ಮಹಾಬಲಿಪುರಂ ಮೊಸಳೆ ಪಾರ್ಕ್ನಿಂದ ಲಕ್ಷಾಂತರ ರೂ. ಬೆಲೆ ಬಾಳುವ ಬೃಹತ್ ಆಮೆಯ ಕಳ್ಳತನ
ಚೆನ್ನೈ,ಡಿ.25: ಇಲ್ಲಿಗೆ ಸಮೀಪದ ಮಹಾಬಲಿಪುರಮ್ನಲ್ಲಿರುವ ಮೊಸಳೆ ಪಾರ್ಕ್ನಿಂದ ವಿಶ್ವದಲ್ಲಿ ಎರಡನೇ ಅತಿದೊಡ್ಡ ವರ್ಗಕ್ಕೆ ಸೇರಿದ,ಜಾಗತಿಕ ಮಾರುಕಟ್ಟೆ ಯಲ್ಲಿ ಅಂದಾಜು 10 ಲ.ರೂ.ಗೂ ಹೆಚ್ಚಿನ ಮೌಲ್ಯವುಳ್ಳ ಅಲ್ದಬ್ರಾ ಆಮೆಯನ್ನು ಕಳವು ಮಾಡಲಾಗಿದೆ. ಆರು ವಾರಗಳ ಹಿಂದೆಯೇ ಈ ಘಟನೆ ನಡೆದಿದೆ ಎನ್ನಲಾಗಿದ್ದು,ಈಗ ಬಹಿರಂಗಗೊಂಡಿದೆ.
ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಕಳ್ಳತನದಲ್ಲಿ 'ಒಳಗಿನವರ ' ಕೈವಾಡವನ್ನು ಶಂಕಿಸಿದ್ದಾರೆ. ಪಾರ್ಕ್ನ ಸಿಬ್ಬಂದಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ನ.11 ಮತ್ತು 12ರ ನಡುವಿನ ರಾತ್ರಿಯಲ್ಲಿ ಈ ಕಳ್ಳತನ ನಡೆದಿದೆ ಎಂದು ಶಂಕಿಸಲಾಗಿದೆ. ಕಳ್ಳತನವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗಿದ್ದು,ಕಳ್ಳರು ಪರಿಸರದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗುವುದನ್ನು ತಪ್ಪಿಸಿಕೊಂಡಿದ್ದಾರೆ. ವಿಶೇಷ ತಂಡವೊಂದು ಪ್ರಕರಣದ ತನಿಖೆಯನ್ನು ನಡೆಸುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಇ.ಸುಂದರವದನಂ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಆಮೆಗಳು ಮತ್ತು ಮೊಸಳೆಗಳು ಸೇರಿದಂತೆ ನೂರಾರು ಸರೀಸೃಪಗಳಿರುವ ಮೊಸಳೆ ಪಾರ್ಕ್ ಎಂದೇ ಕರೆಯಲಾಗುವ ಈ ಪಾರ್ಕ್ ಮದ್ರಾಸ್ ಕ್ರೊಕೊಡೈಲ್ ಬ್ಯಾಂಕ್ ಟ್ರಸ್ಟ್ ಸೆಂಟರ್ ಫಾರ್ ಹರ್ಪಿಟಾಲಜಿಯಲ್ಲಿವೆ. ವಿಶ್ವದಲ್ಲಿ ಗಾಲಪ್ಗೊಸ್ ಬಳಿಕ ಅತ್ಯಂತ ದೊಡ್ಡ ಗಾತ್ರದ್ದಾದ,ಅಲ್ದಬ್ರಾ ಜಾತಿಗೆ ಸೇರಿದ ನಾಲ್ಕು ಬೃಹತ್ ಆಮೆಗಳು ಈ ಪಾರ್ಕ್ನಲ್ಲಿದ್ದು,ಅವುಗಳ ಪೈಕಿ ಒಂದನ್ನು ಈಗ ಕಳವು ಮಾಡಲಾಗಿದೆ.
ಭೂಮಿಯಲ್ಲಿ ಅತ್ಯಂತ ದೀರ್ಘಕಾಲ ಬದುಕುವ ಪ್ರಾಣಿಗಳಲ್ಲಿ ಸೇರಿರುವ ಈ ಆಮೆಗಳು ಸುಮಾರು 150 ವರ್ಷಗಳ ಆಯುಷ್ಯವನ್ನು ಹೊಂದಿದ್ದು,1.5 ಮೀ.ಗೂ ಹೆಚ್ಚು ಉದ್ದ ಮತ್ತು 200 ಕೆ.ಜಿ.ವರೆಗೆ ತೂಕವನ್ನು ಹೊಂದಿರುತ್ತವೆ.
ಕಳ್ಳತನವಾಗಿರುವ ಆಮೆಯು 80ರಿಂದ 100 ಕೆಜಿ ತೂಕದ್ದಾಗಿದ್ದು,ಕೇವಲ 50 ವರ್ಷ ಪ್ರಾಯವಾಗಿರಬಹುದು ಎಂದು ಅಂದಾಜಿಸಲಾಗಿದೆ. ಆಮೆಯ ಅಂಗಾಂಗಗಳು ವೈದ್ಯಕೀಯವಾಗಿ ಬಳಕೆಯಾಗುತ್ತವೆ ಎನ್ನಲಾಗಿದ್ದು,ಬಹುಶಃ ಇದೇ ಕಾರಣದಿಂದ ಈ ಕಳ್ಳತನ ನಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
0 التعليقات: