ಮುಸ್ಲಿಂ ಮತದಾರರು ನಿಮ್ಮ ಆಸ್ತಿ ಅಲ್ಲ! ನಮ್ಮನ್ನು ಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ' ದೀದೀಗೆ ಓವೈಸಿ ತಿರುಗೇಟು
ಹೈದರಾಬಾದ್: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಾತಿನ ತಿರುಗೇಟು ನೀಡಿದ್ದಾರೆ. ನನ್ನನ್ನು ಯಾರೂ ಖರೀದಿ ಮಾಡಲು ಸಾಧ್ಯವಿಲ್ಲ. ಮುಸ್ಲಿಂ ಮತದಾರರೇನು ನಿಮ್ಮ ಆಸ್ತಿ ಅಲ್ಲ ಎಂದು ಓವೈಸಿ ಮಮತಾ ಬ್ಯಾನರ್ಜಿ ಅವರಿಗೆ ಹೇಳಿದ್ದಾರೆ.
ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಲು, ಬಿಜೆಪಿಗೆ ಹೈದರಾಬಾದ್ ಮೂಲದ ಪಕ್ಷವೊಂದು ಸಹಾಯ ಮಾಡುತ್ತದೆ. ಬಿಜೆಪಿ ಆ ಪಕ್ಷಕ್ಕೆ ಹಣದ ಹೊಳೆಯನ್ನೇ ಹರಿಸುತ್ತದೆ ಎಂದು ಮಮತಾ ಬ್ಯಾನರ್ಜಿ ಅವರು ಇತ್ತೀಚೆಗೆ ಹೇಳಿದ್ದರು. ಈ ಮಾತಿನಿಂದಾಗಿ ಸಿಟ್ಟಿಗೆದ್ದಿರುವ ಓವೈಸಿ, ಮಮತಾ ಅವರ ವಿರುದ್ಧ ಕಿಡಿ ಕಾರಿದ್ದಾರೆ. 'ನನ್ನನ್ನು ಮತ್ತು ನನ್ನ ಪಕ್ಷವನ್ನು ಹಣದಿಂದ ಖರೀದಿ ಮಾಡಲು ಪೂರ್ತಿ ವಿಶ್ವದಲ್ಲಿ ಯಾರಿಂದಲೂ ಸಾಧ್ಯವಿಲ್ಲ. ಅಂತಹ ವ್ಯಕ್ತಿ ಈವರೆಗೂ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ. ಮಮತಾ ಅವರು ಇದುವರೆಗೆ ಮಿರ್ ಜಾಫರ್ಸ್ ಮತ್ತು ಸಾದಿಕ್ಗಳೊಂದಿಗೆ ಮಾತ್ರ ವ್ಯವಹರಿಸಿದ್ದಾರೆ. ತಮಗಾಗಿ ಯೋಚಿಸುವ ಮತ್ತು ಮಾತನಾಡುವ ಮುಸ್ಲಿಮರನ್ನು ಅವರು ಇಷ್ಟಪಡುವುದಿಲ್ಲ. ಅವರು ಬಿಹಾರದ ಮತದಾರರನ್ನು ಅವಮಾನಿಸಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.
ಮುಸ್ಲಿಂ ಮತದಾರರು ನಿಮ್ಮ ಆಸ್ತಿಯಲ್ಲ. ಈ ರೀತಿ ಮತ ವಿಭಜಿಸಲು ಬಂದವರಿಗೆ ಯಾವ ಪರಿಸ್ಥಿತಿ ಬಂದಿದೆ ಎನ್ನುವುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಿ. ಮೊದಲು ನಿಮ್ಮ ಪಕ್ಷವನ್ನು ಭದ್ರವಾಗಿಟ್ಟುಕೊಳ್ಳಿ ಎಂದು ಓವೈಸಿ, ಮಮತಾ ಅವರಿಗೆ ಹೇಳಿದ್ದಾರೆ.
0 التعليقات: