Sunday, 27 December 2020

ಅಜಿಂಕ್ಯ ರಹಾನೆ ಶತಕದಾಟ, ಭಾರತಕ್ಕೆ ಇನಿಂಗ್ಸ್ ಮುನ್ನಡೆ


ಅಜಿಂಕ್ಯ ರಹಾನೆ ಶತಕದಾಟ, ಭಾರತಕ್ಕೆ ಇನಿಂಗ್ಸ್ ಮುನ್ನಡೆ

ಮೆಲ್ಬೋರ್ನ್: ನಾಯಕ ಅಜಿಂಕ್ಯ ರಹಾನೆ (104*ರನ್, 200 ಎಸೆತ, 12 ಬೌಂಡರಿ) ಶತಕದಾಟದ ನೆರವಿನಿಂದ ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿಯ ಎರಡನೇ ಕದನದಲ್ಲಿ 82 ರನ್ ಮುನ್ನಡೆ ಸಾಧಿಸಿದೆ. ಆಸ್ಟ್ರೇಲಿಯಾ ನೆಲದಲ್ಲಿ ಎರಡನೇ ಶತಕ ದಾಖಲಿಸಿದ ಹಿರಿಮೆ ಸಂಪಾದಿಸಿದ ರಹಾನೆ ಭಾರತಕ್ಕೆ ಇನಿಂಗ್ಸ್ ಮುನ್ನಡೆ ದಕ್ಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 1 ವಿಕೆಟ್‌ಗೆ 36 ರನ್‌ಗಳಿಂದ ದಿನದಾಟ ಆರಂಭಿಸಿದ ಭಾರತ ತಂಡ ಭಾನುವಾರದ ಅಂತ್ಯಕ್ಕೆ 5 ವಿಕೆಟ್‌ಗೆ 277ರನ್ ಕಲೆಹಾಕಿದೆ. ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ (40*ರನ್, 104 ಎಸೆತ, 1 ಬೌಂಡರಿ) ಜೋಡಿ ಮುರಿಯದ 6ನೇ ವಿಕೆಟ್‌ಗೆ 104 ರನ್ ಕಲೆಹಾಕಿದೆ. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 195 ರನ್ ಗಳಿಸಿತ್ತು.

* ಕಮ್ಮಿನ್ಸ್-ಸ್ಟಾರ್ಕ್ ಆಘಾತ

ಎರಡನೇ ದಿನದಾಟದ ಆರಂಭದಲ್ಲೇ ಆಸೀಸ್ ವೇಗಿಗಳಾದ ಪ್ಯಾಟ್ ಕಮ್ಮಿನ್ಸ್ (71ಕ್ಕೆ 2) ಹಾಗೂ ಮಿಚೆಲ್ ಸ್ಟಾರ್ಕ್ ಜೋಡಿ (61ಕ್ಕೆ 2) ಭಾರತಕ್ಕೆ ಆಘಾತ ನೀಡಿತು. 28 ರನ್‌ಗಳಿಂದ ಶುಭಮಾನ್ ಗಿಲ್ ಹಾಗೂ 7 ರನ್‌ಗಳಿಂದ ದಿನದಾಟ ಆರಂಭಿಸಿದ ಉಪನಾಯಕ ಚೇತೇಶ್ವರ್ ಪೂಜಾರ ಜೋಡಿ ದಿನದ ಆರಂಭದಲ್ಲಿ ಕೆಲಕಾಲ ಸಮರ್ಥ ನಿರ್ವಹಣೆ ತೋರಿದರೂ ಹೆಚ್ಚು ಹೊತ್ತು ನಿಲ್ಲಲು ವಿಫಲವಾಯಿತು. ಶನಿವಾರದ ಮೊತ್ತಕ್ಕೆ 25 ರನ್ ಪೇರಿಸಿದ ಈ ಜೋಡಿ 2ನೇ ವಿಕೆಟ್‌ಗೆ 61 ರನ್ ಜತೆಯಾಟವಾಡಿ ಬೇರ್ಪಟ್ಟಿತು. ಪದಾರ್ಪಣೆ ಪಂದ್ಯದಲ್ಲೆ ಅರ್ಧಶತಕದಂಚಿನಲ್ಲಿ ಗಿಲ್, ಕಮ್ಮಿನ್ಸ್ ಎಸೆತದಲ್ಲಿ ವಿಕೆಟ್ ಕೀಪರ್ ಟೀಮ್ ಪೇನ್‌ಗೆ ಕ್ಯಾಚ್ ನೀಡಿದರು. ಕಮ್ಮಿನ್ಸ್ ಮರು ಓವರ್‌ನಲ್ಲೇ ಪೂಜಾರ ಕೂಡ ನಿರ್ಗಮಿಸಿದರು.

* ರಹಾನೆ- ಜಡೇಜಾ ತಿರುಗೇಟು

ಕಮ್ಮಿನ್ಸ್ ನೀಡಿದ ಆಘಾತದಿಂದ 64 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಭಾರತ ತಂಡ ಇನಿಂಗ್ಸ್ ಹಿನ್ನಡೆ ಭೀತಿ ಎದುರಿಸಿತು. ಈ ವೇಳೆ ಅಜಿಂಕ್ಯ ರಹಾನೆ ಸಮರ್ಥ ನಿರ್ವಹಣೆ ಮೂಲಕ ಗಮನಸೆಳೆದರು. ಹನುಮ ವಿಹಾರಿ (21) ಜತೆಗೂಡಿ 4ನೇ ವಿಕೆಟ್‌ಗೆ ಉಪಯುಕ್ತ 52 ರನ್ ಜತೆಯಾಟವಾಡಿದರೆ, ರಹಾನೆ-ರಿಷಭ್ ಪಂತ್ (29) ಜೋಡಿ 5ನೇ ವಿಕೆಟ್‌ಗೆ 57 ರನ್ ಜತೆಯಾಟವಾಡಿದರು. ತಂಡಕ್ಕೆ ಇನಿಂಗ್ಸ್ ಮುನ್ನಡೆ ದಕ್ಕುವ ಹಂತದಲ್ಲಿ ರಿಷಭ್ ಪಂತ್ ಸ್ಟಾರ್ಕ್ ಎಸೆತದಲ್ಲಿ ಪೇನ್‌ಗೆ ಕ್ಯಾಚ್ ನೀಡಿದರು. ನಂತರ ರಹಾನೆ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಜೋಡಿ ಭರ್ಜರಿ ಇನಿಂಗ್ಸ್ ಕಟ್ಟಿತು. ದಿನದಾಟದ ಮೂರನೇ ಅವಧಿ ಪೂರ್ತಿ ಕ್ರೀಸ್‌ನಲ್ಲಿ ನಿಂತ ಈ ಜೋಡಿ ಆಸೀಸ್ ಬೌಲರ್‌ಗಳಿಗೆ ತಿರುಗೇಟು ನೀಡಿತು. ಯಾವುದೇ ಅಪಾಯಕ್ಕೆ ಎಡೆಮಾಡಿಕೊಡದೆ ಸಮರ್ಥವಾಗಿ ನಿಭಾಯಿಸಿದ ರಹಾನೆ-ಜಡೇಜಾ ಜೋಡಿ ತಂಡವನ್ನು ಉತ್ತಮ ಸ್ಥಿತಿಯತ್ತ ಕೊಂಡ್ಯೊಯ್ದಿದೆ.

ಆಸ್ಟ್ರೇಲಿಯಾ: 195, ಭಾರತ : 91.3 ಓವರ್‌ಗಳಲ್ಲಿ 5 ವಿಕೆಟ್‌ಗೆ 277 (ಶುಭಮಾನ್ ಗಿಲ್ 45, ಪೂಜಾರ 17, ಅಜಿಂಕ್ಯ ರಹಾನೆ 104*, ಹನುಮ ವಿಹಾರಿ 21, ರಿಷಭ್ ಪಂತ್ 29, ರವೀಂದ್ರ ಜಡೇಜಾ 40*, ಮಿಚೆಲ್ ಸ್ಟಾರ್ಕ್ 61ಕ್ಕೆ 2, ಪ್ಯಾಟ್ ಕಮ್ಮಿನ್ಸ್ 71ಕ್ಕೆ 2, ನಥಾನ್ ಲ್ಯಾನ್ 52ಕ್ಕೆ 1).SHARE THIS

Author:

0 التعليقات: