಿನ್ನೆಲೆಗಳಿರುತ್ತವೆ. ಅವುಗಳನ್ನು ಯಥಾವತ್ತಾಗಿ ಉಳಿಸುವುದು ದೇಶದ ಪರಂಪರೆಯನ್ನೂ ಉಳಿಸದಂತೆ. ಸಂಕುಚಿತವಾದ ಕೋಮುವ್ಯಾಧಿಪೀಡಿತರಾಗಿ ಹೆಸರುಗಳನ್ನೆಲ್ಲ ಬದಲಿಸುತ್ತಾ ಹೋಗುವುದು ದೇಶದ ಇತಿಹಾಸ, ಸಂಸ್ಕೃತಿ, ಪರಂಪರೆಗಳ ಮೇಲೆ ಮಾಡುವ ದಾಳಿ. 800 ವರ್ಷಗಳ ಕಾಲ ಇಲ್ಲಿ ಜಾತ್ಯತೀತ ಸಂಸ್ಕೃತಿಯನ್ನು ಸಂರಕ್ಷಿಸಿಕೊAಡೇ ದೇಶವನ್ನಾಳಿದ್ದ ಮುಸ್ಲಿಂ ಅರಸರುಗಳ ಕಾರಣದಿಂದ ಹುಟ್ಟಿಕೊಂಡ ಹೈದರಾಬಾದ್, ಅಹ್ಮದಾಬಾದ್, ಇಲಾಹಾಬಾದ್, ಫೈಝಾಬಾದ್ ಗಳನ್ನು ಅಸಹನೆಯಿಂದ ಕಾಣುವವರು ಭಾರತದ ಪರಂಪರೆಯನ್ನು ಜೀರ್ಣಿಸಿಕೊಳ್ಳಲಾಗದವರಷ್ಟೆ. ಇಂತಹವರ ಪ್ರಯತ್ನಗಳಿಗೆ ಸೋಲಬೇಕಾದುದು ದೇಶದ ಹಿತಾಸಕ್ತಿಗೆ ಅಗತ್ಯ. ಈ ನಿಟ್ಟಿನಲ್ಲಿ ಎಲ್ಲ ಡೊಂಬರಾಟಗಳ ಹೊರತಾಗಿಯೂ ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟ ಹೈದರಾಬಾದಿಗರು ಸದ್ಯ ನಿಟ್ಟುಸಿರು ಬಿಡಬಹುದು. ಐತಿಹಾಸಿಕ ಚಾರ್ ಮಿನಾರ್ ಕೂಡಾ ಅವರು ಅಧಿಕಾರಕ್ಕೆ ಬಂದಿದ್ದರೆ ಅಪಾಯಕ್ಕಕೊಳಗಾಗುವ ಸಾಧ್ಯತೆ ಇತ್ತು. ಹೈದರಾಬಾದಿನ ಸೌಹಾರ್ದ ಪರಂಪರೆಯ ಸಂರಕ್ಷಣೆಗೆ ಮುಂದಿನ ದಿನಗಳಲ್ಲಿ ಪಕ್ಷಾತೀತ ಪ್ರಯತ್ನಗಳಾಗಬೇಕಾದ ಅಗತ್ಯವಿದೆ.
 (ಡಿಸೆಂಬರ್ 7-13 ಅಲ್ ಅನ್ಸಾರ್ ವಾರ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ)

-ಕೆ.ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ


SHARE THIS

Author:

0 التعليقات: