Friday, 11 December 2020

ಗೋಹತ್ಯೆ ನಿಷೇಧ ಕಾಯ್ದೆ ವಾಪಾಸಾತಿಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾ.ಗೋಪಾಲಗೌಡ ಸೇರಿ ಚಿಂತಕರ ಆಗ್ರಹ


ಗೋಹತ್ಯೆ ನಿಷೇಧ ಕಾಯ್ದೆ ವಾಪಾಸಾತಿಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾ.ಗೋಪಾಲಗೌಡ ಸೇರಿ ಚಿಂತಕರ ಆಗ್ರಹ

ಬೆಂಗಳೂರು, ಡಿ.11: ವಿಧಾನಸಭೆಯಲ್ಲಿ ಚರ್ಚೆಗೂ ಅವಕಾಶ ಕೊಡದೆ ತರಾತುರಿಯಲ್ಲಿ ಅಂಗೀಕರಿಸಲಾದ ಗೋಹತ್ಯೆ ನಿಷೇಧ ಮಸೂದೆ ರೈತಾಪಿ ಸಮುದಾಯದ ಆರ್ಥಿಕತೆಗೆ ದೊಡ್ಡ ಪೆಟ್ಟು ಕೊಡಲಿದೆ. ಜನತೆಯ ಆಹಾರದ ಹಕ್ಕಿನ ಮೇಲೆ ನಡೆಸಿದ ದಾಳಿಯಾಗಿದ್ದು, ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುವ ಇಂತಹ ಅಪ್ರಜಾಸತಾತ್ಮಕ ಕಾಯ್ದೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಗೋಪಾಲಗೌಡ ಆಗ್ರಹಿಸಿದ್ದಾರೆ.

ಈ ಕುರಿತು ಸೌಹಾರ್ದ ಕರ್ನಾಟಕ ಸಮಿತಿ ಪರವಾಗಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗೋವು ಒಳಗೊಂಡಂತೆ ಜಾನುವಾರುಗಳನ್ನು ರಕ್ಷಿಸಲು ಈಗಾಗಲೇ ಕಾಯ್ದೆ ಇರುವಾಗ, ಅಪ್ರಜಾಸತ್ತಾತ್ಮಕವಾಗಿ ಮತ್ತೊಮ್ಮೆ ಕಾಯ್ದೆಯನ್ನು ತರುವುದರ ಅವಶ್ಯಕತೆ ಏನಿದೆ. ಭಾರತದ ಸಂವಿಧಾನವು ಪ್ರತಿಯೊಬ್ಬ ಭಾರತೀಯ ಪ್ರಜೆಗೆ ಆಹಾರ, ಉಡುಗೆ, ಮತಧರ್ಮ, ಉದ್ಯೋಗ ಮುಂತಾದ ಹಕ್ಕುಗಳ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಿದೆ. ಈಗ ಜಾರಿಗೆ ತರಲು ಉದ್ದೇಶಿಸಿರುವ ಗೋ ಹತ್ಯೆ ನಿಷೇಧ ಮಸೂದೆ ಅಂತಹ ನಾಗರಿಕ ಹಕ್ಕನ್ನು ನಿರ್ಬಂಧಿಸುತ್ತದೆ. ಜಾನುವಾರಿಗೆ ಪ್ರಮಾಣಪತ್ರ ನೀಡುವ ಪೂರ್ಣ ಅಧಿಕಾರವನ್ನು ಅಧಿಕಾರಿಯೊಬ್ಬರಿಗೆ ನೀಡಲಾಗಿದೆ. ಇದು ಅಧಿಕಾರದ ದುರುಪಯೋಗ ಮತ್ತು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡಬಹುದೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕಾಯ್ದೆಯಲ್ಲಿ ಜಾನುವಾರುಗಳನ್ನು ಸಂರಕ್ಷಿಸಲು ಕಾರ್ಯ ನಿರ್ವಹಿಸುವ ವ್ಯಕ್ತಿಗಳ ಮೇಲೆ ಯಾವುದೇ ಕ್ರಮವನ್ನು ವಹಿಸುವಂತಿಲ್ಲ ಎಂದು ನಿಯಮ ಜಾರಿ ಮಾಡಲಾಗಿದೆ. ಇದರಿಂದ ಪಟ್ಟಭದ್ರ ಹಿತಾಸಕ್ತಿಗಳು ಅಮಾಯಕರ ಮೇಲೆ ದಾಳಿ ಮಾಡಲು ಪ್ರೇರಣೆ ಒದಗಿಸುವಂತಹದ್ದಾಗಿದೆ. ಗೋರಕ್ಷಕರೆಂಬ ಹೆಸರಿನಲ್ಲಿ ಯಾರು ಬೇಕಾದರೂ ದಾಳಿಗಳನ್ನು ನಡೆಸಲು ಮುಕ್ತ ಅವಕಾಶ ಕಲ್ಪಿಸಿದ್ದು. ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರಬಲ್ಲದು ಎಂದು ಅವರು ತಿಳಿಸಿದ್ದಾರೆ.

ರೈತರು, ಕಾರ್ಮಿಕರು-ದುಡಿಯುವ ಜನತೆ ಸಂಕಷ್ಟದಲ್ಲಿ ಇರುವಾಗ ಇಂತಹ ಕಾಯ್ದೆಯನ್ನು ತಂದಿರುವುದು ಜನತೆಯ ಗಮನವನ್ನು ಬೇರೆ ದಿಕ್ಕಿಗೆ ಸೆಳೆಯುವ ಪ್ರಯತ್ನವಾಗಿದೆ. ಈ ಕಾಯ್ದೆ ಜಾರಿಯಾದಲ್ಲಿ ಹಾಲು ಹಾಗೂ ಚರ್ಮ, ಮಾಂಸದ ಉದ್ಯಮಗಳನ್ನು ತೀವ್ರವಾಗಿ ಬಾಧಿಸಲಿದೆ. ಈ ಉದ್ಯಮಗಳನ್ನು ಕಾರ್ಪೋರೇಟ್‍ಗಳಿಗೆ ವಹಿಸಿ ಕೊಡಲು ಮಾರ್ಗ ಸೃಷ್ಟಿಸಲಿದೆ. ಉದ್ಯೋಗದ ಮೇಲೂ ಹಾನಿ ತಟ್ಟಲಿದೆ. ಸಮಾಜದ ಸ್ವಾಸ್ತ್ಯಕ್ಕೆ, ಆರ್ಥಿಕತೆಗೂ ಹಾನಿ ತರುವ ಈ ಕಾಯ್ದೆಯನ್ನು ಕೂಡಲೇ ವಾಪಸು ಪಡೆಯಬೇಕೆಂದು ಅವರು ಆಗ್ರಹಿಸಿದ್ದಾರೆ.

ಸೌಹಾರ್ದ ಕರ್ನಾಟಕದ ಪರವಾಗಿ ಹಿರಿಯ ಸಾಹಿತಿಗಳಾದ ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಸುಕನ್ಯಾ ಮಾರುತಿ, ಆರ್.ಜಿ.ಹಳ್ಳಿ ನಾಗರಾಜ್, ಡಾ.ಕೆ.ಶರೀಫಾ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಎಸ್.ವೈ.ಗುರುಶಾಂತ್, ಕೆ.ಎಸ್.ವಿಮಲಾ, ಗುರುರಾಜ ದೇಸಾಯಿ, ದಲಿತ ಹಕ್ಕುಗಳ ಸಮಿತಿಯ ಗೋಪಾಲಕೃಷ್ಣ ಅರಳಹಳ್ಳಿ, ಕಾರ್ಮಿಕ ನಾಯಕರಾದ ಕೆ.ಎನ್.ಉಮೇಶ್, ಪ್ರತಾಪಸಿಂಹ ಮುಂತಾದವರು ಆಗ್ರಹಿಸಿದ್ದಾರೆ.

ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯಲ್ಲಿ ಇದುವರೆಗೂ ಬಜರಂಗದಳ, ಗೋರಕ್ಷಕದಳಗಳಂತಹ ಸಂಘಪರಿವಾರ-ಅದರ ಅಂಗಸಂಸ್ಥೆಗಳು ರಾಜ್ಯದ ಹಲವು ಕಡೆಗಳಲ್ಲಿ ನಡೆಸುತ್ತಾ ಬಂದ ಗೂಂಡಾಗಿರಿ, ಹಿಂಸಾತ್ಮಕ ಪುಂಡಾಟಿಕೆಗಳಿಗೆ ಕಾನೂನಾತ್ಮಕ ಸಂರಕ್ಷಣೆಯನ್ನು ಕೊಡುವಂತಹದ್ದಾಗಿದೆ. ರಾಜ್ಯ ಸರಕಾರದ ಕ್ರಮ ಅತ್ಯಂತ ಅಪಾಯಕಾರಿ ಕ್ರಮವಾಗಿದೆ.


-ನ್ಯಾ.ಗೋಪಾಲಗೌಡ, ನಿವೃತ್ತ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್


SHARE THIS

Author:

0 التعليقات: