Wednesday, 9 December 2020

ಇಂಧನ ಬೆಲೆ ಏರಿಕೆ ಬಿಸಿ; ತೆರಿಗೆ ಹೊರೆಯೇ ಅಧಿಕ


ಇಂಧನ ಬೆಲೆ ಏರಿಕೆ ಬಿಸಿ; ತೆರಿಗೆ ಹೊರೆಯೇ ಅಧಿಕ

ಹೊಸದಿಲ್ಲಿ, ಡಿ.9: ಕಳೆದ ಹದಿನೆಂಟು ದಿನಗಳಲ್ಲಿ ಪೆಟ್ರೋಲ್ ಬೆಲೆ ಶೇಕಡ 4 ಮತ್ತು ಡೀಸೆಲ್ ಬೆಲೆ ಶೇಕಡ 5ರಷ್ಟು ಹೆಚ್ಚುವ ಮೂಲಕ ಜನಸಾಮಾನ್ಯರಿಗೆ ಇಂಧನ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ. ಕೋವಿಡ್-19 ಲಸಿಕೆ ಪರೀಕ್ಷೆ ಯಶಸ್ವಿಯಾದ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಬೇಡಿಕೆ ಹೆಚ್ಚುವ ನಿರೀಕ್ಷೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದು ಇದಕ್ಕೆ ಒಂದು ಕಾರಣವಾದರೆ, ಕೇಂದ್ರ ಹಾಗೂ ರಾಜ್ಯ ಸರಕಾರ ವಿಧಿಸುತ್ತಿರುವ ಅಧಿಕ ತೆರಿಗೆ ಗಾಯದ ಮೇಲೆ ಬರೆ ಎಳೆದಿದೆ.

ನವೆಂಬರ್ 20ರಿಂದೀಚಗೆ ಸರಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಬೆಲೆ ಪರಿಷ್ಕರಣೆಯನ್ನು ಮತ್ತೆ ಆರಂಭಿಸಿದಾಗಿನಿಂದ ಗ್ರಾಹಕರ ಮೇಲಿನ ಹೊರೆ ದಿನೇ ದಿನೇ ಹೆಚ್ಚುತ್ತಿದೆ. ಪೆಟ್ರೋಲ್ 2.65 ರೂಪಾಯಿ ಮತ್ತು ಡೀಸೆಲ್ 3.41 ರೂಪಾಯಿನಷ್ಟು ತುಟ್ಟಿಯಾಗಿದ್ದು, ದಿಲ್ಲಿಯಲ್ಲಿ ಕ್ರಮವಾಗಿ ದರ 83.71 ರೂಪಾಯಿ ಮತ್ತು 73.87 ರೂಪಾಯಿ ಇದೆ. ಮುಂಬೈನಲ್ಲಿ ದರ ಅನುಕ್ರವಾಗಿ 90.34 ಮತ್ತು 90.51 ರೂಪಾಯಿ ಇದೆ.

ಕೋವಿಡ್-19 ಲಸಿಕೆ ಜಾಗತಿಕ ಮಾರುಕಟ್ಟೆಯನ್ನು ಮೇಲೆತ್ತಿದ ಬಳಿಕ ಅಂದರೆ ಅಕ್ಟೋಬರ್ 26ರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇಕಡ 1.6ರಷ್ಟು ಹೆಚ್ಚಿ, ಬುಧವಾರ ಪ್ರತಿ ಬ್ಯಾರಲ್‌ಗೆ 48.61 ಡಾಲರ್ ಇತ್ತು. ಇದು ಮಾರ್ಚ್ ಬಳಿಕದ ಅತ್ಯಧಿಕ ದರವಾಗಿದೆ.

ಇಂಧನ ಬೆಲೆಯನ್ನು ಜಾಗತಿಕ ಮಟ್ಟದಲ್ಲಿ ಶುದ್ಧೀಕರಿಸಿದ ಉತ್ಪನ್ನಗಳಿಗೆ ಕಳೆದ 15 ದಿನಗಳಲ್ಲಿ ಇದ್ದ ಬೆಲೆಯ ಸರಾಸರಿ ಬೆಲೆ ಮತ್ತು ಡಾಲರ್ ವಿನಿಮಯ ದರವನ್ನು ಪರಿಗಣನೆಗೆ ತೆಗೆದುಕೊಂಡು ಪಂಪ್ ದರವನ್ನು ಲೆಕ್ಕ ಹಾಕುವುದರಿಂದ ಕಚ್ಚಾತೈಲದ ಬೆಲೆ ಇದೇ ಮಟ್ಟದಲ್ಲಿ ಇದ್ದರೂ, ಮುಂದಿನ ಕೆಲ ದಿನಗಳವರೆಗೆ ಪಂಪ್ ಬೆಲೆ ಏರುಗತಿಯಲ್ಲಿ ಸಾಗುವ ನಿರೀಕ್ಷೆ ಇದೆ.

ಇದೀಗ ಬೆಲೆ ಏರಿಕೆ ಬಿಸಿ ಪ್ರತಿ ಮನೆಗಳನ್ನು ತಟ್ಟುತ್ತಿದ್ದು, ಅಧಿಕ ಇಂಧನ ತೆರಿಗೆ ಪರಿಣಾಮ ಇದನ್ನು ಮತ್ತಷ್ಟು ತೀವ್ರಗೊಳಿಸಿದೆ. ಅಧಿಕ ಅಬಕಾರಿ ಸುಂಕ ಮತ್ತು ವ್ಯಾಟ್ ದರ ಸೇರಿ ಪೆಟ್ರೋಲ್ ಬೆಲೆಯ ಶೇಕಡ 63 ಮತ್ತು ಡೀಸೆಲ್‌ಗೆ ಶೇಕಡ 60ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದರ ಪರಿಣಾಮವಾಗಿ ಪ್ರತಿಬಾರಿ ದರ ಏರಿಕೆಯಾದಾಗಲೂ ತೆರಿಗೆ ಪ್ರಮಾಣವೂ ಅಧಿಕವಾಗುವುದು ಗ್ರಾಹಕರಿಗೆ ನುಂಗಲಾರದ ತುತ್ತಾಗಿದೆ. ನವೆಂಬರ್ 19ರಂದು ದಿಲ್ಲಿಯಲ್ಲಿ 81.06 ರೂಪಾಯಿ ದರದಲ್ಲಿ ಪೆಟ್ರೋಲ್ ಮಾರಾಟವಾಗಿದ್ದು, ಗ್ರಾಹಕರು 51.69 ರೂಪಾಯಿ ತೆರಿಗೆ ಪಾವತಿಸಿದಂತಾಗಿದೆ. ಅದೇ ರೀತಿ ಡೀಸೆಲ್ ದರ 71.46 ರೂಪಾಯಿ ಇದ್ದಾಗ 42.59 ರೂಪಾಯಿ ತೆರಿಗೆ ಪಾವತಿಸುತ್ತಾರೆ.

ಮಾರ್ಚ್ 16 ಮತ್ತು ಮೇ 5ರಂದು ಎರಡು ಬಾರಿ ಕೇಂದ್ರ ಸರಕಾರ ಅಬಕಾರಿ ಸುಂಕವನ್ನು ಪೆಟ್ರೋಲ್‌ಗೆ 13 ರೂಪಾಯಿ ಹಾಗೂ ಡೀಸೆಲ್‌ಗೆ 16 ರೂಪಾಯಿ ಹೆಚ್ಚಿಸಿದೆ.



SHARE THIS

Author:

0 التعليقات: