Wednesday, 2 December 2020

ಗಡಿಯಲ್ಲಿ ಕ್ಯಾತೆ ತೆಗೆದ ಚೀನಾಕ್ಕೆ ತಿನ್ನೋ ಅನ್ನಕ್ಕೆ ನಾವೇ ಗತಿ! ಮೊದಲನೇ ಬಾರಿಗೆ ಭಾರತದಿಂದ ಅಕ್ಕಿ ಖರೀದಿಗೆ ಮುಂದಾದ ಚೀನಾ

 

ಗಡಿಯಲ್ಲಿ ಕ್ಯಾತೆ ತೆಗೆದ ಚೀನಾಕ್ಕೆ ತಿನ್ನೋ ಅನ್ನಕ್ಕೆ ನಾವೇ ಗತಿ! ಮೊದಲನೇ ಬಾರಿಗೆ ಭಾರತದಿಂದ ಅಕ್ಕಿ ಖರೀದಿಗೆ ಮುಂದಾದ ಚೀನಾ

ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಬಿಕ್ಕಟ್ಟು ಉಂಟು ಮಾಡಿರುವ ಚೀನಾ ಇದೀಗ ಅನ್ನಕ್ಕಾಗಿ ಭಾರತ ಮೊರೆ ಹೋಗಿದೆ. ವಿದೇಶಗಳಲ್ಲಿ ಅಕ್ಕಿ ಪೂರೈಕೆ ನಿಯಮಗಳು ಕಠಿಣವಾದ ಹಿನ್ನೆಲೆಯಲ್ಲಿ ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳಲು ಚೀನಾ ಮುಂದಾಗಿದೆ.

ಕಳೆದ 30 ವರ್ಷಗಳಲ್ಲಿ ಚೀನಾ ಒಂದು ಬಾರಿಯೂ ಭಾರತದಿಂದ ಅಕ್ಕಿ ಆಮದು ಮಾಡಿಕೊಂಡಿಲ್ಲ. ಇಲ್ಲಿನ ಅಕ್ಕಿ ಗುಣಮಟ್ಟ ಕಳಪೆಯಾಗಿದೆ ಎಂದು ಯಾವಾಗಲೂ ದೂರುತ್ತಿತ್ತು. ಇದೀಗ ಇದೇ ದೇಶದ ಅಕ್ಕಿ ಚೀನಾಕ್ಕೆ ಬೇಕಾಗಿದೆ. ನಮ್ಮ ದೇಶದ ಅಕ್ಕಿಯ ಗುಣಮಟ್ಟದ ಪರಿಚಯ ಆದ ನಂತರ ಮುಂದಿನ ವರ್ಷದಿಂದ ಚೀನಾ ಆಮದು ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಅಕ್ಕಿ ರಫ್ತುದಾರರ ಸಂಸ್ಥೆಯ ಅಧ್ಯಕ್ಷ ಬಿ.ವಿ. ಕೃಷ್ಣರಾವ್ ಹೇಳಿದ್ದಾರೆ.

ವಿಶ್ವದಲ್ಲಿ ಅಕ್ಕಿ ರಫ್ತು ಮಾಡುವವರಲ್ಲಿ ಭಾರತ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಅದೇ ರೀತಿ ಆಮದು ಮಾಡಿಕೊಳ್ಳುವವರಲ್ಲಿ ಚೀನಾ ಅಗ್ರ ಸ್ಥಾನ ಪಡೆದಿದೆ. ಪ್ರತಿ ವರ್ಷ ಸುಮಾರು 4 ಮಿಲಿಯನ್​ ಟನ್​ನಷ್ಟು ಅಕ್ಕಿಯನ್ನು ಚೀನಾ ಆಮದು ಮಾಡಿಕೊಳ್ಳುತ್ತದೆ. ಇಷ್ಟು ವರ್ಷಗಳ ಕಾಲ ಚೀನಾ ಥೈಲ್ಯಾಂಡ್, ವಿಯೆಟ್ನಾಂ, ಮಯನ್ಮಾರ್ ಮತ್ತು ಪಾಕಿಸ್ತಾನ ದೇಶಗಳಿಂದ ಅಕ್ಕಿ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಈ ವರ್ಷ ಈ ಎಲ್ಲ ದೇಶಗಳು ರಫ್ತು ಪ್ರಮಾಣ ಕಡಿಮೆ ಮಾಡಿವೆ. ಜತೆಯಲ್ಲಿ ಭಾರತದ ದರಕ್ಕೆ ಹೋಲಿಸಿದರೆ ಪ್ರತಿ ಟನ್‌ಗೆ ಕನಿಷ್ಠ 30 ಡಾಲರ್‌ನಷ್ಟು ಅಧಿಕ ದರ ವಿಧಿಸುತ್ತಿವೆ. ಅದೇ ಕಾರಣದಿಂದ ಚೀನಾ ಭಾರತದಿಂದ ಅಕ್ಕಿ ಖರೀದಿಗೆ ಮುಂದಾಗಿದೆ.

ಭಾರತದ ವ್ಯಾಪಾರಿಗಳು ಡಿಸೆಂಬರ್‌ನಿಂದ ಫೆಬ್ರವರಿ ಅವಧಿಯಲ್ಲಿ ಪ್ರತಿ ಟನ್‌ಗೆ 300 ಡಾಲರ್ ವೆಚ್ಚದಲ್ಲಿ 1,00,000 ಟನ್‌ಗಳಷ್ಟು ಅಕ್ಕಿಯನ್ನು ರಫ್ತು ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


SHARE THIS

Author:

0 التعليقات: