Saturday, 12 December 2020

ಪಶ್ಚಿಮ ಬಂಗಾಳದ ಐಪಿಎಸ್​ ಅಧಿಕಾರಿಗಳ ವಿರುದ್ಧ ಕೇಂದ್ರದ ಕ್ರಮ; ರಕ್ಷಣೆ ನೀಡಲು ವಿಫಲವಾದ ಅಧಿಕಾರಿಗಳು ಕೇಂದ್ರ ಸೇವೆಗೆ ನಿಯೋಜನೆ


ಪಶ್ಚಿಮ ಬಂಗಾಳದ ಐಪಿಎಸ್​ ಅಧಿಕಾರಿಗಳ ವಿರುದ್ಧ ಕೇಂದ್ರದ ಕ್ರಮ; ರಕ್ಷಣೆ ನೀಡಲು ವಿಫಲವಾದ ಅಧಿಕಾರಿಗಳು ಕೇಂದ್ರ ಸೇವೆಗೆ ನಿಯೋಜನೆ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ಪಡೆಯ ಮೇಲೆ ಪಶ್ಚಿಮ ಬಂಗಾಳದಲ್ಲಿ ದಾಳಿ ನಡೆದಿರುವ ವಿಚಾರ ಗೊತ್ತೇ ಇದೆ. ರಾಜಕೀಯ ನಾಯಕರ ರಕ್ಷಣೆಯಲ್ಲಿ ಲೋಪ ಮಾಡಿದ ಅಧಿಕಾರಿಗಳ ಮೇಲೆ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ನಡ್ಡಾ ಅವರ ರಕ್ಷಣೆಗೆ ನಿಯೋಜಿಸಲಾಗಿದ್ದ ಮೂರು ಐಪಿಎಸ್​ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ಸಮನ್ಸ್​ ಜಾರಿ ಮಾಡಿದೆ.

ನಡ್ಡಾ ಭೇಟಿಯ ಸಮಯದಲ್ಲಿ ಭದ್ರತೆಯನ್ನು ಏರ್ಪಡಿಸುವ ಜವಾಬ್ದಾರಿಯನ್ನು ಹೊಂದಿದ್ದ ಮೂವರು ಐಪಿಎಸ್ ಅಧಿಕಾರಿಗಳಿಗೆ ಗೃಹ ಸಚಿವಾಲಯ ಕೇಂದ್ರ ಸೇವೆಗೆ ನಿಯೋಜಿಸಿದೆ. ಭೋಲನಾಥ್ ಪಾಂಡೆ (ಎಸ್‌ಪಿ, ಡೈಮಂಡ್ ಹಾರ್ಬರ್), ರಾಜೀವ್ ಮಿಶ್ರಾ (ಎಡಿಜಿ, ದಕ್ಷಿಣ ಬಂಗಾಳ) ಮತ್ತು ಪ್ರವೀಣ್ ತ್ರಿಪಾಠಿ (ಡಿಐಜಿ, ಪ್ರೆಸಿಡೆನ್ಸಿ ರೇಂಜ್) ಅವರನ್ನು ಕೇಂದ್ರ ಡೆಪ್ಯುಟೇಶನ್‌ನಲ್ಲಿ ದೆಹಲಿಗೆ ಕರೆಸಲಾಗಿದೆ.

ಐಪಿಎಸ್ ಕೇಡರ್ ನಿಯಮಗಳ ಪ್ರಕಾರ ರಾಜ್ಯ ಸರ್ಕಾರದ ಒಪ್ಪಿಗೆಯೊಂದಿಗೆ ಕೇಂದ್ರ ಸರ್ಕಾರ ಕೇಡರ್ ಅಧಿಕಾರಿಯನ್ನು ಕೇಂದ್ರ ಸರ್ಕಾರ ಅಥವಾ ಇನ್ನೊಂದು ರಾಜ್ಯ ಸರ್ಕಾರದ ಅಡಿಯಲ್ಲಿ ಸೇವೆಗೆ ನಿಯೋಜಿಸಬೇಕು. ಆದರೆ ಇದೀಗ ಕೇಂದ್ರ ಸರ್ಕಾರವು ಮಮತಾ ಬ್ಯಾನರ್ಜಿ ಅವರ ಸರ್ಕಾರದ ಅನುಮತಿ ಪಡೆಯದೆಯೇ ಈ ನಿರ್ಧಾರ ತೆಗೆದುಕೊಂಡಿದೆ.

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 'ದಾಳಿ ನಡೆದ ಸ್ಥಳದಲ್ಲಿ ಮೂವರು ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಅವರನ್ನು ಕೇಂದ್ರದ ಸೇವೆಗೆ ತೆಗೆದುಕೊಳ್ಳುವ ಮೂಲಕ ನೀವು ಮೂವರು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಬಯಸುತ್ತಿದ್ದೀರಿ ಎನ್ನುವುದು ಸ್ಪಷ್ಟವಾಗಿದೆ. ಕೇಂದ್ರ ಸರ್ಕಾರದಲ್ಲಿ ಎಲ್ಲ ಕಾನೂನುಗಳನ್ನು ಮೂಲೆಗೆ ಸೇರಿಸಲಾಗಿದೆ.' ಎಂದು ಆರೋಪಿಸಿದ್ದಾರೆ.


SHARE THIS

Author:

0 التعليقات: