Saturday, 26 December 2020

ಅರುಣಾಚಲ ಪ್ರದೇಶ: ಪಾಸಿಘಾಟ್‌ ಪುರಸಭೆ ಬಿಜೆಪಿ ತೆಕ್ಕೆಗೆ


ಅರುಣಾಚಲ ಪ್ರದೇಶ: ಪಾಸಿಘಾಟ್‌ ಪುರಸಭೆ ಬಿಜೆಪಿ ತೆಕ್ಕೆಗೆ

ಇಟಾನಗರ: ಬಿಜೆಪಿಯು ಇಲ್ಲಿನ ಪಾಸಿಘಾಟ್‌ ಪುರಸಭೆಯಲ್ಲಿ (ಪಿಎಂಸಿ) ಅಧಿಕಾರದ ಗದ್ದುಗೆ ಏರಿದೆ.ಎಂಟು ಸ್ಥಾನಗಳ ಪೈಕಿ ಆರರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಕಾಂಗ್ರೆಸ್‌ ಪಕ್ಷವು ತೀವ್ರ ಮುಖಭಂಗ ಅನುಭವಿಸಿದೆ. 2013ರ ಚುನಾವಣೆಯಲ್ಲಿ ಏಳು ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ ಈ ಬಾರಿ ಕೇವಲ ಎರಡು ಸ್ಥಾನಗಳನ್ನು ಜಯಿಸಿದೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಅಭ್ಯರ್ಥಿಗಳಷ್ಟೇ ಗೆದ್ದಿದ್ದರು.

ಇಟಾನಗರ ಮಹಾನಗರ ಪಾಲಿಕೆ (ಐಎಂಸಿ) ಚುನಾವಣೆಯಲ್ಲಿ ಇದೇ ಮೊದಲ ಸಲ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಜೆಡಿಯು ಎಂಟು ಸ್ಥಾನಗಳನ್ನು ಗೆದ್ದು ಉತ್ತಮ ಸಾಧನೆ ಮಾಡಿದೆ. 10 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಯು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಅಧಿಕಾರದ ಚುಕ್ಕಾಣಿ ಹಿಡಿಯಲು ಅಗತ್ಯವಿದ್ದ (11 ಸ್ಥಾನ) 'ಮ್ಯಾಜಿಕ್‌ ನಂಬರ್‌' ಗಳಿಸಲು ಪಕ್ಷ ವಿಫಲವಾಗಿದೆ. ಎನ್‌ಪಿಪಿ ಒಂದು ಸ್ಥಾನಕ್ಕೆ ತೃಪ್ತಿಪಟ್ಟಿದೆ. ಕಾಂಗ್ರೆಸ್‌ ಪಕ್ಷವು ಖಾತೆ ತೆರೆಯಲೂ ವಿಫಲವಾಗಿದೆ.

'ಇಟಾನಗರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಐವರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ' ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು 2019ರ ವಿಧಾನಸಭಾ ಚುನಾವಣೆಯಲ್ಲಿ ಏಳು ಸ್ಥಾನಗಳನ್ನು ಜಯಿಸಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈ ಪೈಕಿ ಆರು ಶಾಸಕರು ಶುಕ್ರವಾರ ಪಕ್ಷ ತೊರೆದು ಬಿಜೆಪಿ ಸೇರಿದ್ದರು.

2013ರ ಐಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್‌ 21 ಸ್ಥಾನಗಳನ್ನು ಗೆದ್ದರೆ, ಎನ್‌ಸಿಪಿ ಹಾಗೂ ಬಿಜೆಪಿ ಕ್ರಮವಾಗಿ 4 ಮತ್ತು 3 ಸ್ಥಾನಗಳನ್ನು ಪಡೆದಿದ್ದವು.

'ಹಲವು ಕಾರಣಗಳಿಂದಾಗಿ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಸುಮಾರು ಎರಡು ವರ್ಷ ತಡವಾಗಿತ್ತು. ಜಿಲ್ಲಾ ಪರಿಷತ್‌ನ 142 ಹಾಗೂ ಗ್ರಾಮ ಪಂಚಾಯಿತಿಯ 1,670 ಸ್ಥಾನಗಳಿಗೂ ಚುನಾವಣೆ ನಡೆಸಲಾಗಿದ್ದು, ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲಾ ಪರಿಷತ್‌ನ 96 ಹಾಗೂ ಗ್ರಾಮ ಪಂಚಾಯಿತಿಯ 5,410 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ' ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.SHARE THIS

Author:

0 التعليقات: