Wednesday, 30 December 2020

ರೂಪಾಂತರಿತ ಕೊರೋನ ವೈರಸ್:ಪ್ರಯೋಗಾತ್ಮಕ ಚಿಕಿತ್ಸೆಗಳ ವಿವೇಚನಾರಹಿತ ಬಳಕೆಯ ವಿರುದ್ಧ ಐಸಿಎಂಆರ್ ಎಚ್ಚರಿಕೆ


ರೂಪಾಂತರಿತ ಕೊರೋನ ವೈರಸ್:ಪ್ರಯೋಗಾತ್ಮಕ ಚಿಕಿತ್ಸೆಗಳ ವಿವೇಚನಾರಹಿತ ಬಳಕೆಯ ವಿರುದ್ಧ ಐಸಿಎಂಆರ್ ಎಚ್ಚರಿಕೆ

ಹೊಸದಿಲ್ಲಿ,ಡಿ.30: ಕೋವಿಡ್-19ನ್ನು ಗುಣಪಡಿಸಲು ಪ್ರಯೋಗಾತ್ಮಕ ಚಿಕಿತ್ಸೆಗಳ ವಿವೇಚನಾರಹಿತ ಬಳಕೆಯ ವಿರುದ್ಧ ಎಚ್ಚರಿಕೆಯನ್ನು ನೀಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯು,ಅದು ವೈರಸ್‌ನ ತ್ವರಿತ ರೂಪಾಂತರಕ್ಕೆ ಕಾರಣವಾಗಬಹುದು ಎಂದು ತಿಳಿಸಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಸಿಎಂಆರ್ ಮಹಾ ನಿರ್ದೇಶಕ ಬಲರಾಮ್ ಭಾರ್ಗವ ಅವರು,'ಪ್ರತಿರಕ್ಷಣಾ ಒತ್ತಡದಿಂದ ವೈರಸ್‌ನಲ್ಲಿ ಮಾರ್ಪಾಡುಗಳಾಗಬಹುದು. ವೈರಸ್ ಮೇಲಿನ ಪ್ರತಿರಕ್ಷಣಾ ಒತ್ತಡವು ವಾತಾವರಣಕ್ಕೆ,ರೋಗಿಗೆ,ಚಿಕಿತ್ಸೆಗೆ ಅಥವಾ ಇತರ ವಿಧಿವಿಧಾನಗಳಿಗೆ ಸಂಬಂಧಿಸಿರಬಹುದು. ಆದ್ದರಿಂದ ನಾವು ವೈರಸ್‌ನ ಮೇಲೆ ಪ್ರತಿರಕ್ಷಣಾ ಒತ್ತಡವನ್ನುಂಟು ಮಾಡಬಾರದು ಎನ್ನುವುದು ವೈಜ್ಞಾನಿಕ ಸಮುದಾಯದ ಅಭಿಪ್ರಾಯದಲ್ಲಿಯೂ ಮುಖ್ಯವಾಗಿದೆ 'ಎಂದರು

ಪ್ರಯೋಗಾತ್ಮಕ ಚಿಕಿತ್ಸೆಗಳು ವೈರಸ್‌ನ ಮೇಲೆ ಭಾರೀ ಪ್ರತಿರಕ್ಷಣಾ ಒತ್ತಡವನ್ನುಂಟು ಮಾಡುತ್ತವೆ ಮತ್ತು ಇದು ವೈರಸ್ ಹೆಚ್ಚು ರೂಪಾಂತರಗೊಳ್ಳಲು ಕಾರಣವಾಗುತ್ತದೆ. ಹೀಗಾಗಿ ಯಶಸ್ವಿ ಎಂದು ಸಾಬೀತಾದ ಚಿಕಿತ್ಸಾ ಕ್ರಮಗಳನ್ನೇ ಕೋವಿಡ್-19 ಚಿಕಿತ್ಸೆಗೆ ಬಳಸಬೇಕು ಎಂದರು.

ಶೇ.70ರಷ್ಟು ಹೆಚ್ಚು ಸಾಂಕ್ರಾಮಿಕ ಎನ್ನಲಾಗಿರುವ ರೂಪಾಂತರಿತ ಕೊರೋನ ವೈರಸ್ ಬ್ರಿಟನ್‌ನಿಂದ ಆರಂಭಗೊಂಡು ಡಝನ್‌ಗೂ ಅಧಿಕ ದೇಶಗಳಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಭಾರ್ಗವರ ಈ ಹೇಳಿಕೆ ಹೊರಬಿದ್ದಿದೆ. ಭಾರತದಲ್ಲಿ ಈವರೆಗೆ 20 ಜನರಲ್ಲಿ ರೂಪಾಂತರಿತ ಸೋಂಕು ಪತ್ತೆಯಾಗಿದೆ.

ಕೋವಿಡ್-19ರಂತಹ ಶ್ವಾಸಕೋಶ ವೈರಸ್‌ಗಳಲ್ಲಿ ಆಗಾಗ್ಗೆ ಅಲ್ಪ ಮಾರ್ಪಾಡುಗಳು ಆಗಬಹುದು. ಇಂತಹ ಹಲವಾರು ಮಾರ್ಪಾಡುಗಳು ಸಂಭವಿಸಿದರೆ ಅವು ಮುಖ್ಯವಾಗುತ್ತವೆ ಮತ್ತು ಈಗ ಬ್ರಿಟನ್‌ನಲ್ಲಿ ಸಂಭವಿಸಿರುವಂತೆ ಹೆಚ್ಚು ಪ್ರಸರಣ ಶಕ್ತಿಯನ್ನು ಹೊಂದಿರುವ ರೂಪಾಂತರಿ ತಳಿಗಳಾಗುತ್ತವೆ. ನಾವು ಭಾರತದಲ್ಲಿ ವೈರಸ್ ಮಾರ್ಪಾಡುಗಳಿಗಾಗಿ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆಯಾ ದರೂ ಈ ವಿಷಯವು ಕಳವಳಕಾರಿಯಾಗಿದೆ 'ಎಂದು ಭಾರ್ಗವ ಹೇಳಿದರು.

ರೂಪಾಂತರಿತ ಕೊರೋನ ವೈರಸ್ ಅನ್ನು ನಿಭಾಯಿಸಲು ಹೆಚ್ಚಿನ ಬದಲಾವಣೆಗಳ ಅಗತ್ಯವಿಲ್ಲ. ಪ್ರಚಲಿತ ಮುನ್ನೆಚ್ಚರಿಕೆ ಕ್ರಮಗಳೇ ರೂಪಾಂತರಿತ ಕೊರೋನ ವಿಷಯದಲ್ಲಿಯೂ ಕೆಲಸ ಮಾಡುತ್ತವೆ ಎಂದು ತಳಿವಿಜ್ಞಾನ ತಜ್ಞ ಹಾಗೂ ದಿಲ್ಲಿಯ ಕೌನ್ಸಿಲ್ ಆಫ್ ಸೈಂಟಿಫಿಕ್ ಆಯಂಡ್ ಇಂಡಸ್ಟ್ರಿಯಲ್ ರೀಸರ್ಚ್-ಇನ್‌ಸ್ಟಿಟ್ಯೂಟ್ ಆಫ್ ಜೆನೊಮಿಕ್ಸ್ ಆಯಂಡ್ ಇಂಟಿಗ್ರೇಟಿವ್ ಬಯಾಲಜಿಯ ನಿರ್ದೇಶಕ ಡಾ.ಅನುರಾಗ್ ಅಗರವಾಲ್ ಹೇಳಿದರೆ,ರೂಪಾಂತರಿತ ಸೋಂಕಿಗಾಗಿ ಪರೀಕ್ಷೆ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಅಗತ್ಯವಿಲ್ಲ ಎಂದು ದಿಲ್ಲಿಯ ಮಣಿಪಾಲ ಆಸ್ಪತ್ರೆಯ ಕ್ಲಿನಿಕಲ್ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ಡಾ.ನವೀನ ಕುಮಾರ್ ತಿಳಿಸಿದರು.



SHARE THIS

Author:

0 التعليقات: