ವಯಸ್ಸಾದ ಹಸು ಗಂಡು ಕರುಗಳನ್ನು ಏನು ಮಾಡಬೇಕು : ಸಿದ್ದರಾಮಯ್ಯ
ಬೆಂಗಳೂರು : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ನಿರ್ಧರಿಸಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ವಿಧಾನಪರಿಷತ್ತಿನಲ್ಲಿ ಈ ವಿಧೇಯಕ ಮಂಡನೆ ಸಾಧ್ಯವಾಗಿರದ ಕಾರಣ, ಗೋಹತ್ಯೆ ನಿಷೇಧ ಜಾರಿಗೆ ತರುವ ಉದ್ದೇಶದಿಂದ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸುವ ನಿರ್ಧಾರಕ್ಕೆ ಬಂದಿದೆ.
ಇದೀಗ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಈ ಕುರಿತಂತೆ ಪ್ರಶ್ನೆ ಎತ್ತಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ವಯಸ್ಸಾದ ಹಸು, ಗಂಡು ಕರುಗಳು ಹೀಗೆ ಅನುಪಯುಕ್ತ ಜಾನುವಾರುಗಳನ್ನು ರೈತರು (Farmer) ಏನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಬಗ್ಗೆ ನಾನು ಪ್ರಶ್ನೆ ಮಾಡಿದರೆ ನನ್ನನ್ನು ಗೋಮಾತೆಯ ವಿರೋಧಿ ಅಂತಾರೆ. ವಯಸ್ಸಾದ ಹಸುವೊಂದನ್ನು ಸಾಕಲು ರೈತನಿಗೆ ನಿತ್ಯ 100 ರೂಪಾಯಿ ಖರ್ಚಾಗುತ್ತೆ, ಅದನ್ನೇನಾದ್ರೂ ಬಿಜೆಪಿಯವರು ಕೊಡ್ತಾರಾ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.
ಅಲ್ಲದೆ, ನಾವು ಮಹಾತ್ಮ ಗಾಂಧಿಯವರು ಬೋಧಿಸಿದ ಹಿಂದುತ್ವದ (Hindu) ಹಾದಿಯಲ್ಲಿ ನಡೆಯುವವರು. ಬಿಜೆಪಿಯವರಂತೆ (BJP) ಧರ್ಮ, ದೇವರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವವರಲ್ಲ. ನಾನು ಹಿಂದೂ, ಗಾಂಧೀಜಿಯವರು ಹಿಂದೂ, ಗೋಪಾಲಕೃಷ್ಣ ಗೋಖಲೆ ಅವರು ಹಿಂದೂ, ನಮ್ಮದು ಪ್ರೀತಿಸುವ ಹಿಂದುತ್ವವಾದರೆ, ಬಿಜೆಪಿಯವರದು ದ್ವೇಷಿಸುವ ಹಿಂದುತ್ವ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ (Congress) ಯಾರ ಪರವಾಗಿ ಇಷ್ಟು ವರ್ಷಗಳ ಕಾಲ ಹೋರಾಟ ಮಾಡುತ್ತಾ ಬಂದಿತ್ತೋ, ಆ ಸಮುದಾಯದ ಜನರ ಮತಗಳೇ ಇಂದು ಹಂಚಿಹೋಗಿದೆ. ಸುಳ್ಳು ಆಶ್ವಾಸನೆಗಳು, ಪೊಳ್ಳು ಹೋರಾಟಗಳ ಮೂಲಕ ನಮ್ಮ ಪಕ್ಷದ ಮತಗಳನ್ನು ಒಡೆಯುವ ಕುತಂತ್ರ ರಾಜಕಾರಣಕ್ಕೆ ಎದುರಾಳಿಗಳು ಇಳಿದಿದ್ದಾರೆ. ಇದರ ವಿರುದ್ಧ ಜನಜಾಗೃತಿ ಮೂಡಿಸಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು ಇಂದು ಸಂಪುಟ ಸಭೆಯಲ್ಲಿ (Cabinet) ಕೈಗೊಂಡ ಸುಗ್ರೀವಾಜ್ಞೆ ಪ್ರಸ್ತಾವನೆಯನ್ನು ರಾಜ್ಯಪಾಲರ ಬಳಿಗೆ ಕಳಹಿಸಲಾಗುವುದು. ರಾಜ್ಯಪಾಲರ ಸಹಿ ಬಿದ್ದ ಕ್ಷಣದಿಂದ ಸುಗ್ರೀವಾಜ್ಞೆ ಜಾರಿಯಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
0 التعليقات: