Friday, 18 December 2020

ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಲಿ : ಎಡಿಜಿಪಿ ಭಾಸ್ಕರ್ ರಾವ್


 ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಲಿ : ಎಡಿಜಿಪಿ ಭಾಸ್ಕರ್ ರಾವ್

ಬೆಂಗಳೂರು, ಡಿ.17- ಬೃಹದಾಕಾರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಕೆಲವು ಭಾಗಗಳಲ್ಲಿ ಕಾರ್ಯನಿರ್ವಹಿಸಲು ಬೇರೆ ಭಾಷೆಗಳನ್ನು ಕಲಿಯಬೇಕಾದಂತಹ ಪರಿಸ್ಥಿತಿ ಇದ್ದು, ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಪರಿಸ್ಥಿತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ನಗರದ ಯುವಕರು ಬೆಂಗಳೂರು ಹೊರವಲಯದ ಪ್ರದೇಶಗಳಲ್ಲಿ ಕನ್ನಡ ಭಾಷೆಯನ್ನು ಮಾತನಾಡುವವರ ಸಂಖ್ಯೆ ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್ ಅಭಿಪ್ರಾಯಪಟ್ಟರು.

ಜಯನಗರದಲ್ಲಿ ಅಖಿಲ ಕರ್ನಾಟಕ ಪುನೀತ್ ರಾಜ್‍ಕುಮಾರ್ ಸಮರ ಸೇನೆಯ ವತಿಯಿಂದ ಆಯೋಜಿಸಲಾಗಿದ್ದ ಜಯನಗರದ ಕನ್ನಡ ನಾಡಹಬ್ಬದಲ್ಲಿ ಪೌರಕಾರ್ಮಿಕರ ಹಾಗೂ ಆಶಾ ಕಾರ್ಯಕರ್ತೆಯರಿಗೆ ರೇಷನ್ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ಬೆಂಗಳೂರು ನಗರ ಬೃಹದಾಕಾರವಾಗಿ ಬೆಳೆಯುತ್ತಿದೆ. ದಿನೇ ದಿನೇ ನಗರದಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ನಗರದ ಕೆಲವು ಪ್ರದೇಶಗಳಲ್ಲಿ ನಮ್ಮ ಕರ್ತವ್ಯ ನಿರ್ವಹಿಸಲು ಬೇರೆ ಭಾಷೆಗಳನ್ನು ಉಪಯೋಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ.

ಈ ಪರಿಸ್ಥಿತಿಯನ್ನು ಬದಲಾಯಿಸಲು ಕನ್ನಡ ಭಾಷಿಕರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಕನ್ನಡ ಹಬ್ಬಗಳನ್ನು ಆಯೋಜಿಸದೇ, ಇತರೆ ಭಾಷಿಗರಲ್ಲಿ ಕನ್ನಡ ಭಾಷೆಯನ್ನು ಕಲಿಸುವಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೋಳ್ಳಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. ಬೆಂಗಳೂರಿನ ಪ್ರತಿ ಇಂಚಿನಲ್ಲೂ ಕನ್ನಡದ ಇಂಪು ಕೇಳಿಬರುವಂತೆ ಆಗಬೇಕು ಎಂದರು.

ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಸ್ಮರಣಾರ್ಥ ಪ್ರಶಸ್ತಿ ವಿತರಿಸಿ ಮಾತನಾಡಿದ ಡಾ.ತೇಜಸ್ವಿನಿ ಅನಂತಕುಮಾರ್, ದಿವಂಗತ ಅನಂತಕುಮಾರ್ ಅವರಿಗೆ ಕನ್ನಡ ಭಾಷೆಯ ಮೇಲೆ ಅಗಾಧ ಪ್ರೀತಿ ಮತ್ತು ಅಭಿಮಾನವಿತ್ತು.

ವಿಶ್ವಸಂಸ್ಥೆಯಲ್ಲೂ ಕನ್ನಡದ ಕಂಪನ್ನು ಪಸರಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಬೆಂಗಳೂರು ನಗರದ ಅಭಿವೃದ್ದಿಯ ಬಗ್ಗೆ ಅಗಾದ ಕನಸನ್ನು ಕಂಡಿದ್ದ ಅವರ ಸ್ಮರಣಾರ್ಥ ಅರ್ಹರಿಗೆ ಪ್ರಶಸ್ತಿಯನ್ನು ನೀಡುತ್ತಿರುವುದು ಬಹಳ ಸಂತದ ವಿಷಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುನೀತ್ ರಾಜ್‍ಕುಮಾರ್ ಸಮರ ಸೇನೆಯ ರಾಜ್ಯಾಧ್ಯಕ್ಷ ಆರ್.ಚಂದ್ರಶೇಖರ್, ಚಲನಚಿತ್ರ ನಟ ಜಯರಾಮ್ ಕಾರ್ತಿಕ್, ವಿಶ್ರಾಂತ ನ್ಯಾಯಮೂರ್ತಿ ಎನ್. ಕುಮಾರ್, ಡಾ .ಅರಳು ಮಲ್ಲಿಗೆ ಪಾರ್ಥಸಾರಥಿ ಮತ್ತಿತರರು ಪಾಲ್ಗೊಂಡಿದ್ದರು.SHARE THIS

Author:

0 التعليقات: