ಬಿಹಾರ: ನಕಲಿ ಪೌರತ್ವ ದಾಖಲೆಯೊಂದಿಗೆ ವಾಸವಿದ್ದ ಐವರು ವಿದೇಶಿಯರ ಬಂಧನ
ಕತಿಹಾರ್: ಉತ್ತರ ಬಿಹಾರದಲ್ಲಿ ಪೌರತ್ವಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳೊಂದಿಗೆ ವಾಸವಾಗಿದ್ದ ಅಫ್ಗಾನಿಸ್ತಾನದ ಐವರು ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಗುಲಾಂ ಎಂಬಾತ ಯಾವುದೊ ಕೆಲಸದ ನಿಮಿತ್ತ ಪೊಲೀಸ್ ಠಾಣೆಗೆ ಬಂದಿದ್ದ. ಈ ವೇಳೆ ಆತನ ಗುರುತಿನ ಬಗ್ಗೆ ವಿಚಾರಿಸಿದಾಗ, ತಾನು ಅಫ್ಗಾನಿಸ್ತಾನದ ನಿವಾಸಿ ಎಂಬ ವಿಷಯ ಬಹಿರಂಗಪಡಿಸಿದ್ದಾನೆ ಎಂದು ಕತಿಹಾರ್ ಎಸ್ಡಿಪಿಒ ಅಮರ್ ಕಾಂತ್ ಜಾ ಮಾಹಿತಿ ನೀಡಿದರು.
ಚೌಧರಿ ಮೊಹಲ್ಲಾದಲ್ಲಿರುವ ಬಾಡಿಗೆ ಮನೆಯಲ್ಲಿ ಗುಲಾಂ, ಇತರ ನಾಲ್ವರೊಂದಿಗೆ ವಾಸವಿದ್ದ. ಮಂಗಳವಾರ ಅವರ ಮನೆಗೆ ದಾಳಿ ನಡೆಸಿ, ಗುಲಾಂ ಸೇರಿದಂತೆ ಐವರನ್ನೂ ಬಂಧಿಸಲಾಗಿದೆ. ಅವರ ಬಳಿಯಿದ್ಧ ಪೌರತ್ವ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲಾಯಿತು. ಈ ವೇಳೆ ದಾಖಲೆಗಳು ಮೇಲ್ನೋಟಕ್ಕೆ ನಕಲಿ ಎಂಬುದು ತಿಳಿದುಬಂದಿದೆ ಎಂದು ಅವರು ಹೇಳಿದರು.
ಈ ಐದು ಮಂದಿ ಬಡ್ಡಿ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ. ಗುಪ್ತಚರ ಇಲಾಖೆಗೂ ಪ್ರಕರಣದ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದರು.
ಈ ವಿದೇಶಿಯರು ಪಾಕಿಸ್ತಾನಿ ನುಸುಳುಕೋರರೂ ಆಗಿರುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ಹೇಳಿವೆ.
0 التعليقات: