Thursday, 24 December 2020

ಶಿಕ್ಷಣ-ಆರೋಗ್ಯದ ವಿಷಯದಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ : ಸಚಿವ ಸುರೇಶ್‍ ಕುಮಾರ್


 ಶಿಕ್ಷಣ-ಆರೋಗ್ಯದ ವಿಷಯದಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ : ಸಚಿವ ಸುರೇಶ್‍ ಕುಮಾರ್

ಬೆಂಗಳೂರು,ಡಿ.24-ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಶಾಲಾ-ಕಾಲೇಜುಗಳನ್ನು ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರತಿಷ್ಠೆ ಇಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪ್ರಾರಂಭ ಮಾಡುತ್ತಿದ್ದೇವೆ ಎಂದು ಸಚಿವ ಎಸ್.ಸುರೇಶ್‍ಕುಮಾರ್ ಹೇಳಿದರು. ಪ್ರತಿಷ್ಠೆಗೆ ಬಿದ್ದು ಶಾಲಾ-ಕಾಲೇಜುಗಳನ್ನು ತೆರೆಯಬೇಕೆಂಬ ಉದ್ದೇಶ ನನಗೂ ಇಲ್ಲ. ಸರ್ಕಾರಕ್ಕೂ ಇಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಜ.1ರಿಂದ 10ನೇ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಪ್ರಾರಂಭ ಮಾಡುತ್ತಿದ್ದೇವೆ ಹೊರತು ಇದರಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾರೂ ವೈಯಕ್ತಿಕ ಪ್ರತಿಷ್ಠೆಗಾಗಿ ಕೆಲಸ ಮಾಡುತ್ತಿಲ್ಲ. ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಸಮನ್ವಯತೆಯಿಂದ ಕೆಲಸ ಮಾಡುತ್ತಿವೆ. ಇಬ್ಬರೂ ಸಮನ್ವಯತೆಯಿಂದಲೇ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿವೆ. ನಮ್ಮಲ್ಲಿ ಹೊಂದಾಣಿಕೆ ಇರುವುದರಿಂದಲೇ ನಾವು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುತ್ತೇವೆ. ಉಳಿದಂತೆ ನಮ್ಮ ನಡುವೆ ಹೊಂದಾಣಿಕೆ ಕೊರತೆ ಇದೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪನವರ ಮಾರ್ಗದರ್ಶನದಂತೆ ನಾನು ಮತ್ತು ಸಚಿವ ಸುಧಾಕರ್ ಅವರು ಕೆಲಸ ಮಾಡುತ್ತಿದ್ದೇವೆ. ಇಬ್ಬರ ನಡುವೆ ಸಮನ್ವಯದ ಕೊರತೆ ಇದೆ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ? ಶಾಲಾಕಾಲೇಜುಗಳನ್ನು ಹಂತ ಹಂತವಾಗಿ ಪ್ರಾರಂಭಿಸಬೇಕೆಂದು ಕೋವಿಡ್ ಸಲಹಾ ಸಮಿತಿ ವರದಿ ನೀಡಿತ್ತು. ಅದರಂತೆ ಹಲವು ಬಾರಿ ಇಲಾಖೆಗಳೊಂದಿಗೆ ಸಭೆ ನಡೆಸಿ ಅಂತಿಮವಾಗಿ ಸಿಎಂ ನಿರ್ಧಾರಕ್ಕೆ ಬಿಟ್ಟಿದ್ದೆವು. ಅವರ ಸೂಚನೆಯಂತೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.

ನಗರ ಪ್ರದೇಶಗಳಲ್ಲಿ ಮಕ್ಕಳಿಗೆ ಆನ್‍ಲೈನ್ ಸೇರಿದಂತೆ ಬೇರೆ ಬೇರೆ ವ್ಯವಸ್ಥೆಯಿದೆ. ಗ್ರಾಮೀಣಾ ಭಾಗಗಳಲ್ಲಿ ಮಕ್ಕಳಿಗೆ ತರಗತಿ ನಡೆಸಲು ಆನ್‍ಲೈನ್ ಸಮಸ್ಯೆ ಇರುವುದರಿಂದ ಅಲ್ಲಿ ಬಾಲ್ಯ ವಿವಾಹ, ಬಾಲಕಾರ್ಮಿಕದಂತಹ ಅನಿಷ್ಠ ಪದ್ದತಿಗಳು ಹೆಚ್ಚಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯ ಹೈಕೋರ್ಟ್ ಕೂಡ ಗ್ರಾಮೀಣಾ ಭಾಗಗಳಲ್ಲಿ ಮಕ್ಕಳಿಗೆ ಆನ್‍ಲೈನ್ ತರಗತಿ ಆರಂಭಿಸುವ ಕುರಿತಂತೆ ನಿರ್ದೇಶನ ನೀಡಿತ್ತು. ಅದರಂತೆ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಕೆಲವರು ಬಳಕೆ ಮಾಡುವ ಪದಗಳು, ಸಚಿವರ ನಡುವೆ ಹೊಂದಾಣಿಕೆಯಿಲ್ಲ ಎಂಬುದು, ಸಮನ್ವಯತೆ ಇಲ್ಲ ಎಂಬುದೆಲ್ಲ ಸತ್ಯಕ್ಕೆ ದೂರವಾದ ವಿಚಾರ ಎಂದರು.

ಶಾಲೆಗಳನ್ನು ಆರಂಭಿಸಬೇಕೆಂದು ನಾನು ಹಠ ಮಾಡಿದವನಲ್ಲ. ಪ್ರತಿಯೊಂದು ಹಂತದಲ್ಲೂ ಆರೋಗ್ಯ ಇಲಾಖೆ, ತಾಂತ್ರಿಕ ಸಲಹಾ ಸಮಿತಿ ನೀಡಿರುವ ಶಿಫಾರಸ್ಸುಗಳನ್ನು ಪಾಲನೆ ಮಾಡಿದ್ದೇವೆ. ಕೆಲವರು ಸುಧಾಕರ್ ಮತ್ತು ನನ್ನ ನಡುವೆ ಹೊಂದಾಣಿಕೆ ಇಲ್ಲ ಎಂದು ಹೇಳುತ್ತಿದ್ದಾರೆ. ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಿದ್ದೇವೆ. ನಾನೇನು ಬೆಂಗಳೂರಿನಲ್ಲೇ ಕುಳಿತಿಲ್ಲ. ಗ್ರಾಮೀಣಾ ಪ್ರದೇಶವನ್ನು ಸಹ ನೋಡಬೇಕಾಗಿದೆ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸುಧಾಕರ್ ಮಾತನಾಡಿ, ಶಾಲೆ ಆರಂಭಿಸುವ ವಿಷಯದಲ್ಲಿ ಸರ್ಕಾರದಲ್ಲಾಗಲಿ, ಸಚಿವರ ನಡುವೆ ಯಾವುದೇ ರೀತಿಯ ಗೊಂದಲ ಇಲ್ಲ. ಕೆಲವರು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಏನೇ ನಿರ್ಧಾರ ಕೈಗೊಳ್ಳಬೇಕಾದರೂ ಮುಖ್ಯಮಂತ್ರಿ ಯಡಿಯೂರಪ್ಪ, ತಾಂತ್ರಿಕ ಸಲಹಾ ಸಮಿತಿ ಸೇರಿದಂತೆ ಎಲ್ಲರ ಸಲಹೆ ಪಡೆದೇ ತೀರ್ಮಾನ ಮಾಡುತ್ತಿದ್ದೇವೆ. ನಮ್ಮಲ್ಲಿ ಹೊಂದಾಣಿಕೆ ಇಲ್ಲದಿದ್ದರೆ ಕೋವಿಡ್ ನಿಯಂತ್ರಿಸಲು ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದರು.

ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವ ಕುರಿತಂತೆ ಎಲ್ಲರ ಸಲಹೆಗಳನ್ನು ಪಡೆಯಲಾಗಿದೆ. ಇದರಲ್ಲಿ ಯಾರ ಪ್ರತಿಷ್ಠೆಯೂ ಅಥವಾ ಹಿತಾಸಕ್ತಿಯೂ ಅಡಗಿಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕೆಲವು ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ. ಪ್ರತಿಪಕ್ಷಗಳ ಇದರಲ್ಲೂ ಕೂಡ ಕ್ಷುಲ್ಲಕ ರಾಜಕಾರಣ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.

ಈಗಾಗಲೇ ತೀರ್ಮಾನವಾಗಿರುವಂತೆ ಜ.1ರಿಂದ ಶಾಲಾಕಾಲೇಜುಗಳು ಆರಂಭವಾಗಲಿವೆ. ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಸರ್ಕಾರ ನಿರ್ಧಾರ ಕೈಗೊಂಡಿದೆ. ನನ್ನ ಮತ್ತು ಸುರೇಶ್‍ಕುಮಾರ್ ನಡುವೆ ಯಾವುದೇ ವೈಮನಸ್ಸಿಲ್ಲ. ಇಬ್ಬರು ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದರು.

ತಾಂತ್ರಿಕ ಸಲಹಾ ಸಮಿತಿ ಮೇರೆಗೆ ಕಫ್ರ್ಯೂ ವಿಧಿಸಲು ಸರ್ಕಾರ ತೀರ್ಮಾನಿಸಿದೆ. ರಾತ್ರಿ 11 ಗಂಟೆ ನಂತರ ಬಾರ್, ಪಬ್‍ಗಳಲ್ಲಿ ಹಬ್ಬಹರಿದಿನ ಹೊಸ ವರ್ಷಾಚರಣೆ ವೇಳೆ ಹೆಚ್ಚು ಜನಸಂದಣಿಯನ್ನು ತಡೆಯುವುದು ಸರ್ಕಾರದ ಉದ್ದೇಶವಾಗಿದೆ. 11 ಗಂಟೆ ನಂತರ ಯಾವುದೇ ಚಟುವಟಿಕೆಗಳೂ ಇರುವುದಿಲ್ಲ. ಅದಕ್ಕಾಗಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿದ್ದೇವೆ ಎಂದರು.

ನಾನು, ಸುರೇಶ್‍ಕುಮಾರ್ ಮತ್ತು ಲಕ್ಷ್ಮಣ್ ಸವದಿ ಅವರು ಸಮನ್ವಯತೆಯಿಂದ ಕೆಲಸ ಮಾಡುತ್ತಿದ್ದೇವೆ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸಿಎಂ ಬಳಿ ಚರ್ಚಿಸಿಯೇ ತೀರ್ಮಾನಕ್ಕೆ ಬರುತ್ತೇವೆ. ಇದರಲ್ಲಿ ವೈಯಕ್ತಿಕ ಹಿತಾಸಕ್ತಿ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು. ಸಂಸದ ಡಿ.ಕೆ.ಸುರೇಶ್ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಸುಧಾಕರ್, ಅವರಿಂದ ನನಗೆ ಯಾವುದೇ ಪ್ರಮಾಣ ಪತ್ರ ಬೇಕಿಲ್ಲ. ಅವರ ಹಿನ್ನೆಲೆ ಏನೆಂಬುದು ರಾಜ್ಯದ ಜನತೆಗೆ ಗೊತ್ತಿದೆ. ಅಂಥವರಿಂದ ನಾನು ಯಾವುದನ್ನೂ ನಿರೀಕ್ಷೆ ಮಾಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ನನ್ನ ಕೆಲಸದ ಬಗ್ಗೆ ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಡಿ.ಕೆ.ಸುರೇಶ್ ಅವರಿಂದ ಕಲಿಯಬೇಕಾದದ್ದು ಏನೂ ಇಲ್ಲ. ಅವರ ನಾಲಿಗೆ ಅವರ ಅಭಿರುಚಿಯನ್ನು ತೋರಿಸುತ್ತದೆ ಎಂದು ತಿರುಗೇಟು ನೀಡಿದರು. ಶಾಲೆ ಆರಂಭವಾದ ಬಗ್ಗೆ ನಾನು ಮತ್ತು ಸುರೇಶ್‍ಕುಮಾರ್ ಅವರು ಚರ್ಚೆ ಮಾಡಿಯೇ ಈ ತೀರ್ಮಾನಕ್ಕೆ ಬಂದಿದ್ದೇವೆ. ಇನ್ನೆರಡು ದಿನಗಳ ಕಾಲ ಬೆಳವಣಿಗಳನ್ನು ಅವಲೋಕಿಸಿ ಡಿ.28ರಂದು ಸಭೆ ನಡೆಸಿ ತೀರ್ಮಾಣ ಮಾಡುತ್ತೇವೆ. ಇದರಲ್ಲಿ ತಪ್ಪು ಹುಡುಕುವಂಥದ್ದೇನಿದೆ ಎಂದು ಪ್ರಶ್ನಿಸಿದರು.

ಜನರ ಆರೋಗ್ಯ ಮತ್ತು ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ. ಪ್ರತಿಪಕ್ಷಗಳು ಎಲ್ಲದರಲ್ಲೂ ಹುಳುಕು ಹುಡುಕುವುದು ಬಿಡಲಿ ಎಂದರು.


SHARE THIS

Author:

0 التعليقات: