ಚುನಾವಣೆಗಾಗಿ ಹರಕೆ ಹೊತ್ತ ಮೂಡಿಗೆರೆ ಯುವಕ; ಚಪ್ಪಲಿ ಹಾಕದೆ ಏಕಾಂಗಿಯಾಗಿ ಮತಯಾಚನೆ
ಚಿಕ್ಕಮಗಳೂರು (ಡಿ. 21): ಚುನಾವಣೆ ಮುಗಿಯುವವರೆಗೂ ಕಾಲಿಗೆ ಚಪ್ಪಲಿ ಹಾಕುವುದಿಲ್ಲ ಎಂದು ಹರಕೆ ಹೊತ್ತು, ಬರಿಗಾಲಲ್ಲೇ ಏಕಾಂಗಿಯಾಗಿ ಮತಯಾಚನೆ ಮಾಡುವ ಮೂಲಕ ಕಾಫಿನಾಡಲ್ಲಿ ಗ್ರಾಮ ಪಂಚಾಯಿತಿ ಅಭ್ಯರ್ಥಿಯೊಬ್ಬರು ಗಮನ ಸೆಳೆದಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮ ಪಂಚಾಯಿತಿ ಚುನಾವಣಾ ಅಭ್ಯರ್ಥಿ ನವೀನ್ ಹಾವಳಿಯವರ ಚುನಾವಣಾ ಪ್ರಚಾರದ ವೈಖರಿ ಎಲ್ಲರ ಗಮನ ಸೆಳೆದಿದೆ. ಅರೆಕೊಡಿಗೆ ಸಮೀಪದ ಸುಕ್ಲುಮಕ್ಕಿಯ ನವೀನ್ ಹಾವಳಿ ಅವರು ನಿಡುವಾಳೆ ಕ್ಷೇತ್ರದಲ್ಲಿ ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸಿದ್ದು, ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂರು ತಿಂಗಳು ಮೊದಲೇ ಮಂಗಳೂರಿನ ದೇವಸ್ಥಾನವೊಂದರಲ್ಲಿ ಚುನಾವಣೆ ಮುಗಿಯುವವರೆಗೆ ಚಪ್ಪಲಿ ಹಾಕುವುದಿಲ್ಲ ಎಂದು ಹರಕೆ ಹೊತ್ತಿದ್ದು ಬರಿಗಾಲಿನಲ್ಲಿ ಏಕಾಂಗಿಯಾಗಿ ಮತಯಾಚನೆ ಮಾಡುತ್ತಿದ್ದಾರೆ. ಇವರು ಚಪ್ಪಲಿ ಚಿಹ್ನೆಯನ್ನೇ ಚುನಾವಣೆಗೆ ಆರಿಸಿಕೊಂಡಿದ್ದು, ಅಲ್ಲದೇ ಚಿಕ್ಕ ಚಪ್ಪಲಿಯನ್ನು ಸದಾ ತನ್ನ ಬ್ಯಾಗಿಗೆ ಸಿಕ್ಕಿಸಿಕೊಂಡು ಮನೆ-ಮನೆಗೆ ತೆರಳಿ ಚಪ್ಪಲಿ ಗುರುತಿಗೆ ಮತ ನೀಡುವಂತೆ ಮತ ಯಾಚಿಸುತ್ತಿದ್ದಾರೆ. ಮತಯಾಚನೆ ಮಾಡುವಾಗ ಬೆಂಬಲಿಗರನ್ನು ಕರೆದುಕೊಂಡು ಹೋಗದೇ ಏಕಾಂಗಿಯಾಗಿ ಮತಯಾಚನೆ ಮಾಡುತ್ತಿದ್ದಾರೆ.
ಈ ಬಗ್ಗೆ ಮಾತಾನಾಡಿರೋ ಚುನಾವಣೆ ಅಭ್ಯರ್ಥಿ ನವೀನ್ ಹಾವಳಿ, ಚುನಾವಣೆಗೆ ಅಷ್ಟು ಹಣ ಬೇಕು, ಇಷ್ಟು ಹಣ ಬೇಕು ಅಂತಾರೆ. ಆದರೆ, ನಾನು ಯಾರಿಗೂ ಒಂದು ರೂಪಾಯಿ ಖರ್ಚು ಮಾಡದೇ, ಎಣ್ಣೆ ಕುಡಿಸದೇ, ಏಕಾಂಕಿಯಾಗಿ ಹೋರಾಟ ಮಾಡುತ್ತಿದ್ದೇನೆ. ಜನರು ನನ್ನನ್ನು ಬೆಂಬಲಿಸುತ್ತಾರೆಂಬ ಭರವಸೆ ನನಗಿದೆ. ನಾನು ಯಾರನ್ನೂ ಪ್ರಚಾರಕ್ಕೆ ಕರೆಯದೆ ನಾನೊಬ್ಬನೇ ಪ್ರಚಾರ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ನಾನು ಯಾರನ್ನೋ ಸೋಲಿಸಲು ಚುನಾವಣೆಗೆ ನಿಂತಿಲ್ಲ. ನನ್ನ ವ್ಯಕ್ತಿತ್ವದ ಬಗ್ಗೆ ಪರೀಕ್ಷಿಸಿಕೊಳ್ಳಲು ಚುನಾವಣೆಗೆ ನಿಂತಿಲ್ಲ. ನನ್ನನ್ನು ನಾನು ಚೆಕ್ ಮಾಡಿಕೊಳ್ಳಲು ಎಲೆಕ್ಷನ್ಗೆ ನಿಂತಿದ್ದೇನೆ. ನಾನೇ ಗೆಲ್ಲಬೇಕು ಎಂಬ ಅಹಂ ಇಲ್ಲ ಎಂದು ಏಕಾಂಗಿಯಾಗಿ ಓಡಾಡ್ತಿದ್ದೇನೆ. ನಾನು ಇನ್ನೊಬ್ಬ ಅಭ್ಯರ್ಥಿಯ ಬಗ್ಗೆ ಮಾತಾನಾಡುವುದಿಲ್ಲ, ನನಗೆ ಗುರುತು ಪಾದರಕ್ಷೆ, ಇದು ಜೀವನದ ಒಂದು ಹೆಜ್ಜೆಯುದ್ದಕ್ಕೂ ಯೋಚನೆ ಮಾಡಬೇಕಿದೆ. ಪಾದರಕ್ಷೆ ಗುರುತನ್ನು ನಿರ್ಲಕ್ಷಿಸಬೇಡಿ, ದಯವಿಟ್ಟು ನನಗೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ. ಇನ್ನು ನಾನು ಬಡವರು, ಭೂರಹಿತರ ಪರ ನಿಲ್ಲುತ್ತೇನೆಂದು ಪ್ರಮಾಣಿಕರಿಸಿದ್ದಾರೆ.
0 التعليقات: